ಬೆಳಗಾವಿ:ಬೆಳಗಾವಿ ದಕ್ಷಿಣ ಮತಕ್ಷೇತ್ರದಿಂದ ಎಂ.ಡಿ.ಲಕ್ಷ್ಮೀನಾರಾಯಣ ಸ್ಪರ್ಧೆಗೆ ನೇಕಾರರ ಒತ್ತಾಯ
ಬೆಳಗಾವಿ ದಕ್ಷಿಣ ಮತಕ್ಷೇತ್ರದಿಂದ ಎಂ.ಡಿ.ಲಕ್ಷ್ಮೀನಾರಾಯಣ ಸ್ಪರ್ಧೆಗೆ ನೇಕಾರರ ಒತ್ತಾಯ
ಕಾಶೀಮ ಎಚ್ : ಬೆಳಗಾವಿ
ಬೆಳಗಾವಿ ನ 5: ಬೆಳಗಾವಿ ದಕ್ಷಿಣ ನೇಕಾರ ಪ್ರಾಬಲ್ಯದ ಮತಕ್ಷೇತ್ರವಾಗಿದ್ದು, ಹಿರಿಯ ಕಾಂಗ್ರೆಸಿಗ ಹಾಗೂ ನೇಕಾರ ಸಮಾಜದ ನಾಯಕ ಎಂ.ಡಿ. ಲಕ್ಷ್ಮೀನಾರಾಯಣ ಅವರಿಗೆ ಇಲ್ಲಿಂದ ಸ್ಪರ್ಧೆಗೆ ಒಲವಾದ ಒತ್ತಡ ನೇಕಾರ ಸಮಾಜದವರಿಂದ ಎದುರಾಗಿದೆ. ಕಾಂಗ್ರೆಸ್ ಇಲ್ಲಿ ಪ್ರಬಲ ಅಭ್ಯರ್ಥಿಯ ಕೊರತೆ ಅನುಭವಿಸುತ್ತಿರುವುದರಿಂದ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ನೇಕಾರ ಬಾಂಧವರು ಇಲ್ಲಿರುವುದೇ ಲಕ್ಷ್ಮೀನಾರಾಯಣ ಅವರ ಸ್ಪರ್ಧೆಗೆ ಕಾರಣ.
ಎಂ.ಡಿ.ಲಕ್ಷ್ಮೀನಾರಾಯಣ(ಅಣ್ಣಯ್ಯ) ಮೂಲತಃ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕು ಮುನಿಯೂರು ಗ್ರಾಮದವರು. ವಿದ್ಯಾರ್ಥಿಯಾಗಿರುವಾಗಲೇ ನಾಯಕತ್ವದ ಗುಣ, ಸಮಾಜಸೇವೆ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
1994 ರಲ್ಲಿ ವಿಧಾನಸಭೆಗೆ ಬಿಜೆಪಿಯಿಂದ ತುರುವೇಕೆರೆ ಮತಕ್ಷೇತ್ರದಿಂದ ಸ್ಪರ್ಧಿಸಿ ಕೆಲವೇ ಮತಗಳ ಅಂತರದಿಂದ ಸೋಲು ಕಂಡರು. 1999 ರಲ್ಲಿ ಅದೇ ಮತಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಗೆಲವು ಕಂಡರು. 2008 ರಲ್ಲಿ ಬಿಜೆಪಿ ಸರಕಾರ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಇವರನ್ನು ಮಾಡಿತು. 2013 ರ ವರೆಗೆ ಈ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಲಕ್ಷ್ಮೀನಾರಾಯಣ ಅವರು ಬಿಎಸ್‍ವೈ ಕೆಜೆಪಿ ಕಟ್ಟಿದಾಗ ಆ ಪಕ್ಷಕ್ಕೆ ಸೇರ್ಪಡೆಗೊಂಡರು.
ನಂತರ ನಡೆದ ಬೆಳವಣಿಗೆಗಳಲ್ಲಿ ಬಿಎಸ್‍ವೈ ಬಿಜೆಪಿಗೆ ಮತ್ತೆ ಸೇರ್ಪಡೆಗೊಂಡರೂ ಲಕ್ಷ್ಮೀನಾರಾಯಣರನ್ನು ತಮ್ಮೊಂದಿಗೆ ಕರೆದೊಯ್ಯಲಿಲ್ಲ. ಹೀಗಾಗಿ ಅವರು ಕಾಂಗ್ರೆಸ್ ಸೇರ್ಪಡೆಗೊಂಡರು. 2013 ರಲ್ಲಿ ಸಮಾಜಸೇವಾ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ನಾಮನಿರ್ದೇಶನ ಸದಸ್ಯರನ್ನಾಗಿ ನೇಮಕಗೊಂಡರು.
ರಾಜಕೀಯ ಜೀವನದಲ್ಲಿ ನೇಕಾರ ಸಮಾಜದ ಬಗ್ಗೆ ಇಡೀ ರಾಜ್ಯದಲ್ಲಿ ನಡೆಯುವ ಸಭೆ ಸಮಾರಂಭಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಾ ಬಂದಿದ್ದಾರೆ. ಈ ಹಿಂದೆ ಬೆಳಗಾವಿ ಜಿಲ್ಲೆಯಲ್ಲಿ ನಿವೇಶನರಹಿತ ನೇಕಾರರಿಗೆ ಸೌಲಭ್ಯ ನೀಡಿದರು. ವಸತಿರಹಿತ ನೇಕಾರರಿಗೂ ವಸತಿ ಸೌಲಭ್ಯಕ್ಕಾಗಿ ಹೋರಾಡಿದರು. ನೇಕಾರ ಕೂಲಿಕಾರ್ಮಿಕರ ಪರವಾಗಿ ಅವರಿಗೆ ಹೆಚ್ಚಿನ ಪ್ರಾಧ್ಯಾನತೆ ಸಿಗಲು ಸರಕಾರದ ಮಟ್ಟದಲ್ಲಿ ಹೋರಾಟ ಮಾಡುತ್ತಾ ಬಂದಿದ್ದಾರೆ. ನೇಕಾರರಿಗೆ ವಿದ್ಯುತ್ ಕೊರತೆ ಎದುರಾದಾಗ ಆ ನಿಟ್ಟಿನಲ್ಲಿ ಸರಕಾರದ ಜತೆ ಸಮಸ್ಯೆಗೆ ಸ್ಪಂದಿಸುವಂತೆ ಮನವಿ ಮಾಡುತ್ತಾ ನೇಕಾರ ಪರವಾಗಿರುವ ತಮ್ಮ ಕಳಕಳಿಯನ್ನು ಪ್ರದರ್ಶಿಸಿದರು. ಅಲಾರವಾಡ ನೇಕಾರರ ಸಮಸ್ಯೆಗಾಗಿ ರಾಜ್ಯಮಟ್ಟದಲ್ಲಿ ಹೋರಾಟ ಮಾಡಿದ್ದರು. ಅಧಿವೇಶನದ ವೇಳೆ ನೇಕಾರರ ಸಾಲಮನ್ನಾಕ್ಕಾಗಿ ಸರಕಾರದ ಗಮನಸೆಳೆದಿರುವುದರಿಂದ ಬೆಳಗಾವಿ ದಕ್ಷಿಣದಲ್ಲಿ ಕಾಂಗ್ರೆಸಿಗೆ ಭಾಗ್ಯದ ಬಾಗಿಲು ತೆರೆಯಬಹುದು.
ಪ್ರತಿ ಅಧಿವೇಶನದಲ್ಲಿ ನೇಕಾರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ಪ್ರತಿ ವರ್ಷ ಉಚಿತ ನೇತ್ರದಾನ ಹಾಗೂ ಶಸ್ತ್ರಚಿಕಿತ್ಸೆ ಮಾಡುತ್ತಿದ್ದು, ನ್ಯೂಯಾರ್ಕ್ ಲಯನ್ಸ್ ಕ್ಲಬ್ ಪ್ರಶಸ್ತಿ ನೀಡಿದೆ. ಗುಲ್ಬರ್ಗಾ ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯಗಳು ಈ ಸೇವೆಗೆ ಪ್ರಶಸ್ತಿ ನೀಡಿವೆ. ಇವೆಲ್ಲ ನನ್ನ ಸಮಾಜಸೇವೆಗೆ ಸಂದ ಗೌರವಗಳಾಗಿವೆ ಎನ್ನುತ್ತಾರೆ ಲಕ್ಷ್ಮೀನಾರಾಯಣ.
ಕಳೆದ 30 ವರ್ಷಗಳಿಂದ ನೇಕಾರರು, ಹಿಂದುಳಿದ ವರ್ಗದ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತಾ ಬಂದಿದ್ದೇನೆ. ನನ್ನ ಸಮಾಜಸೇವೆ ಗುರುತಿಸಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನನ್ನನ್ನು ಸಂಪರ್ಕಿಸಿ ಕೆಪಿಸಿಸಿ ಹಿಂದುಳಿದ ವಿಭಾಗ ರಾಜ್ಯಾಧ್ಯಕ್ಷನನ್ನಾಗಿ ಆಯ್ಕೆ ಮಾಡಿ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ರಾಜ್ಯದಲ್ಲಿ ಶೇ. 50 ಕ್ಕಿಂತ ಹೆಚ್ಚು ಹಿಂದುಳಿದವರು ಇರುವುದರಿಂದ ನನ್ನ ಮೊದಲ ಆದ್ಯತೆ ಅವರಿಗೆ ಆಗಿದ್ದು, ಹಿಂದುಳಿದ ವರ್ಗಗಳ ಆಗುಹೋಗುಗಳನ್ನು ಗುರುತಿಸಲು ಹಾಗೂ ಅವರ ಸಮಸ್ಯೆಗಳನ್ನು ಸ್ಪಂದಿಸುವುದು ನನ್ನ ಮೊದಲ ಆದ್ಯತೆ ಎಂದು ತಿಳಿಸಿರುವ ಅವರು, ಬೆಳಗಾವಿಯಲ್ಲಿ ಸ್ಪರ್ಧೆ ನಡೆಸಿದರೆ ಕಾಂಗ್ರೆಸಿಗೆ ಗೆಲವು ಖಚಿತ ಎನ್ನುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ದಕ್ಷಿಣದಲ್ಲಿ 40 ಸಾವಿರ ನೇಕಾರರಿದ್ದಾರೆ. ಸಮಾಜದ ಅಭಿವೃದ್ಧಿ ಹಿತದೃಷ್ಟಿಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ನೇಕಾರ ಸಮಾಜದ ನಾಯಕರ ಕೊರತೆ ಎದ್ದು ಕಾಣುತ್ತಿದೆ. ಇದನ್ನು ಅರಿತ ಸಮಾಜ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೇಕಾರ ಸಮಾಜದವರು ಇರುವುದರಿಂದ ನೇಕಾರ ಸಮುದಾಯಗಳ ರಾಜ್ಯಾಧ್ಯಕ್ಷ ಹಾಗೂ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದಿಂದ ಸ್ಪರ್ಧಿಸಲು ಸಮಾಜದ ಮುಖಂಡರಿಂದ ಒತ್ತಾಯವಿದೆ.
ಎಂ.ಡಿ.ಲಕ್ಷ್ಮೀನಾರಾಯಣ, ಕಾಂಗ್ರೆಸ್ ನಾಯಕ :
ನಾನು ಯಾವುದೇ ಪಕ್ಷದಲ್ಲಿದ್ದರೂ ನಿಷ್ಠಾವಂತ ಕಾರ್ಯಕರ್ತ ಹಾಗೂ ನಾಯಕನಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಅದೇ ವಿಶ್ವಾಸ ಇಟ್ಟು ಕಾಂಗ್ರೆಸ್ ಪಕ್ಷ ಈಗ ದೊಡ್ಡ ಜವಾಬ್ದಾರಿ ನೀಡಿದೆ. ಪಕ್ಷ ಸಂಘಟನೆಗೆ ನಾನು ಹಗಲಿರುಳು ಶ್ರಮಿಸುತ್ತಿದ್ದೇನೆ. 2018 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ನೇಕಾರ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿರುವ ಬೆಳಗಾವಿ ದಕ್ಷಿಣದಲ್ಲಿ ಪಕ್ಷ ಬಯಸಿದರೆ ಮಾತ್ರ ಸ್ಪರ್ಧಿಸುತ್ತೇನೆ. ಮಾತ್ರವಲ್ಲ ಪಕ್ಷ ರಾಜ್ಯದ ಯಾವುದೇ ಮತಕ್ಷೇತ್ರದಿಂದ ಸ್ಪರ್ಧಿಸುವಂತೆ ಸೂಚನೆ ನೀಡಿದರೂ ಅದಕ್ಕೂ ಸಿದ್ದ. ಬೆಳಗಾವಿಯಲ್ಲಿ ನೇಕಾರರ ಸಂಖ್ಯೆ ಹೆಚ್ಚಿರುವುದರಿಂದ ಹಾಗೂ ಈ ಭಾಗದಲ್ಲಿ ನೇಕಾರ ನಾಯಕರ ಕೊರತೆ ಇರುವುದರಿಂದ ಇಲ್ಲಿನ ನೇಕಾರರು ಇಲ್ಲಿ ಸ್ಪರ್ಧಿಗೆ ಅಹ್ವಾನಿಸುತ್ತಿದ್ದಾರೆ.