ಗೋಕಾಕ:ಕೌಜಲಗಿ ತಾಲೂಕು ಸ್ಥಳವನ್ನಾಗಿ ಘೋಷಿಸಬೇಕು : ಕೌಜಲಗಿ ಗ್ರಾಮಸ್ಥರಿಂದ ಶಾಸಕ ಬಾಲಚಂದ್ರ ಜಾರಕಿಹೊಳಿಗೆ ಮನವಿ
ಕೌಜಲಗಿ ತಾಲೂಕು ಸ್ಥಳವನ್ನಾಗಿ ಘೋಷಿಸಬೇಕು : ಕೌಜಲಗಿ ಗ್ರಾಮಸ್ಥರಿಂದ ಶಾಸಕ ಬಾಲಚಂದ್ರ ಜಾರಕಿಹೊಳಿಗೆ ಮನವಿ
ಗೋಕಾಕ : ತಾಲೂಕಿನ ಕೌಜಲಗಿಯನ್ನು ಹೊಸ ತಾಲೂಕಾ ಕೇಂದ್ರವನ್ನಾಗಿ ಪರಿವರ್ತಿಸುವಂತೆ ಆಗ್ರಹಿಸಿ ನಿಯೋಜಿತ ಕೌಜಲಗಿ ತಾಲೂಕಾ ಹೋರಾಟ ಚಾಲನಾ ಸಮೀತಿಯು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಚಾಲನಾ ಸಮೀತಿಯ ಅಧ್ಯಕ್ಷ ಮಹಾದೇವಪ್ಪ ಭೋವಿ ಮತ್ತು ಪ್ರ.ಕಾರ್ಯದರ್ಶಿ ಡಾ.ರಾಜೇಂದ್ರ ಸಣ್ಣಕ್ಕಿ ಅವರು, ಕೌಜಲಗಿ ತಾಲೂಕಾಗೆ ಆಗ್ರಹಿಸಿ ಕಳೆದ 40 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. 1973 ರಿಂದ ಕೌಜಲಗಿ ತಾಲೂಕು ಆಗಬೇಕೆಂಬುದು ಸುತ್ತಮುತ್ತಲಿನ ಗ್ರಾಮಗಳ ಬಯಕೆಯಾಗಿದೆ.
ಮುಧೋಳ, ರಾಮದುರ್ಗ, ಸವದತ್ತಿ ತಾಲೂಕುಗಳ ತಲಾ 10 ಗ್ರಾಮಗಳನ್ನು ಸೇರಿಸಿ ಕೌಜಲಗಿ ಹೋಬಳಿಯ 36 ಹಳ್ಳಿಗಳನ್ನು ಸೇರಿಸಿ ಕೌಜಲಗಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡುವಂತೆ ಶಾಸಕರನ್ನು ಕೋರಿದರು.
ಕೌಜಲಗಿಯು ತಾಲೂಕಿನಲ್ಲಿ ದೊಡ್ಡ ಪಟ್ಟಣವಾಗಿದ್ದು, ಸರ್ಕಾರಿ ಕಛೇರಿಗಳಿಗೆ ಬೇಕಾದ ಎಲ್ಲ ಜಾಗೆಯನ್ನು ನೀಡಲು ಸಿದ್ಧರಿದ್ದೇವೆ. ಕೌಜಲಗಿ, ಮೆಳವಂಕಿ ಹಾಗೂ ಯಾದವಾಡ ಜಿಲ್ಲಾ ಪಂಚಾಯತಿ ಕ್ಷೇತ್ರದ ಎಲ್ಲ ಹಳ್ಳಿಗಳು, ಕೌಜಲಗಿ ಹೋಬಳಿ, ಸುತ್ತಲಿನ ತಾಲೂಕುಗಳ ಸುಮಾರು 30 ಹಳ್ಳಿಗಳು ಸೇರಿದಂತೆ ಒಟ್ಟು 66 ಹಳ್ಳಿಗಳಿಗೆ ಕೌಜಲಗಿಯು ಕೇವಲ 15 ಕಿ.ಮೀ ಅಂತದಲ್ಲಿರುತ್ತದೆ. ಹೀಗಾಗಿ ತಾಲೂಕು ಕೇಂದ್ರವಾಗಲಿಕ್ಕೆ ಯೋಗ್ಯವಾಗಿದೆ. ಹಿಂದಿನ ವಾಸುದೇವರಾವ್, ಟಿ.ಎಂ. ಹುಂಡೇಕರ ಹಾಗೂ ಗದ್ದಿಗೌಡರ ನೇತೃತ್ವದ ಆಯೋಗಗಳು ಕೌಜಲಗಿ ತಾಲೂಕು ಆಗಲಿಕ್ಕೆ ಅರ್ಹವೆಂದು ಆಗಿನ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದವು ಎಂಬುದನ್ನು ಶಾಸಕರ ಗಮನಕ್ಕೆ ತಂದರು.
ಮೂಡಲಗಿಗೆ ವಿರೋಧವಿಲ್ಲ : ಮೂಡಲಗಿ ತಾಲೂಕು ಕೇಂದ್ರವಾಗಲಿಕ್ಕೆ ನಮ್ಮ ವಿರೋಧವಿಲ್ಲ. ಅದೂ ತಾಲೂಕಾಗಲಿ. ಜೊತೆಗೆ ನಮ್ಮದು ಹೊಸ ತಾಲೂಕಾಗೆ ನಿಮ್ಮ ಸಹಕಾರ ಬೇಕು. ಒಂದುವೇಳೆ ಮೂಡಲಗಿ ತಾಲೂಕಾ ಕೇಂದ್ರವಾದರೆ ಕೌಜಲಗಿ ಹೋಬಳಿಯನ್ನು ಗೋಕಾಕ ತಾಲೂಕಿನಲ್ಲಿ ಮುಂದುವರೆಸಿ. ನಾವು ಮೂಡಲಗಿಗೆ ಸೇರ್ಪಡೆಯಾಗುವುದಿಲ್ಲವೆಂದು ಪ್ರಮುಖರು ಸ್ಪಷ್ಟಪಡಿಸಿದರು. ಗೋಕಾಕ ತಾಲೂಕಿನ ಮೂಡಲಗಿ ಹಾಗೂ ಕೌಜಲಗಿಯನ್ನು ಹೊಸ ತಾಲೂಕು ಕೇಂದ್ರವನ್ನಾಗಿ ಮಾಡಿ ಗೋಕಾಕನ್ನು ಹೊಸ ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಶಾಸಕರು ಪ್ರಯತ್ನಿಸಬೇಕೆಂದು ಮನವಿ ಮಾಡಿದರು.
ಚಾಲನಾ ಸಮೀತಿ ಪ್ರಮುಖರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.
ಚಾಲನಾ ಸಮೀತಿ ಕಾರ್ಯಾಧ್ಯಕ್ಷ ಅಶೋಕ ಪರುಶೆಟ್ಟಿ, ಪ್ರಮುಖರಾದ ಸುಭಾಸ ಕೌಜಲಗಿ, ಮಕ್ತುಮಸಾಬ ಖಾಜಿ, ರಮಜಾನ್ ಪೋದಿ, ಬಸನಗೌಡ ಪಾಟೀಲ, ಪರ್ವತಗೌಡ ಪಾಟೀಲ, ಗುರುರಾಜ ಪಾಟೀಲ, ತಾಪಂ ಸದಸ್ಯರಾದ ಶಾಂತಪ್ಪ ಹಿರೇಮೇತ್ರಿ, ರಮೇಶ ಗಡಗಿ ಹಾಗೂ ಚಾಲನಾ ಸಮೀತಿ ಪ್ರಮುಖರು ಉಪಸ್ಥಿತರಿದ್ದರು.