ಗೋಕಾಕ:ರಕ್ಷಣಾ ಗೋಡೆ ಇಲ್ಲದ ಸೇತುವೆ : ಜನರಲ್ಲಿ ಹೆಚ್ಚಿದೆ ಆತಂಕ
ರಕ್ಷಣಾ ಗೋಡೆ ಇಲ್ಲದ ಸೇತುವೆ : ಜನರಲ್ಲಿ ಹೆಚ್ಚಿದೆ ಆತಂಕ
ಗೋಕಾಕ ಜ 19 : ದಶಕಗಳ ಹಿಂದೆ ನಿರ್ಮಾಣವಾದ ಸೇತುವೆಗೆ ಇಲ್ಲ ತಡೆಗೊಡೆ. ಭಯದಲ್ಲಿ ಸೇತುವೆ ದಾಟುತ್ತಿರುವ ವಾಹನ ಸವಾರರು ಇಂತಹ ಪರಿಸ್ಥಿತಿಯನ್ನು ಗೊಕಾಕ ತಾಲೂಕಿನ ಅವರಾದಿ ಗ್ರಾಮಸ್ಥರು ಎದುರಿಸುತ್ತಿದ್ದಾರೆ. ಘಟಪ್ರಭೆ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಬಾಗಲಕೋಟ ಜಿಲ್ಲೆಯ ಗಡಿ ಗ್ರಾಮಗಳ ಸೇರಿಸುವ ಅವರಾದಿ ಗ್ರಾಮದ ಸೇತುವೆಗೆ ರಕ್ಷಣಾ ತಡೆಗೊಡೆ ಇಲ್ಲದೇ ಪಾದಚಾರಿಗಳು, ವಾಹನ ಸಂಚಾರಿಗಳು ಜೀವ ಕೈಯಲ್ಲಿ ಹಿಡಿದು ಸೇತುವೆ ದಾಟುವಂತಾಗಿದೆ.
ಸೇತುವೆ ನಿರ್ಮಾಣದಲ್ಲಿ ಅಲ್ಲಲ್ಲಿ ನಿರ್ಮಿಸಿದ ಕಾಂಕ್ರೀಟ ರಕ್ಷಣಾ ಕಲ್ಲು (ಗುಟ್ಟಗಲ್ಲು) ಸಂಪೂರ್ಣ ಕಿತ್ತು ಹೋಗಿವೆ. ಸೇತುವೆ ಒಂದೇ ವಾಹನ ದಾಟುವಷ್ಟು ಅಗಲವಿದ್ದು, ಪಾದಚಾರಿಗಳಿಗೆ ಹಾಗೂ ದ್ವಿಚಕ್ರವಾಹನಗಳು ಒಂದು ಗಾಡಿ ದಾಟುವವರೆಗೂ ನಿಲ್ಲಬೇಕಾಗಿದ್ದು, ದ್ವಿಚಕ್ರ ವಾಹನ ಸವಾರ, ಪಾದಚಾರಿ ಸೇತುವೆ ದಾಟುವಷ್ಟರಲ್ಲಿ ಲಘುವಾಹನಗಳು ಬಂದರೆ ತಡೆಗೊಡೆ ಇಲ್ಲದಿರುವದರಿಂದ ಎಲ್ಲಿ ಅಪಯವಾಗುವದೋ ಎಂಬ ಭಯದಲ್ಲಿ ದಾಟಬೇಕಾಗಿದೆ. ರಾತ್ರಿ ವೇಳೆ ಪಾದಚಾರಿಗಳಿಗೆ ಹಾಗೂ ಸೈಕಲ್ ಸವಾರಿ ರೈತರು ತಡೆಗೋಡೆ ಇಲ್ಲದ ಸೇತುವೆ ದಾಟಲು ಹರಸಾಹಸ ಮಾಡುತ್ತಿದ್ದಾರೆ. ಕೂಡಲೇ ಸಂಬಂದಪಟ್ಟ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.