ಗೋಕಾಕ:ನೆರೆ ಸಂತ್ರಸ್ತರ ಮನೆ ಕಟ್ಟಡದ ಪರಿಹಾರ ನಿಧಿ ಕೂಡಲೇ ನೀಡಿ : ಅಶೋಕ ಪೂಜಾರಿ ಒತ್ತಾಯ
ನೆರೆ ಸಂತ್ರಸ್ತರ ಮನೆ ಕಟ್ಟಡದ ಪರಿಹಾರ ನಿಧಿ ಕೂಡಲೇ ನೀಡಿ : ಅಶೋಕ ಪೂಜಾರಿ ಒತ್ತಾಯ
ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ಅ : 19
ರಾಜ್ಯ ಸರಕಾರ ನೆರೆ ಸಂತ್ರಸ್ಥ ಪ್ರದೇಶಗಳ ಹಿಂದಿನ ಸಾಲೀನ ಮನೆ ಕಟ್ಟಡದ ಪರಿಹಾರ ನಿಧಿಯನ್ನು ಕೂಡಲೇ ನೀಡಲು ಕ್ರಮ ಕೈಗೊಳ್ಳಬೇಕೆಂದು ಜೆ.ಡಿ.ಎಸ್. ಮುಖಂಡ ಅಶೋಕ ಪೂಜಾರಿ ಒತ್ತಾಯಿಸಿದ್ದಾರೆ.
ನಗರದಲ್ಲಿ ಈ ಕುರಿತು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ನೆರೆ ಹಾವಳಿಗೆ ತುತ್ತಾಗುವ ಪ್ರದೇಶಗಳ ಜನರ ಮನೆ ನಿರ್ಮಾಣಕ್ಕೆ ಕಳೆದ ಸಾಲಿನಲ್ಲಿ 5 ಲಕ್ಷ ರೂಪಾಯಿಗಳ ಪರಿಹಾರ ನಿಧಿಯನ್ನು ಘೋಷಿಸಿದ್ದ ರಾಜ್ಯ ಸರಕಾರ 1 ವರ್ಷದ ಅವಧಿ ಗತಿಸಿದ್ದರೂ ಸಹ ಇನ್ನೂವರೆಗೆ ಅದರಲ್ಲಿಯ ಅರ್ಧದಷ್ಟು ಪರಿಹಾರವನ್ನೂ ನೀಡಿಲ್ಲ. ಕಟ್ಟಡ ನಿರ್ಮಾಣದ ಅರ್ಧ ಹಂತದಲ್ಲಿದ್ದ ಬಹುತೇಕ ಮನೆಗಳು ಈ ಸಲದ ನೆರೆ ಹಾವಳಿಗೆ ತುತ್ತಾಗಿ ಮತ್ತೆ ನೆಲಸಮವಾಗುತ್ತಿದ್ದು, ಇದು ಸರಕಾರದ ಮುಂದಾಲೋಚನೆ ಇಲ್ಲದ ಕಾರ್ಯವಾಗಿದ್ದು, ಬದ್ಧತೆಯ ಕೊರತೆಯನ್ನು ಎತ್ತಿ ತೋರಿಸುತ್ತಿದ್ದೆ ಎಂದು ಸರಕಾರದ ನಿಷ್ಕ್ರೀಯ ಮನೋಭಾವನೆಯನ್ನು ಕಟುವಾಗಿ ಟೀಕಿಸಿದ್ದಾರೆ.
ರಾಜ್ಯದ ತುಂಬೆಲ್ಲ ಕರೋನಾ ಆರ್ಭಟ ಜನರನ್ನು ತಲ್ಲಣಗೊಳಿಸಿದ್ದು, ಬಹುತೇಕ ಸಂಘ ಸಂಸ್ಥೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ನೆರೆ ಸಂತ್ರಸ್ಥರಿಗೆ ನೆರವಾಗುವ ಮನಸ್ಥಿತಿಯಲ್ಲಿದ್ದರೂ ಸಹ ಕರೋನಾ ರೋಗದ ಸೋಂಕಿಗೆ ಹೆದರಿ ಅವರೂ ಸಹ ನಿಷ್ಕ್ರೀಯರಾಗುವಂತಹ ಸಂದಿಗ್ಧ ಸ್ಥಿತಿ ನಿರ್ಮಾಣವಾಗಿದ್ದು, ಈ ಸಂದರ್ಭದಲ್ಲಿ ಸರಕಾರದ ಮತ್ತು ಸರಕಾರಿ ಅಧಿಕಾರಿಗಳ ಹೊಣೆಗಾರಿಕೆ ಮಹತ್ತರದಾಗಿದೆ ಎಂದು ಹೇಳಿದ್ದಾರೆ.
ಕರೋನಾ ರೋಗದ ಬೀಕರತೆ ಹಾಗೂ ಸತತ ಎರಡನೆ ವರ್ಷದ ಪ್ರವಾಹಕ್ಕೆ ಇಡಾಗಿರುವ ಜನತೆಗೆ ಸ್ಪಂಧಿಸಬೇಕಾದ ಗೋಕಾಕ ತಾಲೂಕಿನವರೇಯಾದ ಜಿಲ್ಲಾ ಉಸ್ತುವಾರಿ ಸಚಿವರು ಇಂತಹ ಸಂದಿಗ್ಧ ಸಮಯದಲ್ಲಿ ರಾಜಕೀಯ ಉದ್ದೇಶದಿಂದ ದೆಹಲಿಯಲ್ಲಿ ಠಿಕಾಣಿ ಹೂಡಿರುವದು ಅವರ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತಿದ್ದು, ಅವರು ಕೂಡಲೇ ಬೆಳಗಾವಿ ಜಿಲ್ಲೆ ಮತ್ತು ಗೋಕಾಕ ತಾಲೂಕಿನ ಕರೋನಾ ರೋಗಿಗಳ ಚಿಕಿತ್ಸಾ ವ್ಯವಸ್ಥೆ ಹಾಗೂ ನೆರೆ ಸಂತ್ರಸ್ಥರ ಪರಿಹಾರ ಕಾರ್ಯದಲ್ಲಿ ತೊಡಗಬೇಕೆಂದು ಅವರನ್ನು ಆಗ್ರಹಿಸಿದ್ದಾರೆ.