ಘಟಪ್ರಭಾ:ಬುಧವಾರದಂದು ಮೂಡಲಗಿ ತಾಲೂಕ ಘೋಷಣೆ: ಸಚಿವ ರಮೇಶ ಜಾರಕಿಹೊಳಿ
ಬುಧವಾರದಂದು ಮೂಡಲಗಿ ತಾಲೂಕ ಘೋಷಣೆ: ಸಚಿವ ರಮೇಶ ಜಾರಕಿಹೊಳಿ
ಘಟಪ್ರಭಾ ಅ 10: ಗೋಕಾಕ ಪಾಲ್ಸ್‍ನಿಂದ ಗೋಕಾಕ ಮತಕ್ಷೇತ್ರದ 20 ಹಳ್ಳಿಗಳನ್ನು ಮೂಡಲಗಿ ತಾಲೂಕಿಗೆ ಸೇರಿಸಿ ಒಳ ರಾಜಕೀಯ ಮಾಡಲು ಹೊರಟ ಬಿಜೆಪಿ ಮುಖಂಡ ಅಶೋಕ ಪೂಜಾರಿ ವರ್ತನೆಗೆ ಸಚಿವ ರಮೇಶ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿದರು.
ಅವರು ಮಂಗಳವಾರದಂದು ಪಟ್ಟಣದಲ್ಲಿ ಜಿಪಿಎಲ್ ಕ್ರೀಕೆಟ್ ಪಂದ್ಯಾವಳಿ ಉದ್ಘಾಟನೆಗೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮೂಡಲಗಿ ತಾಲೂಕ ಆಗಬೇಕು ಎನ್ನುವುದು ನನ್ನದು ಆಸೆಯಾಗಿದ್ದು ಅದರಂತೆ ಬುಧವಾರವೇ ಮೂಡಲಗಿಯನ್ನು ನೂತನ ತಾಲೂಕನ್ನಾಗಿ ನಮ್ಮ ರಾಜ್ಯ ಸರಕಾರ ಘೋಷಣೆ ಮಾಡುತ್ತಿದೆ. ಆದರೆ ಮೂಡಲಗಿ ತಾಲೂಕ ಹೊರಾಟ ಸಮಿತಿಯನ್ನು ಸೇರಿಕೊಂಡಿರುವ ಅಶೋಕ ಪೂಜಾರಿ ನನಗೆ ತಿಳಿಯದಂತೆ ನನ್ನ ಕ್ಷೇತ್ರದ 20 ಹಳ್ಳಿಗಳ ಜನರಿಗೆ ತೊಂದರೆ ಮಾಡುವ ಸಲುವಾಗಿ ಗೋಕಾಕ ಪಾಲ್ಸ್, ದುಪದಾಳ, ಸಾವಳಗಿ, ಘೋಡಗೇರಿ, ಮಲ್ಲಾಪೂರ ಪಿ.ಜಿ, ಶಿಂದಿಕುರಬೇಟ, ಪಾಮಲದಿನ್ನಿ ಸೇರಿದಂತೆ ಸುಮಾರು 20 ಹಳ್ಳಿಗಳನ್ನು ಮೂಡಲಗಿ ತಾಲೂಕಿಗೆ ಸೇರಿಸಿ ಗೋಕಾಕ ತಾಲೂಕನ್ನು ಸಂಪೂರ್ಣವಾಗಿ ಚಿಕ್ಕದಾಗಿ ಮಾಡಲು ಪ್ರಯತ್ನಿಸಿದ್ದು ಅದು ನನ್ನ ಗಮನಕ್ಕೆ ಬಂದ ಕೂಡಲೇ ನನ್ನ ಗೋಕಾಕ ಕ್ಷೇತ್ರದ ಜನರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಗೋಕಾಕ ತಾಲೂಕಿನಲ್ಲಿ ಇರಿಸಿಕೊಂಡಿದ್ದೇನೆ. ಅಶೋಕ ಪೂಜಾರಿಯವರು ಚುನಾವಣೆಯಲ್ಲಿ ರಾಜಕೀಯ ಮಾಡಲಿ ಅದನ್ನು ಬಿಟ್ಟು ಒಳಮಾರ್ಗದಲ್ಲಿ ನನ್ನ ಹೆಸರು ಕೆಡಿಸಲು ಪ್ರಯತ್ನಿಸಿದರೆ ನಾನು ಸುಮ್ಮನಿರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಮೂಡಲಗಿ ತಾಲೂಕ ಮಾಡಲು ಮೊದಲು ನನ್ನದು ಏನೂ ಅಭ್ಯಂತರವಿಲ್ಲ. ನನ್ನ ಕ್ಷೇತ್ರ ಮತ್ತು ಕ್ಷೇತ್ರದ ಮತದಾರರು ಮುಖ್ಯವೆಂದು ನಾನು ಸಹೋದರ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಗೆ ಹೇಳಿದ್ದೇನೆ. ಮೂಡಲಗಿ ತಾಲೂಕಾ ಹೋರಾಟ ಸಮಿತಿಯಲ್ಲಿ ಸೇರಿಕೊಂಡವರು ಜನರ ದಾರಿಯನ್ನು ತಪ್ಪಿಸುತ್ತಿದ್ದಾರೆ. ಚುನಾವಣೆಯಲ್ಲಿ ನನ್ನ ವಿರುದ್ಧ ಯಾರು ಬೇಕಾದರೂ ಸ್ಪರ್ಧಿಸಬಹುದು ಅದಕ್ಕೆ ನಾನು ಹೆದರುವುದಿಲ್ಲ. ಆದರೆ ಒಳ ರಾಜಕೀಯ ಮಾಡಬಾರದು ಎಂದು ಸಚಿವರು ಹೇಳಿದರಲ್ಲದೇ ಶೀಘ್ರದಲ್ಲಿಯೇ ಧುಪದಾಳ ಗ್ರಾಮ ಪಂಚಾಯತಿಯನ್ನು ಮಲ್ಲಾಪೂರ ಪಿಜಿ ಪಟ್ಟಣ ಪಂಚಾಯತಿಗೆ ಸೇರ್ಪಡೆ ಮಾಡಿ ಘಟಪ್ರಭಾ ಪುರಸಭೆಯನ್ನಾಗಿ ಮಾಡಲು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಟಿ.ಆರ.ಕಾಗಲ, ಮಡ್ಡೆಪ್ಪ ತೊಳನವರ, ಡಿ.ಎಂ.ದಳವಾಯಿ, ಸುಭಾಸ ಹುಕ್ಕೇರಿ, ಪ್ರಕಾಶ ಡಾಂಗೆ, ಎಂ.ಜಿ.ಮುಚಳಂಬಿ, ಸುಧೀರ ಜೋಡಟ್ಟಿ, ಎಮ್.ಆರ್.ಭಜಂತ್ರಿ ಇದ್ದರು.