ಗೋಕಾಕ:ಹೋಮ್ ಕ್ವಾರಂಟೈನ ಉಲ್ಲಂಘನೆ : 11 ಜನರ ಮೇಲೆ ಎಫ್ಐಆರ್ ದಾಖಲು : ತಹಶೀಲ್ದಾರ ಪ್ರಕಾಶ ಮಾಹಿತಿ
ಹೋಮ್ ಕ್ವಾರಂಟೈನ ಉಲ್ಲಂಘನೆ : 11 ಜನರ ಮೇಲೆ ಎಫ್ಐಆರ್ ದಾಖಲು : ತಹಶೀಲ್ದಾರ ಪ್ರಕಾಶ ಮಾಹಿತಿ
ನಮ್ಮ ಬೆಳಗಾವಿ ಇ – ವಾರ್ತೆ, ಜು 11 :
ಅಂತರ್ ರಾಜ್ಯ ಪ್ರವಾಸ ಮಾಡಿ ಬಂದು ಹೋಮ್ ಕ್ವಾರಂಟೈನ್ ನಲ್ಲಿ ಇರುವ ಹನ್ನೊಂದು ಜನರು ಕ್ವಾರಂಟೈನ್ ನಿಯಮಾವಳಿಗಳನ್ನು ಉಲ್ಲಂಘಿಸಿದ್ದರಿಂದ ಅವರ ವಿರುದ್ಧ ವಿಕೋಪ ನಿರ್ವಹಣಾ ಕಾಯ್ದೆ 2005 ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ತಿಳಿಸಿದ್ದಾರೆ .
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಗೋಕಾಕ ನಗರದಲ್ಲಿ 5 ಜನ, ಬಿಲಕುಂದಿ ಯಲ್ಲಿ 1, ಕೊಳವಿಯಲ್ಲಿ 2, ಕಳ್ಳಿಗುದ್ದಿ ಯಲ್ಲಿ 1 ಹಾಗೂ ಅಕ್ಕತಂಗೆರಹಾಳದಲ್ಲಿ 2 ಹೀಗೆ ಒಟ್ಟು 11 ಜನರು ಮನೆ ಬಿಟ್ಟು ಹೊರಗೆ ಬಂದು ಬೇರೆ ಕಡೆಗೆ ಸುತ್ತಾಡಿರುವುದು ಕೋವಿಡ್ ವಾರ್ ರೂಂ ನಿಂದ ಬಂದ ಮಾಹಿತಿಯಿಂದ ತಿಳಿದು ಬಂದಿದೆ. ಈಗಾಗಲೇ ಸುಮಾರು 40 ಜನರಿಗೆ ಎಚ್ಚರಿಕೆ ನೊಟೀಸ್ ಕೊಡಲಾಗಿದೆ, ಪ್ರತಿ ದಿನ ಮೌಖಿಕ ಎಚ್ಚರಿಕೆಯನ್ನು ಸಹ ಕೊಡಲಾಗಿದೆ. ಅದೆಲ್ಲ ಹೊರತಾಗಿಯೂ ಸಹ ನಿಯಮಗಳು ಉಲ್ಲಂಘನೆ ಆಗುತ್ತಿವೆ. ಆದ್ದರಿಂದ ಸೊಂಕು ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಸದರಿ ಉಲ್ಲಂಘನೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮಗಳನ್ನು ಜರುಗಿಸಲಾಗುವುದು.
ತಾಲೂಕಿನಲ್ಲಿ ಒಟ್ಟು 227 ಜನರು ಸದ್ಯಕ್ಕೆ ಹೋಮ್ ಕ್ವಾರಂಟೈನ್ ನಲ್ಲಿ ಇದ್ದು, ಪ್ರತಿ ದಿನ ಕ್ವಾರಂಟೈನ್ ನಲ್ಲಿ ಇರುವ ವ್ಯಕ್ತಿಯನ್ನು ಭೇಟಿ ಮಾಡಿ, ನಿಯಮಾವಳಿಗಳ ಉಲ್ಲಂಘನೆ ಆಗದಂತೆ ನಿಗಾ ವಹಿಸಲು ಮತ್ತು ಆನ್ಲೈನ್ ಆ್ಯಪ್ ನಲ್ಲಿ ಸೆಲ್ಫಿ ಅಪ್ಲೋಡ್ ಮಾಡಲು ಪ್ರತಿ ಗ್ರಾಮ/ವಾರ್ಡ್ ಗಳಿಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅದರಂತೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಬಿಲ್ ಕಲೆಕ್ಟರರವರು ಪ್ರತಿ ದಿನ ಅವರ ಮನೆಗೆ ಬೇಟಿ ನೀಡುತ್ತಿದ್ದಾರೆ.
ತಾಲೂಕಿನಲ್ಲಿ ಇಲ್ಲಿಯವರೆಗೂ 12 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ದಿನದಿಂದ ದಿನಕ್ಕೆ ಕೋರೋಣ ಹರಡುವಿಕೆ ಹೆಚ್ಚುತ್ತಿರುವುದರಿಂದ ಕ್ವಾರಂಟೈನ್ ನಲ್ಲಿ ಇರುವ ವ್ಯಕ್ತಿಗಳು ಮತ್ತು ಎಲ್ಲಾ ಸಾರ್ವಜನಿಕರು ತಪ್ಪದೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಅನಗತ್ಯವಾಗಿ ಸಂಚರಿಸದಿರುವುದು ಹಾಗೂ ಸೂಕ್ತ ಜಾಗೃತಿಯೊಂದಿಗೆ ಎಲ್ಲಾ ಮುಂಜಾಗ್ರತೆಯ ಕ್ರಮಗಳನ್ನು ಕೈಗೊಳ್ಳಬೇಕೆಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ತಿಳಿಸಿದ್ದಾರೆ.