RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಬೋಗಸ್ ಚೆಕ್ ಪಡೆದರೆ ಹುಷಾರ್ : ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಎಚ್ಚರಿಕೆ.

ಗೋಕಾಕ:ಬೋಗಸ್ ಚೆಕ್ ಪಡೆದರೆ ಹುಷಾರ್ : ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಎಚ್ಚರಿಕೆ. 

ಬೋಗಸ್ ಚೆಕ್ ಪಡೆದರೆ ಹುಷಾರ್ : ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಎಚ್ಚರಿಕೆ.

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 29 :

 

 
ಪ್ರವಾಹ ಪೀಡಿತದಿಂದ ಹಾನಿಗೀಡಾದ ಸಂತ್ರಸ್ಥರಿಗೆ ಮಾತ್ರ ಸರ್ಕಾರದ ಪರಿಹಾರ ಧನ ನೀಡಲು ಕ್ರಮ ಕೈಗೊಳ್ಳಿ. ಕೆಲವು ಕಡೆಗಳಲ್ಲಿ ಗೋಲಮಾಲ್‍ಗಳು ನಡೆಯುತ್ತಿವೆ. ಒಂದು ವೇಳೆ ನಿಜವಾದ ಸಂತ್ರಸ್ಥರಿಗೆ ಸರ್ಕಾರದ ಪರಿಹಾರ ಧನ ತಲುಪದಿದ್ದಲ್ಲಿ ಅದಕ್ಕೆ ಅಧಿಕಾರಿಗಳೇ ಹೊಣೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಖಡಕ್ ಎಚ್ಚರಿಕೆ ನೀಡಿದರು.
ಗುರುವಾರ ಸಂಜೆ ಇಲ್ಲಿಯ ತಾಲೂಕಾ ಪಂಚಾಯತ ಸಭಾಭವನದಲ್ಲಿ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಈ ಎಚ್ಚರಿಕೆ ನೀಡಿದ ಅವರು, ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೀಡಾದ ಸಂತ್ರಸ್ಥರನ್ನು ಗುರುತಿಸಿ ಜಂಟೀ ಸಮೀಕ್ಷೆ ನಡೆಸಿ 15 ದಿನಗಳೊಳಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪ್ರವಾಹದಿಂದಾಗಿ ಕ್ಷೇತ್ರದ 29 ಗ್ರಾಮಗಳು ಜಲಾವೃತಗೊಂಡಿದ್ದು, ಸಾಕಷ್ಟು ಮನೆಗಳು ಕುಸಿದು ಬಿದ್ದಿವೆ. ಈಗಾಗಲೇ ಸರ್ಕಾರದ ತಾತ್ಕಾಲಿಕ ಪರಿಹಾರ ರೂ. 10 ಸಾವಿರಗಳನ್ನು ನೀಡುತ್ತಿದ್ದು, ಇದರಲ್ಲಿಯೂ ಅಕ್ರಮವಾಗುತ್ತಿದೆ. ಸಂತ್ರಸ್ಥರಲ್ಲದವರೂ ಬೋಗಸ್ ಪರಿಹಾರ ಧನ ಪಡೆಯುತ್ತಿದ್ದಾರೆ. ಪ್ರಸಂಗ ಬಿದ್ದರೆ ಸಂತ್ರಸ್ಥರಲ್ಲದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಹಿಂಜರಿಯುವುದಿಲ್ಲವೆಂದು ಬಾಲಚಂದ್ರ ಜಾರಕಿಹೊಳಿ ಸೂಚನೆ ನೀಡಿದರು.
ನಿರಾಶ್ರಿತರಿಗೆ ಪರಿಹಾರ ಧನದ ಚೆಕ್‍ನ್ನು ಪ್ರತಿ ಗ್ರಾಮಗಳಿಗೆ ತಲುಪಿಸಿ ವಿತರಿಸಬೇಕು. ಮನೆ ಕಳೆದುಕೊಂಡ ನಿರಾಶ್ರಿತರಿಗೆ ತಾತ್ಕಾಲಿಕ ಶೆಡ್ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿದ ಅವರು, ಅರಭಾವಿ ಕ್ಷೇತ್ರದ ಸಂತ್ರಸ್ಥರಿಗೆ ಅಂದಾಜು 350 ಶೆಡ್‍ಗಳ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಸಮೀಕ್ಷೆ ಕಾರ್ಯ ನಡೆಯುವ ಸಂದರ್ಭದಲ್ಲಿ ಅನಧೀಕೃತ ಫಲಾನುಭವಿಗಳು ಆಯ್ಕೆಯಾಗುವುದನ್ನು ಕಟ್ಟುನಿಟ್ಟಾಗಿ ತಡೆಯಬೇಕು. ಸಂತ್ರಸ್ಥರಿಗೆ ಪಡಿತರ ಧಾನ್ಯಗಳನ್ನು ವಿತರಿಸುವ ಸಂದರ್ಭದಲ್ಲಿ ಕೆಲವರು ಗಲಾಟೆ ಮಾಡುತ್ತಿದ್ದಾರೆ. ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸುತ್ತಿದ್ದಾರೆ. ಅಂತಹ ಗ್ರಾಮಗಳಲ್ಲಿ ಕಡ್ಡಾಯವಾಗಿ ಗಸ್ತು ಪೊಲೀಸ್‍ರನ್ನು ನಿಯೋಜಿಸಿ ಸಂತ್ರಸ್ಥರಿಗೆ ಸರ್ಕಾರಿ ಸೌಲಭ್ಯ ಸಿಗಲು ಅನುಕೂಲ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
8.59 ಕೋಟಿ ರೂ.ಗಳ ಪರಿಹಾರ ಧನ : ಈಗಾಗಲೇ ಪ್ರವಾಹದಿಂದ ಹಾನಿಗೊಳಗಾದ ಅಡಿಬಟ್ಟಿ, ಚಿಗಡೊಳ್ಳಿ, ಕಲಾರಕೊಪ್ಪ, ಹಡಗಿನಾಳ, ಉದಗಟ್ಟಿ, ಲೋಳಸೂರ, ಬಸಳಿಗುಂದಿ, ಬಳೋಬಾಳ, ಬೀರನಗಡ್ಡಿ, ವಡೇರಹಟ್ಟಿ, ಗುಜನಟ್ಟಿ, ಭೈರನಟ್ಟಿ, ಢವಳೇಶ್ವರ, ಕಮಲದಿನ್ನಿ, ಅರಳಿಮಟ್ಟಿ, ಫುಲಗಡ್ಡಿ, ಸುಣಧೋಳಿ, ಮುನ್ಯಾಳ, ಧರ್ಮಟ್ಟಿ, ರಂಗಾಪೂರ, ಹುಣಶ್ಯಾಳ ಪಿವಾಯ್, ಬೀಸನಕೊಪ್ಪ, ಹುಣಶ್ಯಾಳ ಪಿಜಿ, ಅವರಾದಿ, ತಿಗಡಿ ಮಸಗುಪ್ಪಿ ಮತ್ತು ಪಟಗುಂದಿ ಗ್ರಾಮಗಳಲ್ಲಿ ತಲಾ 10 ಸಾವಿರ ರೂ.ಗಳಂತೆ ತಾತ್ಕಾಲಿಕ ಪರಿಹಾರ ಧನದ ಚೆಕ್‍ಗಳನ್ನು ವಿತರಿಸಲಾಗುತ್ತಿದೆ. ಮೆಳವಂಕಿ, ತಳಕಟ್ನಾಳ ಹಾಗೂ ನಲ್ಲಾನಟ್ಟಿ ಗ್ರಾಮಗಳಲ್ಲಿ ಸಮೀಕ್ಷೆ ಕಾರ್ಯ ಮುಕ್ತಾಯದ ಹಂತ ತಲುಪಿದೆ. ಅರಭಾವಿ ಮತಕ್ಷೇತ್ರದ 8593 ಸಂತ್ರಸ್ಥರಿಗೆ 8.59 ಕೋಟಿ ರೂ.ಗಳ ಪರಿಹಾರ ಧನದ ಚೆಕ್‍ಗಳನ್ನು ವಿತರಿಸಲಾಗುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಮಾಹಿತಿ ನೀಡಿದರು.
ಅಧಿಕಾರಿಗಳ ಅಳಲು : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮುಂದೆ ಅಧಿಕಾರಿಗಳೇ ತಮ್ಮ ಅಳಲು ತೋಡಿಕೊಂಡರು. ಸಂತ್ರಸ್ಥರಿಗೆ ಪರಿಹಾರ ಧನದ ಚೆಕ್ ನೀಡುವ ಸಂದರ್ಭದಲ್ಲಿ ಉದ್ಧಟತನ ವರ್ತನೆ ತೋರುತ್ತಿದ್ದಾರೆ. ಸಮೀಕ್ಷೆಯಲ್ಲಿ ತಮ್ಮ ಕುಟುಂಬದ ಹೆಸರನ್ನು ನಾಲ್ಕು ನಾಲ್ಕು ಸಾರಿ ಬರೆಯುವಂತೆ ಒತ್ತಡ ಹೇರುತ್ತಿದ್ದಾರೆ. ಸಾಲದ್ದಕ್ಕೆ ಪಡಿತರ ಚೀಟಿಯನ್ನು ತೋರಿಸಿ ಒಂದೇ ಕುಟುಂಬದ ನಾಲ್ವರು ಹೆಸರಿನ ಮೇಲೆ ಚೆಕ್ ಬರೆಯುವಂತೆ ಒತ್ತಡ ಹೇರುತ್ತಿದ್ದಾರೆ. ಪಡಿತರಗಳನ್ನು ಹಂಚುವ ಸಂದರ್ಭದಲ್ಲಿ ಲಾರಿಗಳನ್ನು ತಡೆಯುತ್ತಿದ್ದಾರೆ. ಇದನ್ನು ಹೇಗಾದರೂ ಮಾಡಿ ಪರಿಹರಿಸುವಂತೆ ಶಾಸಕರಿಗೆ ಅಧಿಕಾರಿಗಳು ಇದೇ ಸಂದರ್ಭದಲ್ಲಿ ತಮ್ಮ ನೋವುಗಳನ್ನು ತೋಡಿಕೊಂಡರು.
ಅರಭಾವಿ ಮತಕ್ಷೇತ್ರದಲ್ಲಿ 193 ಶಾಲೆಗಳು ಮಳೆ ಮತ್ತು ಪ್ರವಾಹದಿಂದಾಗಿ ಶಾಲಾ ಕಟ್ಟಡಗಳು ಕುಸಿತ ಕಂಡಿವೆ. 424 ಶಾಲೆಗಳು ದುರಸ್ತಿಯಲ್ಲಿದ್ದು, ಇದಕ್ಕಾಗಿ 4.24 ಕೋಟಿ ರೂ.ಗಳು ಹಾಗೂ ಶಿಥಿಲಗೊಂಡ ಶಾಲೆಗಳ ಮರು ನಿರ್ಮಾಣಕ್ಕೆ 29.28 ಕೋಟಿ ರೂ.ಗಳ ಅವಶ್ಯಕತೆ ಇದೆ. ಇದಕ್ಕಾಗಿ ಅಂದಾಜು 34 ಕೋಟಿ ರೂ.ಗಳ ಅನುದಾನ ಅಗತ್ಯವಿದೆ. ಎನ್‍ಡಿಆರ್‍ಎಫ್ ಯೋಜನೆಯಡಿ ಒಂದು ಶಾಲೆಯ ದುರಸ್ತಿಗೆ ಕೇವಲ 2 ಲಕ್ಷ ರೂ.ಗಳನ್ನು ನೀಡುತ್ತಿದ್ದು, ಈ ಹಣವು ಶಾಲಾ ದುರಸ್ತಿಗೂ ಸಹ ಸಾಕಾಗುವುದಿಲ್ಲ. ಆದ್ದರಿಂದ ರಾಜ್ಯ ಸರ್ಕಾರದಿಂದ ಅಗತ್ಯ ಹಣವನ್ನು ಕೂಡಲೇ ಬಿಡುಗಡೆ ಮಾಡಿಸುವಂತೆ ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಕೋರಿದರು. ಶಾಲೆಗಳಲ್ಲಿ ಗಂಜಿ ಕೇಂದ್ರಗಳು ಪ್ರಾರಂಭವಾಗಿದ್ದರಿಂದ ಶಾಲಾ ದಾಸ್ತಾನುಗಳನ್ನು ಸಂತ್ರಸ್ಥರಿಗೆ ನೀಡಲಾಗಿದೆ. ಇದನ್ನು ಮರು ಭರಣಾ ಮಾಡುವಂತೆ ಮನವಿ ಮಾಡಿಕೊಂಡರು.
ಗೋಕಾಕ ಶೈಕ್ಷಣಿಕ ವಲಯದಲ್ಲಿ 256 ಶಾಲಾ ಕೊಠಡಿಗಳು ದುರಸ್ತಿಯಲ್ಲಿವೆ. 76 ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಇದಕ್ಕಾಗಿ 15.26 ಕೋಟಿ ರೂ.ಗಳ ಅಂದಾಜು ಹಾನಿಯನ್ನು ವರದಿ ಮಾಡಲಾಗಿದೆ ಎಂದು ಶಿಕ್ಷಣಾಧಿಕಾರಿ ಜಿ.ಬಿ. ಬಳಿಗಾರ ಅವರು ಹೇಳಿದರು.
ಲೋಕೋಪಯೋಗಿ ಇಲಾಖೆಯ ವರದಿ ಪ್ರಕಾರ 125 ಕಿ.ಮೀ ರಸ್ತೆಗಳು ಹಾಳಾಗಿದ್ದು, ಇದರಲ್ಲಿ 4 ಸೇತುವೆಗಳು ಸೇರಿವೆ. ಅರಭಾವಿ ಮಠದಿಂದ ಯಾದವಾಡವರೆಗಿನ ಶಾಶ್ವತ ರಸ್ತೆ ನಿರ್ಮಾಣ ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಆರ್‍ಡಿಪಿಆರ್ ಇಲಾಖೆಯ 369 ಕಿ.ಮೀ ರಸ್ತೆ ಹಾಳಾಗಿದ್ದು, ಇದಕ್ಕಾಗಿ 35 ಕೋಟಿ ರೂ.ಗಳ ಅಂದಾಜು ವರದಿಯನ್ನು ನೀಡಲಾಗಿದೆ. ಇದರಲ್ಲಿ 7 ಸೇತುವೆಗಳು 1 ಕೆರೆಗಳು ಸೇರಿವೆ. 492 ಶಾಲೆ, ಅಂಗನವಾಡಿ ಹಾಗೂ ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದ್ದು, 40.99 ಕೋಟಿ ರೂ.ಗಳ ಹಾನಿಯನ್ನು ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು.
ಇತ್ತೀಚೆಗೆ ಸುರಿದ ಭಾರಿ ಪ್ರಮಾಣದ ಮಳೆ ಹಾಗೂ ಅಬ್ಬರದ ಪ್ರವಾಹದಿಂದಾಗಿ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದೆ. ಕಬ್ಬಿನ ಬೆಳೆ ಸಂಪೂರ್ಣ ನಾಶವಾಗಿದೆ. ಕೂಡಲೇ ನಷ್ಟಗೀಡಾದ ರೈತರ ಬೆಳೆಗಳ ಹಾನಿಯನ್ನು ಸಮೀಕ್ಷೆ ನಡೆಸಿ ಎ.ಸಿ ಮೂಲಕ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವಂತೆ ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ ನೀಡಿದರು.
ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ತಾಪಂ ಇಓ ಬಸವರಾಜ ಹೆಗ್ಗನಾಯಿಕ, ಡಿವಾಯ್‍ಎಸ್‍ಪಿ ಎಸ್. ಪ್ರಭು, ಮೂಡಲಗಿ ತಾಲೂಕಾ ನೋಡಲ್ ಅಧಿಕಾರಿ ಎಸಿಎಫ್ ಶ್ರೀಕಾಂತ ಕಣದಾಳೆ ಉಪಸ್ಥಿತರಿದ್ದರು.

Related posts:

ಹುದಲಿ : ರಾಜಕೀಯ ಜೀವನದಲ್ಲಿ ಯಾರಿಗೂ ನಾನು ಸುಲಭವಾಗಿ ಸೋಲು ಒಪ್ಪಿಕೊಂಡಿಲ್ಲ: ಹುದಲಿಯಲ್ಲಿ ಮಾಜಿ ಸಚಿವ ಸತೀಶ ಖಡಕ್ ಮಾತ…

ಮೂಡಲಗಿ:ಮಲ್ಲಿಕಸಾಬ ಚಾಂದಖಾನ ಸಾರ್ವಜನಿಕರಿಗೆ ಶುದ್ಧ ಕುಡಿಯು ನೀರಿನ ಘಟಕಗಳನ್ನು ನಿರ್ಮಿಸುವ ಮೂಲಕ ಸಮಾಜಕ್ಕೆ ಮಾದರಿಯಾಗ…

ಗೋಕಾಕ:ರಮೇಶ ಜಾರಕಿಹೊಳಿ ಅವರ ತ್ಯಾಗದಿಂದಲೇ ರಾಜ್ಯಲ್ಲಿಂದು ಬಿಜೆಪಿ ಸರ್ಕಾರ : ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ)