ಗೋಕಾಕ:ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ : ಬೀದಿ ನಾಯಿಗಳ ಉಪಟಳಕ್ಕೆ ಗೋಕಾಕ ಜನ ಕಂಗಾಲು
ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ : ಬೀದಿ ನಾಯಿಗಳ ಉಪಟಳಕ್ಕೆ ಗೋಕಾಕ ಜನ ಕಂಗಾಲು
ಗೋಕಾಕ ಜು 5 : ನಗರದ ನಾನಾ ಕಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು,ಜನಸಾಮಾನ್ಯರು ಒಬ್ಬಂಟಿಯಾಗಿ ಓಡಾಡುವುದು ಕಷ್ಟಕರವಾಗಿದೆ.
ಗಲ್ಲಿ ಗಲ್ಲಿಗಳಲ್ಲಿ ತಿರುಗಾಡುತ್ತಿರುವ ಬೀದಿ ನಾಯಿಗಳ ಹಿಂಡು ವಾಹನ ಸವಾರರ ಮೇಲೆ ದಾಳಿ ಮಾಡುತ್ತಿವೆ. ಕೆಲ ನಾಯಿಗಳು ಬೈಕ್, ಕಾರುಗಳ ಹಿಂದೆ ಓಡಿ ಬರುತ್ತಿರುವ ಪರಿಣಾಮ ವಾಹನ ಸವಾರರು ಆತಂಕ ಪಡಬೇಕಾಗಿದೆ. ರಸ್ತೆಯಲ್ಲಿ ಚಿಕ್ಕ ಮಕ್ಕಳು, ವಯೋವೃದ್ಧರು ಸಂಚಾರ ಮಾಡಲು ಹಿಂದೇಟು ಹಾಕುವಂತಾಗಿದೆ. ರಾತ್ರಿ ವೇಳೆ ವಾರ್ಡ್, ಕಾಲೊನಿ ನಿವಾಸಿಗಳ ನಿದ್ದೆಗೆಡಿಸುತ್ತಿರುವ ಬಿಡಾಡಿ ನಾಯಿಗಳು ಉಪಟಳ ಹೆಚ್ಚಾಗಿದೆ.
ಹಿಡಿಶಾಪ: ಬೀದಿ ನಾಯಿಗಳ ಹಾವಳಿ ತಪ್ಪಿಸುವಂತೆ ನಗರಸಭೆಗೆ ಸ್ಥಳೀಯರು ಮನವಿ ಸಲ್ಲಿಸಿದ್ದಾರೆ. ಆದರೆ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಸಾರ್ವಜನರು ನಗರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದಾರೆ. ಇಲ್ಲಿನ ಅಂಬೇಡ್ಕರ್ ನಗರ, ಗುರುವಾರ ಪೇಠ, ಹೊಸಪೇಟೆ ಗಲ್ಲಿ, ಜಲಾಲಗಲ್ಲಿ, ಕಿಲಾ, ಬಾಂಬೆ ಚಾಳ, ಸೇರಿದಂತೆ ಇತರ ರಸ್ತೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಶಿಂಧೆಕೂಟ ಮಾರ್ಗದ ರಸ್ತೆಗಳಲ್ಲಿ ಮಾಂಸದಂಗಡಿಗಳು ಇವೆ. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೀದಿ ನಾಯಿಗಳು ಕಾಣಿಸುತ್ತವೆ. ಸಾರ್ವಜನಿಕ ಸ್ಥಳ, ಕಸದ ತೊಟ್ಟಿಯಲ್ಲಿ ತ್ಯಾಜ್ಯ ಹಾಕುವುದರಿಂದ ನಾಯಿಗಳು ಚೆಲ್ಲಾಟ ಹೆಚ್ಚಾಗಿದೆ. ನಾಯಿಗಳ ಹಾವಳಿ ತಡೆಯಲು ವರ್ಷದ ಹಿಂದೆಷ್ಟೆ ನಗರಸಭೆ ಅವರು ನಾಯಿಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದರು. ಇದರಿಂದ ಕೆಲ ತಿಂಗಳು ಜನರ ಬೀದಿ ನಾಯಿಗಳ ಕಾಟದಿಂದ ನಗರ ಮುಕ್ತವಾಗಿತ್ತು, ಆದರೆ ದೂರದ ಪ್ರದೇಶದಲ್ಲಿ ಬಿಟ್ಟು ಬಂದ ನಾಯಿಗಳು ಮತ್ತೆ ನಗರ ಪ್ರವೇಶಿಸಿವೆ ಎಂಬ ಶಂಕೆ ವ್ಯಕ್ತವಾಗಿದ್ದು, ನಗರಾದ್ಯಂತ ಬೀದಿ ನಾಯಿಗಳ ಕಾಟ ಮತ್ತೆ ಶುರುವಾಗಿದೆ. ಇದರಿಂದ ಮನೆಗಳ ಮುಂದೆ ಮಕ್ಕಳು ಆಟವಾಡುವುದು ಕಷ್ಟವಾಗಿದೆ.
ಸಂತಾನ ತಡೆ ಚಿಕಿತ್ಸೆ ಮಾಡುವುದರಿಂದ ಬೀದಿ ನಾಯಿಗಳ ಹಾವಳಿ ನಿಯಂತ್ರಣ ಮಾಡಬಹುದು. ಆದರೆ, ಈ ಕಾರ್ಯಕ್ಕೆ ನಗರಸಭೆ ಮುಂದಾಗುತ್ತಿಲ್ಲ. ಆದ್ದರಿಂದ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ.
ಬೀದಿ ನಾಯಿಗಳ ಉಪಟಳಕ್ಕೆ ಜನ ಕಂಗಾಲಾಗಿದ್ದಾರೆ. ನಗರಸಭೆ ಇವುಗಳ ನಿಯಂತ್ರಣ ಮಾಡುವುದಕ್ಕೆ ನಿರ್ಲಕ್ಷ್ಯ ವಹಿಸಿದೆ. ಇದರ ಬಗ್ಗೆ ಸಾರ್ವಜನಿಕರು ಹಲವಾರು ಬಾರಿ ನಗರಸಭೆಗೆ ತಿಳಿಸಿದರು ಸಹ ಯಾವುದೇ ಪ್ರಯೋಜನವಾಗಿಲ್ಲ, ಕೆಲ ತಿಂಗಳ ಹಿಂದೆ ನಗರದ ವಾರ್ಡ ನಂ 20 ಒಬ್ಬ ಮಹಿಳೆಗೆ ನಾಯಿ ದಾಳಿಮಾಡಿ ಗಂಭೀರವಾಗಿ ಗಾಯಗೊಳಿಸಿತ್ತು. ಗುರುವಾರ ಪೇಠೆ, ಲಕ್ಕಡಗಲ್ಲಿ ಸೇರಿದಂತೆ ಇತರ ಪ್ರದೇಶಗಳಲ್ಲಿ ಸಹ ಆಟವಾಡುವ ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ ಪ್ರಕರಣಗಳು ನಡೆದಿವೆ ಇವೆಲ್ಲಾ ವಿಷಯಗಳು ಗೊತ್ತಿದ್ದರು ಸಹ ನಗರಸಭೆ ಅಧಿಕಾರಿಗಳು ಇದರ ಕಡಿವಾಣಕ್ಕೆ ಶಾಶ್ವತ ಕ್ರಮ ಕೈಗೊಳ್ಳದೆ ದಿವ್ಯ ನಿರ್ಲಕ್ಷ್ಯ ವಹಿಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ .
ಇದರ ಬಗ್ಗೆ ಗಂಭೀರ ಚಿಂತನೆ ಮಾಡಿ ಗೋಕಾಕ ನಗರದ ಸಾರ್ವಜನಿಕರು , ವಾಹನ ಸವಾರರು ಮತ್ತು ಮಕ್ಕಳು ನಿರ್ಬಿತವಾಗಿ ನಗರದಲ್ಲಿ ತಿರುಗಾಡುವಂತೆ ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ. ಇದಕ್ಕೆ ಅಧಿಕಾರಿಗಳು ಯಾವ ರೀತಿ ಸ್ವಂದಿಸುತ್ತಾರೆ ಕಾದು ನೋಡಬೇಕು.
ಕೆಲ ತಿಂಗಳಗಳ ಹಿಂದೆ ನಗರಸಭೆ ವತಿಯಿಂದ ಬೀದಿ ನಾಯಿಗಳನ್ನು ಸ್ಥಳಾಂತರ ಮಾಡಲಾಗಿತ್ತು. ಈಗ ಮತ್ತೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ . ಇದರ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಮನವಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿಲಾಗುವುದು. ಸುರಕ್ಷಿತ ಕ್ರಮ ಕೈಗೊಳ್ಳದಿದ್ದರೆ ನಗರಸಭೆ ಅಧಿಕಾರಿಗಳ ವಿರುದ್ಧ ಹೋರಾಟ ಮಾಡಲಾಗುವುದು.
– ಬಸವರಾಜ ಖಾನಪ್ಟನವರ
ಕರವೇ ಅಧ್ಯಕ್ಷರು. ಗೋಕಾಕ