ಗೋಕಾಕ:ರಮೇಶ ಜಾರಕಿಹೊಳಿ ಆಸ್ತಿ ₹72.25 ಕೋಟಿ ಕುಸಿತ: ಕೇಸುಗಳು ಏನೇನಿವೆ

ರಮೇಶ ಜಾರಕಿಹೊಳಿ ಆಸ್ತಿ ₹72.25 ಕೋಟಿ ಕುಸಿತ: ಕೇಸುಗಳು ಏನೇನಿವೆ
ಗೋಕಾಕ ಏ 21 : ಗೋಕಾಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರ ಆಸ್ತಿ ಕಳೆದ ಐದು ವರ್ಷಗಳಲ್ಲಿ ₹72.25 ಕೋಟಿ ಕಡಿಮೆಯಾಗಿದೆ.ಗುರುವಾರ ಅವರು ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ಅಂಶ ಬೆಳಕಿಗೆ ಬಂದಿದೆ.
2018ರಲ್ಲಿ ₹122 ಕೋಟಿ ಆಸ್ತಿ ಘೋಷಿಸಿಕೊಂಡಿದ್ದ ಅವರು, ಈ ಬಾರಿ ₹49.25 ಕೋಟಿ ಆಸ್ತಿ ಹೊಂದಿದ್ದಾಗಿ ನಮೂದಿಸಿದ್ದಾರೆ.ಇಷ್ಟು ದೊಡ್ಡ ಪ್ರಮಾಣದ ಇಳಿಕೆಗೆ ಕಾರಣ ಏನು ಎಂದು ನಮೂದಿಸಿಲ್ಲ
2018ರಲ್ಲಿ ರಮೇಶ ತಮ್ಮ ಜೊತೆಗೆ, ಪತ್ನಿ ಜಯಶ್ರೀ, ಇಬ್ಬರು ಪುತ್ರರಾದ ಅಮರನಾಥ ಹಾಗೂ ಸಂತೋಷ ಅವರ ಆಸ್ತಿ ವಿವರ ನೀಡಿದ್ದರು. ಆದರೆ, ಈ ಬಾರಿ ತಮ್ಮ, ಪತ್ನಿ ಹಾಗೂ ಒಬ್ಬ ಪುತ್ರನ ಆಸ್ತಿ ಮಾತ್ರ ಘೋಷಿಸಿದ್ದಾರೆ. ಇನ್ನೊಬ್ಬ ಪುತ್ರ ಸಂತೋಷ ಆಸ್ತಿ ವಿವರ ನೀಡಿಲ್ಲ.
2013ರ ಚುನಾವಣೆ ವೇಳೆ ಒಟ್ಟು ₹57 ಕೋಟಿ ಆಸ್ತಿ ಘೋಷಿಸಿದ್ದರು. ಈಗ ಘೋಷಿಸಿದ ಆಸ್ತಿ ಅದಕ್ಕಿಂತಲೂ ಕಡಿಮೆ ಆಗಿದೆ. ರಮೇಶ ಅವರ ಕುಟುಂಬದ ಒಡೆತನದ ಸಕ್ಕರೆ ಕಾರ್ಖಾನೆಗಳನ್ನು ನಿರ್ವಹಿಸುತ್ತಿರುವ ಕಿರಿಯ ಪುತ್ರ ಸಂತೋಷ ಜಾರಕಿಹೊಳಿ ಈಗ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಆಸ್ತಿ ಮೊತ್ತ ಕಡಿಮೆ ಆಗಲು ಇದೂ ಒಂದು ಕಾರಣವಾಗಿರಬಹುದು. ಅಮರನಾಥ ಅವರು ತಮ್ಮ ಹೆತ್ತವರೊಂದಿಗೆ ವಾಸಿಸುತ್ತಿದ್ದಾರೆ. ಸಹೋದರರ ನಡುವೆ ಆಸ್ತಿ ಹಂಚಿಕೆಯಾಗಿರುವ ಸಾಧ್ಯತೆ ಇದೆ’ ಎಂದು ಜಾರಕಿಹೊಳಿ ಕುಟುಂಬದ ಆಪ್ತರಾದ ವಕೀಲರೊಬ್ಬರು ಹೇಳಿದರು.
ಪ್ರಕರಣ: ಈ ಅಫಿಡವಿಟ್‌ನಲ್ಲಿ ರಮೇಶ ಜಾರಕಿಹೊಳಿ ತಮ್ಮ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದ ಆರೋಪದ ಒಂದು ಕ್ರಿಮಿನಲ್ ಮೊಕದ್ದಮೆ ಇದೆ ಎಂದು ಉಲ್ಲೇಖಿಸಿದ್ದಾರೆ. ವಿಶೇಷ ತನಿಖಾ ತಂಡವು ಈ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಿದೆ. ಆದರೆ, ಎದುರು ಪಕ್ಷವು ಎಸ್‌ಐಟಿಯ ಸಂವಿಧಾನವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ ಎಂದು ಬರೆದು ಕೊಂಡಿದ್ದಾರೆ.