RNI NO. KARKAN/2006/27779|Monday, February 17, 2025
You are here: Home » breaking news » ಗೋಕಾಕ:ಶರಣ ಸಂಸ್ಕೃತಿ ಉತ್ಸವ : ಗೋಕಾಕ ನಾಡಿನ ಸಾಂಸ್ಕೃತಿಕ ಹಬ್ಬ

ಗೋಕಾಕ:ಶರಣ ಸಂಸ್ಕೃತಿ ಉತ್ಸವ : ಗೋಕಾಕ ನಾಡಿನ ಸಾಂಸ್ಕೃತಿಕ ಹಬ್ಬ 

ಶರಣ ಸಂಸ್ಕೃತಿ ಉತ್ಸವ : ಗೋಕಾಕ ನಾಡಿನ ಸಾಂಸ್ಕೃತಿಕ ಹಬ್ಬ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 3 :

 

ಕಳೆದ 17 ವರ್ಷಗಳಿಂದ ಗೋಕಾಕ ನಾಡಿನಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಭಾವೈಕತೆಯ ಕ್ರಾಂತಿ ಹಬ್ಬಿಸಿರುವ ಶ್ರೀ ಶೂನ್ಯ ಸಂಪಾದನ ಮಠದ ಲಿ.ಶ್ರೀ ಬಸವ ಮಹಾಸ್ವಾಮಿಗಳ 17ನೇ ಪುಣ್ಯ ಸ್ಮರಣೋತ್ಸವ ನಿಮಿತ್ತ ಇಂದಿನಿಂದ 4 ದಿನಗಳ ಕಾಲ ಜರಗುತ್ತಿರುವ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಈ ಲೇಖನ.

 

ಲೇಖನ : ಸಾದಿಕ ಎಂ ಹಲ್ಯಾಳ.

 

 

ಗೋಕಾವಿ ನಾಡಿನ ಮಾತೃಹೃದಯಿ ಮುರಘರಾಜೇಂದ್ರ ಮಹಾಸ್ವಾಮಿಗಳು 12 ನೇ ಶತಮಾನದಲ್ಲಿ ಶಿವ ಶರಣರು ಲಿಂಗಾಯತ ಧರ್ಮದ ತತ್ವಗಳ ಪ್ರಚಾರದ ಮೂಲಕ ಸರ್ವರ ಕಲ್ಯಾಣ ಬಯಸಿ ಧಾರ್ಮಿಕ ಕ್ರಾಂತಿಯ ಚಳುವಳಿ ಕೈಗೊಂಡ ಬಳಿಕ ಕನ್ನಡ ನಾಡಿನ ಲಿಂಗಾಯತ ಮಠ – ಮಾನ್ಯಗಳು ಭಕ್ತಿ, ಜ್ಞಾನ, ನೀತಿ, ಧರ್ಮ, ವೈರಾಗ್ಯ ಆಗರಗಳಾಗಿ ಮನುಷ್ಯರ ಬದುಕು ಉದಾತ್ತಗೊಳಿಸುವದರಲ್ಲಿ ನಿರತರಾಗಿದ್ದಾರೆ. ಅಲ್ಲದೆ ನಾಡಿನ ಸಾಂಸ್ಕೃತಿಕ, ಸಾಹಿತ್ಯಿಕ, ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ,ಐತಿಹಾಸಿಕ ಚರಿತ್ರೆಗಳಲ್ಲಿಯೂ ಮಠ – ಮಾನ್ಯಗಳ ಪಾತ್ರ ಅತ್ಯಂತ ಹಿರಿದಾಗಿದೆ . ಇಂತಹ ಮಠ – ಮಾನ್ಯಗಳಲ್ಲಿ ಕುಂದಾನಗರಿ ಬೆಳಗಾವಿ ಜಿಲ್ಲೆಯ ಕರದಂಟೂರು ಗೋಕಾಕ ನಗರದ ಶೂನ್ಯ ಸಂಪಾದನ ಮಠವೂ ಒಂದು .

ಕಳೆದ 17 ವರ್ಷಗಳಿಂದ ಲಿಂಗೈಕ್ಯ ಶ್ರೀ ಬಸವ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಪ್ರತಿ ವರ್ಷ ನಾಲ್ಕು ದಿನಗಳ ಕಾಲ “ಶರಣ ಸಂಸ್ಕೃತಿ ಉತ್ಸವ” ವನ್ನು ಸಂಘಟಿಸಿ ಗೋಕಾಕ ನಾಡಿನ ಜನರಿಗೆ ಆಧ್ಯಾತ್ಮದ ಜೊತೆಗೆ ಸಾಮರಸ್ಯದಿಂದ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಬಹುದೊಡ್ಡ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ , ಈಗಿನ ಪೀಠಾಧಿಪತಿ ಪರಮ ಪೂಜ್ಯ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು .
ಸರ್ವ ಧರ್ಮದ ಸಮಾನತೆಗಾಗಿ , ಸರ್ವರ ಏಳ್ಗೆಗಾಗಿ ಗೋಕಾಕದ ಶೂನ್ಯ ಸಂಪಾದನ ಮಠ ತನ್ನದೇ ವಿಶಿಷ್ಠತೆಯ ಬೆಳಕು ನೀಡುತ್ತಿದೆ .ಬಸವಣ್ಣನವರ ತತ್ವ ಸಿದ್ಧಾಂತ ಪ್ರತಿಪಾದಿಸುತ್ತಿರುವ ಶ್ರೀಮಠದ ಇಂದಿನ ಮುರುಘರಾಜೇಂದ್ರ ಶ್ರೀಗಳು ಮುಸ್ಲಿಂ ಸಮುದಾಯದ ಪತ್ರಿ ರಂಜಾನ ತಿಂಗಳ ಇಫ್ತಾರ್ ಕೂಟದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇ ಸಾಕ್ಷಿ ! ಪ್ರತಿ ವರ್ಷ ಶರಣ ಸಂಸ್ಕೃತಿ ಉತ್ಸವದಲ್ಲಿ ಭಾವೈಕ್ಯತೆ ಸಮಾವೇಶವನ್ನು ಸಂಘಟಿಸಿ ಮುಸ್ಲಿಂ ಧರ್ಮ ಗುರುಗಳನ್ನು ಮಠಕ್ಕೆ ಕರೆಯಿಸಿ ಅವರಿಂದ ಭಾವೈಕ್ಯತೆಯ ಸಂದೇಶವನ್ನು ಕೊಡಿಸುತ್ತಿರುವದು ಶ್ರೀ ಮಠದ ಕೀರ್ತಿಯನ್ನು ಉತ್ತಂಗಕ್ಕೆ ಏರಿಸಿದೆ. ಸಾಮಾಜಿಕ , ಧಾರ್ಮಿಕ, ಸಾಹಿತ್ಯಿಕ, ಶೈಕ್ಷಣಿಕ, ಸಾಂಸ್ಕೃತಿಕವಾಗಿ ಶ್ರಮಿಸುತ್ತಿರುವ ನಾಡಿನ ಅಗ್ರ ಶ್ರೇಣಿಯ ಮಠ – ಮಾನ್ಯಗಳ ಹಾಗೂ ಮಹಾನ್ ಶರಣ ಸ್ವಾಮಿಜೀಗಳ ಸಾಲಿನಲ್ಲಿ ಗೋಕಾಕಿನ ಶೂನ್ಯ ಸಂಪಾದನ ಮಠ ಹಾಗೂ ಪೀಠಾಧಿಪಿ ಮಾತೃಹೃದಯಿ ಮುರಘರಾಜೇಂದ್ರ ಮಹಾಸ್ವಾಮಿಗಳು ಒಬ್ಬರಾಗಿ ಪರಿಚಯಿಸಿಕೊಂಡಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.

ಶರಣ ಸಂಸ್ಕೃತಿ ಉತ್ಸವ ಹಾಗೂ ಕಾಯಕಶ್ರೀ ಪ್ರಶಸ್ತಿ : ಪ್ರತಿ ವರ್ಷ ಲಿಂ. ಶ್ರೀ ಬಸವ ಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವ ಅಂಗವಾಗಿ ಪ್ರತಿ ಮಾರ್ಚ
ತಿಂಗಳಿನಲ್ಲಿ ನಾಲ್ಕು ದಿನಗಳ ಕಾಲ ಶರಣ ಸಂಸ್ಕೃತಿ ಉತ್ಸವ ಅತ್ಯಂತ ವಿಜ್ರಂಭನೆಯಿಂದ ಜರುಗುತ್ತದೆ. ಈ ಉತ್ಸವದಲ್ಲಿ ನಾಡಿನ ಹಲವು ವಿದ್ವಾಂಸರನ್ನು ಕರೆಯಿಸಿ ವಿಚಾರ ಸಂಕೀರ್ಣ, ಚಿಂತನ ಗೋಷ್ಠಿ, ಚರ್ಚೆಗಳು, ಮಹಿಳಾ ಮತ್ತು ಮಕ್ಕಳ ಸಾಹಿತ್ಯ ಮೇಳ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಳೆದ 17 ವರ್ಷಗಳಿಂದ ನಡೆಸುತ್ತಾ ಬಂದಿದ್ದಾರೆ. ಈ ಸಂದರ್ಭದಲ್ಲಿ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹೆಸರಾಂತ ಸಾಧಕರನ್ನು ಗುರುತಿಸಿ ” ಕಾಯಕಶ್ರೀ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸುತ್ತಾ ಬಂದಿದ್ದಾರೆ. ಈ ಪ್ರಶಸ್ತಿ ಒಂದು ಲಕ್ಷ ರೂಪಾಯಿ ನಗದು, ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ. ಇಲ್ಲಿಯವರೆಗೆ ನಾಡಿನ ಹಿರಿಯ ಐ.ಪಿ.ಎಸ್ ನಿವೃತ್ತ ಅಧಿಕಾರಿ ಶಂಕರ ಬಿದರಿ , ವಿವಿಧ ವಲಯದಲ್ಲಿ ಛಾಪು ಮೂಡಿಸಿದ ಡಾ.ಪ್ರಭಾಕರ ಕೋರೆ , ಸಮಾನತೆಯ ಹೋರಾಟಗಾರ ಬೀಮರಾವ್ ಮುರಘೋಡ, ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ.ಚಂದ್ರಶೇಖರ್ ಕಂಬಾರ, ಸಮಾಜ ಸುಧಾರಕ ಅಣ್ಣಾ ಹಜಾರೆ, ಚಿತ್ರದುರ್ಗದ ಡಾ.ಮುರಘಾ ಶರಣರು, ಮೇಧಾ ಪಾಟ್ಕರ್, ಖ್ಯಾತ ವಿಜ್ಞಾನಿ ಸಿ.ಎನ್.ಆರ್‌.ರಾವ್, ಖ್ಯಾತ ವಿಜ್ಞಾನಿ ಕ್ಷಿಪಣಿ ಮಹಿಳೆ ಎಂದೇ ಬಿರುದಾಂಕಿತ ಪಡೆದಿರುವ ಡಾ.ಟೇಸ್ಸಿ ಥಾಮಸ್ ಮತ್ತು ಪದ್ಮಭೂಷಣ, ಖ್ಯಾತ ಹಿನ್ನೆಲೆ ಗಾಯಕ ಡಾ ಎಸ್.ಪಿ ಬಾಲಸುಬ್ರಹ್ಮಣ್ಯಂ , ಶ್ರೀಶ್ರೀಶ್ರೀ ರವಿ ಶಂಕರ ಗುರುಜಿ ಅವರಿಗೆ ಕಾಯಕಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪ್ರಸಕ್ತ ಸಾಲಿನ ” ಕಾಯಕಶ್ರೀ ” ಪ್ರಶಸ್ತಿಯನ್ನು ಡಾ ಕಿರಣ ಬೇಡಿ ಅವರಿಗೆ ನೀಡಿ ಗೌರವಿಸಲಿದ್ದಾರೆ. ಪ್ರತಿ ವರ್ಷ ಜರುಗುವ ಶರಣ ಸಂಸ್ಕೃತಿ ಉತ್ಸವದಲ್ಲಿ ವಿವಿಧ ರಂಗಗಳಲ್ಲಿ ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ಗುಂಪುಗಳನ್ನು ಗುರುತಿಸಿ ಸೈನಿಕ ಗೋಷ್ಠಿ, ಭಾವೈಕ್ಯತೆ ಗೋಷ್ಠಿ, ಶಿಕ್ಷಕರ ಗೋಷ್ಠಿ, ರೈತರ ಗೋಷ್ಠಿ, ಮಹಿಳಾ ಗೋಷ್ಠಿ, ಮಕ್ಕಳ ಗೋಷ್ಠಿ , ಯುವ ಗೋಷ್ಠಿ ನಡೆಸಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ಯುವ ಸಮಾವೇಶ , ಮಹಿಳಾ ಸಮಾವೇಶ, ನ್ಯಾಯವಾದಿಗಳ ಸಮಾವೇಶ ಸೇರಿದಂತೆ ಅನೇಕ ಕಾರ್ಯಕ್ರಮಗಳು ಮತ್ತು ಕಾಯಕಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದ್ದು , ಎಲ್ಲ ಸಮಾವೇಶಗಳಲ್ಲಿ ನಾಡಿನ ಖ್ಯಾತನಾಮ ವಿದ್ವಾಂಸರು ಭಾಗವಹಿಸಿ ಚಿಂತನೆಗಳನ್ನು ಹರಿ ಬಿಡಲಿದ್ದಾರೆ. ಅಂತಹ ಮಹಾನ್ ವಿದ್ವಾಂಸರನ್ನು ಗುರುತಿಸಿ , ಗೌರವಿಸಿ ಅವರಿಂದ ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ಕೊಡಿಸಿ ಅವರಂತೆ ಇನ್ನುಳಿದ ಜನರೂ ಮುಂದೆ ಬರಬೇಕು ಎಂಬ ಸದ್ದುದೇಶದಿಂದ ಮುರಘರಾಜೇಂದ್ರ ಶ್ರೀಗಳು ಕಳೆದ 17 ವರ್ಷಗಳಿಂದ ಇಂತಹ ಐತಿಹಾಸಿಕ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬಂದಿದ್ದಾರೆ. ಅವರ ಸಾಮಾಜಿಕ ಕಾಳಜಿಯನ್ನು ಗುರುತಿಸಿ ಈಗಾಗಲೇ ಅವರ ಭಕ್ತವೃಂದ ದವರು ಅವರಿಗೆ ” ಮಾತೃಹೃದಯಿ” ಎಂಬ ಅಭಿನಂದನ ಗ್ರಂಥವನ್ನು ಸರ್ಮಪಿಸಿದ್ದಾರೆ .
ಹೀಗೆ ಸದಾ ಒಂದಿಲ್ಲೊಂದು ಕಾರ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮನ್ನು ಅರಿಸಿ ಶ್ರೀ ಮಠಕ್ಕೆ ಬರುವ ಸದ್ಭಕ್ತರಿಗೆ ಒಳ್ಳೆಯ ಉಪದೇಶ , ಸಂಸ್ಕಾರಗಳನ್ನು ನೀಡುತ್ತಾ ಸದೃಢ ಸಮಾಜವನ್ನು ಕಟ್ಟುವಲ್ಲಿ ನಿರತರಾಗಿರುವ ಪರಮ ಪೂಜ್ಯ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಯುವ ಜನಾಂಗದ ಚೈತನ್ಯ ಶಕ್ತಿಯಾಗಿ ಹೊರ ಹೊಮ್ಮಿದ್ದಾರೆ. ಇವರ ಸಮಾಜಿಕ ಕಾರ್ಯಗಳು ಇನ್ನೂ ಉತ್ತರೊತ್ತರವಾಗಿ ಬೆಳೆಯಲಿ, ಮುಂದೊಂದು ದಿನ ಶ್ರೀ ಮಠದ ಶರಣ ಸಂಸ್ಕೃತಿ ಉತ್ಸವ ಈ ರಾಜ್ಯದ ಉತ್ಸವವಾಗಿ ಹೊರ ಹೊಮ್ಮಲಿ ಎಂದು ಶುಭ ಹಾರೈಸುತ್ತೇನೆ.

Related posts: