ಗೋಕಾಕ:ಜಾತ್ರೆ ವಿಶೇಷ : ರಾತ್ರಿ 11 ಘಂಟೆಯಿಂದ ಮುಂಜಾನೆ 8 ಘಂಟೆಯವರೆಗೆ ಜರುಗಿದ ದೇವತೆಯರ ಹೊನ್ನಾಟ

ಜಾತ್ರೆ ವಿಶೇಷ : ರಾತ್ರಿ 11 ಘಂಟೆಯಿಂದ ಮುಂಜಾನೆ 8 ಘಂಟೆಯವರೆಗೆ ಜರುಗಿದ ದೇವತೆಯರ ಹೊನ್ನಾಟ
ಗೋಕಾಕ ಜು 2 : ನಗರದ ಗ್ರಾಮದೇವತೆಯರ ಹೊನ್ನಾಟ ಕಾರ್ಯಕ್ರಮವು ಮಂಗಳವಾರ ರಾತ್ರಿ 11 ಘಂಟೆಗೆ ಪ್ರಾರಂಭಗೊಂಡು ಬುಧವಾರ ಮುಂಜಾನೆ 8 ಘಂಟೆಯವರೆಗೂ ಜರುಗಿತು.
ಅಂಬಿಗೇರ ಗಲ್ಲಿಯಿಂದ ಪ್ರಾರಂಭಗೊಂಡು ಉಭಯ ದೇವಿಯರು ಹೊನ್ನಾಟ ಆಡುತ್ತಾ ಕಿಲ್ಲಾ, ಬನಶಂಕರಿ ಗುಡಿಯ ಸಮೀಪ ಇರುವ ನಿಪ್ಪಾಣಿ, ದೇಶಪಾಂಡೆ, ಚವ್ಹಾಣ, ಮಾಲದಿನ್ನಿ, ಈಗವೆ, ಬಾಣಕರಿ, ವಾಳವಿ ಅವರ ಮನೆಗಳಲ್ಲಿ ಉಡಿ ತುಂಬಿಸಿಕೊಂಡು ಸೋಮವಾರ ಪೇಠೆಯ ಹಿಡಕಲ್ ರಾವಸಾಬ ಮನೆಯ ಅಂಗಳದಲ್ಲಿ ಆಸೀನರಾದರು.
ಹೊನ್ನಾಟದ ಹಿನ್ನೆಲೆ : ಗೋಕಾಕ ಜಾತ್ರೆಯ ಸಂದರ್ಭದಲ್ಲಿ ಗ್ರಾಮದೇವಿಯ ಹೊನ್ನಾಟ ವಿಶೇಷತೆಯನ್ನು ಪಡೆದುಕೊಂಡಿರುತ್ತದೆ. ಈ ಹೊನ್ನಾಟಕ್ಕೂ ಒಂದು ಹಿನ್ನಲೆಯಿದೆ. ತವರು ಮನೆ ಸೇರಿದ ದ್ಯಾಮವ್ವಳನ್ನು ಕರೆಯಲು ರಾಣಿಗ ಹೋದಾಗ ಆತ ಎಷ್ಟೇ ಕರೆದರೂ ದ್ಯಾಮವ್ವ ಆತನ ಜೊತೆಗೆ ಹೋಗಲು ಒಪ್ಪಿಕೊಳ್ಳುವುದಿಲ್ಲ. ಇದ-ರಿಂದಾಗಿ ಕೋಪಗೊಳ್ಳುವ ಆತ ಆಕೆಯ ಮೇಲೆ ಕೆಲವು ಅವಗುಣಗಳನ್ನು ಹೊರಿಸಿ ನಿಂದಿಸಲಾರಂಭಿಸುತ್ತಾನೆ. ಆಗ ಆತನಾಡುವ ಮಾತುಗಳನ್ನು ಕೇಳಿ ಕುಪಿತಳಾಗುವ ಶಾಂತಸ್ವರೂಪಿ ದ್ಯಾಮವ್ವ ಚಂಡಿ, ಚಾಮುಂಡಿ ಹಾಗೂ ದುರ್ಗೆಯ ರೂಪತಾಳಿ ರಾಣಿಗನನ್ನು ಬೆನ್ನಟ್ಟುತ್ತಾಳೆ. ಆಗ ಆಕೆಯಿಂದ ತಪ್ಪಿಸಿಕೊಳ್ಳಲು ರಾಣಿಗ ಹರಸಾಹಸ ಪಡುತ್ತಾನೆ. ಈ ರೀತಿ ದ್ಯಾಮವ್ವ ರಾಣಿಗನನ್ನು ಬೆನ್ನಟ್ಟುವುದೇ ‘ಹೊನ್ನಾಟ’ ಎಂಬ ಪ್ರತೀತಿ ಇದೆ.