ಘಟಪ್ರಭಾ:ಮಕ್ಕಳೆಂದರೆ ದೇವರು ಅಂತ ಭಾವಿಸಿ : ಬೀಳ್ಕೋಡುವ ಸಮಾರಂಭದಲ್ಲಿ ಎ.ಸಿ.ಮನ್ನಿಕೇರಿ ಅಭಿಮತ
ಮಕ್ಕಳೆಂದರೆ ದೇವರು ಅಂತ ಭಾವಿಸಿ : ಬೀಳ್ಕೋಡುವ ಸಮಾರಂಭದಲ್ಲಿ ಎ.ಸಿ.ಮನ್ನಿಕೇರಿ ಅಭಿಮತ
ಘಟಪ್ರಭಾ ಸೆ 8: ಮಕ್ಕಳೆಂದರೆ ದೇವರು ಅಂತ ಭಾವಿಸಿ ಅವರ ವಿದ್ಯಾಭ್ಯಾಸದ ಬಗ್ಗೆ ವಿದ್ಯಾ ಸಂಸ್ಥೆಗಳು ಹೆಚ್ಚಿನ ಕಾಳಜಿ ವಹಿಸಿಸಬೇಕೆಂದು ಮೂಡಲಗಿ ವಲಯದ ನಿರ್ಗಮಿತ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ.ಮನ್ನಿಕೇರಿ ಹೇಳಿದರು.
ಅವರು ಮೂಡಲಗಿ ವಲಯದಿಂದ ಬೇರೆಯಡೆ ವರ್ಗಾವಣೆಗೊಂಡ ಪ್ರಯುಕ್ತ ಸ್ಥಳೀಯ ಶ್ರೀ ಸಿದ್ಧಿವಿನಾಯಕ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಕನ್ನಡ ಸೇನೆ ಕರ್ನಾಟಕ”ದ ಪದಾಧಿಕಾರಿಗಳಿಂದ ಏರ್ಪಡಿಸಿದ್ದ, ಬೀಳ್ಕೋಡುವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು, ಶಿಕ್ಷಕರು ಮತ್ತು ಪಾಲಕರು ಮಕ್ಕಳ ಪ್ರತಿಯೊಂದು ವಿಷಯದ ಬಗ್ಗೆ ಪರಶೀಲಿಸಬೇಕು. ತಮ್ಮ ಮಗು ಸರಿಯಾದ ಮಾರ್ಗದಲ್ಲಿ ಸಾಗುತ್ತಿದೆಯೋ ಅಥವಾ ಇಲ್ಲೋ ಅಂತ ಮನದಟ್ಟು ಮಾಡುತ್ತಾ ಕಾಲ ಕಾಲಕ್ಕೆ ಆ ಮಗುವಿಗೆ ಮಾರ್ಗದರ್ಶನ ಮಾಡಿದರೆ, ಮಗು ಭವಿಷ್ಯದಲ್ಲಿ ಉತ್ತಮ ನಾಗರಿಕನಾಗುತ್ತಾನೆಂದರು.
ಕನ್ನಡ ಸೇನೆಯ ಜಿಲ್ಲಾ ಉಪಾಧ್ಯಕ್ಷ ಮತ್ತು ಶಾಲೆಯ ಮುಖ್ಯೋಪಾಧ್ಯಾಯರಾದ ಆರ್.ಬಿ.ಜಿರಲಿ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ಅನೇಕ ವರ್ಷಗಳಿಂದ ಮೂಡಲಗಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಎ.ಸಿ.ಮನ್ನಿಕೇರಿಯವರ ಸೇವೆ ಅಮೋಘವಾದದ್ದು. ಅವರ ಅವಧಿಯಲ್ಲಿ ಈ ವಲಯವು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆಂದರು.
ಈ ಸಂದರ್ಭದಲ್ಲಿ ಕನ್ನಡ ಸೇನೆಯ ತಾಲೂಕಾಧ್ಯಕ್ಷ ಅಪ್ಪಾಸಾಬ ಮುಲ್ಲಾ, ಸಿ.ಆರ್.ಪಿ.ಗಳಾದ ಕೆ.ಟಿ.ಪಾಟೀಲ್, ರತ್ನಾ ಜೇಕೋಬ್, ಅರುಣ ಸೌಸುದ್ದಿ, ಸಾದಿಕ ಪಚ್ಛಾಪೂರ, ಬಸವರಾಜ ಪುರಾಣಿಕ ಸೇರಿದಂತೆ ಅನೇಕರು ಕಾರ್ಯಕರ್ತರು ಮತ್ತು ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.
ಕನ್ನಡ ಸೇನೆಯ ಜಿಲ್ಲಾ ಕಾರ್ಯಾಧ್ಯಕ್ಷ ಮತ್ತು ಪ.ಪಂ. ಸದಸ್ಯ ನಾಗರಾಜ ಚಚಡಿ ನಿರೂಪಿಸಿದರು, ತಾಲೂಕಾ ಉಪಾಧ್ಯಕ್ಷರಾದ ಡಾ|| ರಾಘವೇಂದ್ರ ಪತ್ತಾರ ಸ್ವಾಗತಿಸಿ, ವಂದಿಸಿದರು.