RNI NO. KARKAN/2006/27779|Thursday, October 16, 2025
You are here: Home » breaking news » ಗೋಕಾಕ:ಸಂಭ್ರಮದಿಂದ ಕಾರಹುಣ್ಣಿಮೆಯನ್ನು ಆಚರಣೆ

ಗೋಕಾಕ:ಸಂಭ್ರಮದಿಂದ ಕಾರಹುಣ್ಣಿಮೆಯನ್ನು ಆಚರಣೆ 

ಸಂಭ್ರಮದಿಂದ ಕಾರಹುಣ್ಣಿಮೆಯನ್ನು ಆಚರಣೆ

 

ನಮ್ಮ ಬೆಳಗಾವಿ ಇ – ವಾರ್ತೆ ,ಬೆಬೆಟಗೇರಿ ಜೂ 6 :

 

ಗ್ರಾಮದಲ್ಲಿ ಕಾರ ಹುಣ್ಣಿಮೆ ಪ್ರಯುಕ್ತ ಶುಕ್ರವಾರ ಜೂನ.5 ರಂದು ಜೋಡೆತ್ತುಗಳನ್ನು ಶೃಂಗರಿಸಿ ಪೂಜೆ ನೆರವೇರಿಸಿದ ಬಳಿಕ ಇಲ್ಲಿಯ ಅಗಸಿಯ ಹೆಬ್ಬಾಗಿಲಿಗೆ ಕಟ್ಟಿರುವ ಕರಿ ಹರೆದು ಎತ್ತುಗಳನ್ನು ಓಡಿಸಿ, ಸ್ಥಳೀಯರು ಸಂಭ್ರಮದಿಂದ ಕಾರಹುಣ್ಣಿಮೆಯನ್ನು ಆಚರಿಸಿದರು.
ಶುಕ್ರವಾರ ದಿನದಂದು ಗ್ರಾಮದ ಎಲ್ಲ ರೈತರ ಮನೆಗಳಲ್ಲಿ ಮಣ್ಣಿನಿಂದ ಮಾಡಿದ ಎತ್ತುಗಳನ್ನು ಪೂಜಿಸಿ, ಗ್ರಾಮದ ಪುರದೇವರ ದೇವಾಲಯಗಳಲ್ಲಿ ಪೂಜೆ ಪುನಸ್ಕಾರ, ನೈವೇದ್ಯ ಸಮರ್ಪನೆ ಪುರಜನರಿಂದ ಸಡಗರದಿಂದ ನಡೆಯಿತು.
ಗ್ರಾಮದ ರೈತರು ಸ್ಥಳೀಯ ದೇಯನ್ನವರ ಮನೆತನದ ಮುಂಗಾರು ಹಾಗೂ ಸೋಮನಗೌಡರ ಮನೆತನದ ಹಿಂಗಾರು ಹಂಗಾಮಿನ ನಾಮಾಂಕಿತ ಎರಡು ಎತ್ತುಗಳನ್ನು ಶೃಂಗರಿಸಿ ಪೂಜೆ ನೆರವೇರಿಸಿ, ಊರಿನ ಅಗಸಿಯ ಹೆಬ್ಬಾಗಿಲಲ್ಲಿ ಓಡಿಸಲಾಯಿತು. ಎತ್ತುಗಳನ್ನು ಕರಿ ಹರಿದ ಬಳಿಕ ಯುವಕರು ಒಬ್ಬರಿಗಿಂತ ಮತ್ತೂಬ್ಬರು ಮೇಲಕ್ಕೆ ಹಾರಿ ಅಗಸಿಯ ಹೆಬ್ಬಾಗಿಲಿಗೆ ಕಟ್ಟಿದ ಕರಿಯನ್ನು ಹರಿಯಲು ಹರಸಾಹಸ ಮಾಡುತ್ತಿದ್ದರೆ ನೋಡುಗರಿಗೆ ಮನರಂಜನೆ ನೀಡುವಂತಿತ್ತು.
ಕಳೆದ ಶತ-ಶತಮಾನಗಳಿಂದಲೂ ಗ್ರಾಮದಲ್ಲಿ ಆಚರಿಸಿಕೊಂಡು ಬರಲಾಗುತ್ತಿರುವ ಕಾರ ಹುಣ್ಣಿಮೆ ಕರಿ ದಿನ ಸಂಪ್ರದಾಯದಂತೆ ಎತ್ತುಗಳಿಗೆ ವಿವಿಧ ಬಗೆಯ ಬಣ್ಣಹಚ್ಚಿ ಕೊಡುಗಳಿಗೆ ರಿಬ್ಬನ್, ಗೆಜ್ಜೆಯ ಸರ, ಹಣೆಪಟ್ಟಿ ಕಟ್ಟಿ ಶೃಂಗರಿಸಿ ಕರಿ ಹರಿಯಲಾಯಿತು.
ಈ ವರ್ಷ ಮುಂಗಾರು-ಹಿಂಗಾರು ಎತ್ತುಗಳು ಸಮಬಲಗಳಾಗಿ ಓಡಿದವು. ಸ್ಥಳೀಯ ರೈತರು ಒಬ್ಬರಿಗೊಬ್ಬರು ಈ ಸಲ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆಗಳ ಬೆಳೆಯುವ ಕುರಿತು ಮಾತನಾಡುತ್ತಾ ತಮ್ಮ ಮನೆಗಳ ಕಡೆಗೆ ಹಜ್ಜೆ ಹಾಕಿದರು. ಸ್ಥಳೀಯ ಯುವಕರು, ರೈತರು, ಮಹಿಳೆಯರು, ವಯೋವೃದ್ಧರು, ಗ್ರಾಮಸ್ಥರು ಕಾರಹುಣ್ಣಿಮೆ ಪ್ರಯುಕ್ತ ಕರಿ ಹರಿಯುವ ಕಾರ್ಯಕ್ರಮದಲ್ಲಿ ಇದ್ದರು.

Related posts: