ಗೋಕಾಕ:ಜಲಪ್ರಳಯ ಹಿನ್ನೆಲೆ:ಜನರ ಓಡಾಟವಿಲ್ಲದೇ ಬೀಕೋ ಎನ್ನುತ್ತಿವೆ ಗೋಕಾಕಿನ ಬಹುತೇಕ ಬೀದಿಗಳು

ಜಲಪ್ರಳಯ ಹಿನ್ನೆಲೆ:ಜನರ ಓಡಾಟವಿಲ್ಲದೇ ಬೀಕೋ ಎನ್ನುತ್ತಿವೆ ಗೋಕಾಕಿನ ಬಹುತೇಕ ಬೀದಿಗಳು
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 11 :
ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಗೋಕಾಕ ಪೇಟೆ ಪ್ರವಾಹದ ಕರಾಳ ಛಾಯೆಯಿಂದಾಗಿ ಇಂದು ಜನರ ಓಡಾಟವಿಲ್ಲದೇ ಸ್ಥಂಭವಾಗಿದೆ. ಬಹುತೇಕ ಬೀದಿಗಳು ಬೀಕೋ ಎನ್ನುತ್ತಿವೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾದ ಗೋಕಾಕ ನಗರ ಇತಿಹಾಸದ ಪುಟಗಳಲ್ಲಿ ನೆರೆ ಹಾವಳಿಯು ಹೊಸ ಇತಿಹಾಸ ಬರೆದಿದೆ.
ಕಳೆದ 5-6 ದಿನಗಳಿಂದ ಘಟಪ್ರಭಾ-ಹಿರಣ್ಯಕೇಶಿ-ಮಾರ್ಕಂಡೇಯ ನದಿಗಳ ಮಹಾಪೂರದಿಂದಾಗಿ ಇಡೀ ತಾಲೂಕಿನ ಜನತೆಯ ಬದುಕು ದುಸ್ತರವಾಗಿದೆ. ಮನೆ, ಆಸ್ತಿ-ಪಾಸ್ತಿ, ದನ-ಕರು, ಬಟ್ಟೆ-ಬರೆ ಬಂಗಾರದ ಆಭರಣಗಳು, ಹಣ ಹಾಗೂ ಪ್ರಮುಖ ದಾಖಲಾತಿಗಳು, ಜಮೀನದಲ್ಲಿ ಬೆಳೆದ ಬೆಳೆ ಕಳೆದುಕೊಂಡು ಪ್ರವಾಹಕ್ಕೆ ಹೆದರಿ ಜೀವ ಉಳಿದರೇ ಸಾಕು ಎಂದು ಎಲ್ಲವನ್ನು ಬಿಟ್ಟು ಉಟ್ಟ ಬಟ್ಟೆಯಲ್ಲಿ ಇಂದು ಗಂಜೀ ಕೇಂದ್ರಗಳಲ್ಲಿ ನಿರಾಶ್ರಿತರಾಗಿ ವಾಸವಾಗಿರುವದೇ ದುರ್ದೈದ ಸಂಗತಿ.
ನದಿ ನೀರು ಈಗ ಇಳಿಮುಖವಾಗಿದ್ದು ಜನರು ತಮ್ಮ ಮನೆಗಳಿಗೆ ಹಿಂತಿರುಗಿ ಹೋಗಿ ನೋಡಿದರೆ ಅಲ್ಲಿ ಏನೂ ಇಲ್ಲ. ಮನೆಯಲ್ಲಿ ಇಟ್ಟ ಆಹಾರ ಧಾನ್ಯ, ಬಟ್ಟೆ ಬರೆ, ಅಡುಗೆ ವಸ್ತುಗಳು ನೀರಿಗೆ ಆಹುತಿ ಆಗಿದ್ದರೆ ಮನೆ ಗೋಡೆಗಳು ಬಿದ್ದು ವಾಸಿಸಲು ಅಯೋಗ್ಯವಾಗಿವೆ. ಇದೆಲ್ಲವನ್ನು ನೋಡಿ ಮುಂದೆ ದುಃಖ ತಡೆಯಲಾಗದೆ ಅಳುತ್ತಿದ್ದಾರೆ. ಅವರಿಗೆ ಸಾಂತ್ವನ ಹೇಳುವವರೇ ಇಲ್ಲವಾಗಿ ಇದು ಹಳೇ ಗೋಕಾಕದ ಪರಿಸ್ಥಿತಿಯಾಗಿದೆ.
ಈ ಭಾಗದ ಚಿಕ್ಕ ಅಂಗಡಿಕಾರರ ಸ್ಥಿತಿಯಂತೂ ಹೇಳುವದಕ್ಕೆ ಬೇಡ. ಅಂಗಡಿಗಳಲ್ಲಿಯಲ್ಲಿಯ ವಸ್ತುಗಳು ನೀರಿಗೆ ಆಹುತಿಯಾಗಿದ್ದು ಅಂಗಡಿಗಳ ವ್ಯಾಪಾರ ಹೇಗೆ ಪ್ರಾರಂಭಿಸಬೇಕು ಎಂದು ತಲೆ ಮೇಲೆ ಕೈ ಇಟ್ಟುಕೊಂಡು ಕುಳಿತಿದ್ದಾರೆ. ನೆರೆ ಬಂದು ಹೋಯಿತು ಆದರೆ ತಮ್ಮ ಜೀವನ ಹೇಗೆ ಎನ್ನುವದು ನಿರಾಶ್ರಿತರಿಗೆ ತಿಳಿಯದಾಗಿದೆ. ಕುಂಬಾರರು ಮಡಿಕೆ ಮಾಡಲು ತಂದಿಟ್ಟ ವಸ್ತುಗಳು ಹರಿದು ಹೋಗಿವೆ. ಗಣೇಶ ಚಥುರ್ತಿಗಾಗಿ ಜಿನಗಾರರು ತಯಾರಿಸಿಟ್ಟ ಗಣಪತಿ ಮೂರ್ತಿಗಳು ಪ್ರತಿಷ್ಠಾಪನೆಗೆ ಮೊದಲೇ ನದಿಯಲ್ಲಿ ವಿಸರ್ಜಗೊಂಡಂತಾಗಿದೆ. ಮೀನುಗಾರರ ಮನೆಗಳಲ್ಲಿ ಇಟ್ಟ ಬಲೆಗಳು ನೀರಿನಲ್ಲಿ ಹರಿದು ಹೋಗಿವೆ. ಮೇದಾರರು, ಕಲಾಲರು, ಡೋರರು ತಮ್ಮ ವ್ಯವಹಾರದ ಸರಂಜಾಮಗಳು ಕಳೆದುಕೊಂಡಿದ್ದಾರೆ. ಪ್ರತಿ ನಿತ್ಯ ಗಳಿಸಿ ಅಂದೇ ಜೀವನ ನಡೆಸುವ ಬೀದಿ ಬದಿ ವ್ಯಾಪಾರಸ್ಥರು ಸಂಪೂರ್ಣವಾಗಿ ಬೀದಿಗೆ ಬಿದ್ದಂತಾಗಿದೆ. ಇದಲ್ಲದರ ನಡುವೆ ನಗರದ ಉಪ್ಪಾರ ಗಲ್ಲಿಯಲ್ಲಿ ಪ್ರವಾಹದಿಂದಾಗಿ ಉರುಳಿದ ಮನೆಗಳಲ್ಲಿ ಕಳ್ಳತನ ಘಟನೆಗಳು ನಡೆದಿವೆ ಬೆಲೆ ಬಾಳುವ ವಸ್ತುಗಳು, ಬಂಗಾರದ ಆಭರಣಗಳು, ಹಣ ಕಳ್ಳತನವಾಗಿವೆ.
ಇಂದು ನಗರದ ವಾಲ್ಮೀಕಿ ಸರ್ಕಲ್, ನಾಕಾ ನಂ. ಹಾಗೂ ದಂಡಿನ ಮಾರ್ಗ ಸಂಚಾರಕ್ಕೆ ಮುಕ್ತವಾಗಿದ್ದು ಇಂದು ರಾತ್ರಿಯ ವೇಳೆಗೆ ಮಾರ್ಕಂಡೇ ನದಿ ಮೇಲಿನ ಸೇತುವೆ ಮೇಲೆ ಸಂಚಾರ ಪ್ರಾರಂಭವಾಗುವ ಸಾಧ್ಯತೆ ಇದೆಯೆಂದು ಹೇಳಲಾಗಿದೆ.
ಸರಕಾರದ ಯಾವ ಅದಿಕಾರಿಯೂ ಈ ಜನರ ಗೋಳು ಕೇಳಿ ಸ್ಪಂದಿಸಲು ಯಾರೂ ಇಲ್ಲದಿರುವದು ಅತ್ಯಂತ ಆಕ್ಷೇಪಾರ್ಹವಾಗಿದೆ. ಗೋಕಾಕ ನಗರದ ಜನತೆಯ ಮಾನವೀಯತೆಯೇ ಈವರೆಗೆ ನಿರಾಶ್ರಿತ ಜನತೆಯನ್ನು ಜೀವಂತಾಗಿಟ್ಟದ್ದು ಊಟ, ಉಪಹಾರದ ವ್ಯವಸ್ಥೆ ಮಾಡುತ್ತಿರುವದು ಅತ್ಯಂತ ಶ್ಲಾಘನೀಯವಾಗಿದ್ದು ಸರಕಾರ ಹಾಗೂ ತಾಲೂಕಾಡಳಿತದ ನೆರವು ಬಾರದಿರುವದು ದುಃಖದ ಸಂಗತಿಯಾಗಿದೆ.
ವಿಘ್ನ ನಿವಾರಕನಿಗೆ ಕಂಠಕವಾದ ಜಲಪ್ರವಾಹ: ನಗರದ ಜಿನಗಾರ ಗಲ್ಲಿಯಲ್ಲಿ ಬರುವ ತಿಂಗಳು ಇರುವ ಗಣೇಶ ಹಬ್ಬದ ನಿಮಿತ್ಯವಾಗಿ ಕಳೆದ ಒಂದುವರೆ ತಿಂಗಳಿಂದ ಗಣೇಶ ಮೂರ್ತಿಗಳನ್ನು ತಯ್ಯಾರಿಸುತ್ತಿದ್ದರು. ಏಕಾಏಕಿಯಾಗಿ ಪ್ರವಾಹದ ನೀರು ಆಗಮಿಸಿದ್ದರಿಂದಾಗಿ ಗಣೇಶ ಮೂರ್ತಿಗಳು ನೀರಲ್ಲಿ ನಿಂತು ಕರಗಿ ಹೋಗಿವೆ. ಗಣೇಶ ಹಬ್ಬಕ್ಕೆ ಇನ್ನೂ 19 ದಿನಗಳು ಮಾತ್ರ ಬಾಕಿ ಇದ್ದು ಈಗಾಗಲೇ ಆರ್ಡರ್ ಮಾಡಿದ ಜನತೆಗೆ ಏನು ಹೇಳುವುದು ತಿಳಿಯದಾಗಿದೆ. ನಾವು 5 ಲಕ್ಷ ರೂಗಳ ಒಂದು ಸಾವಿರಕ್ಕೂ ಹೆಚ್ಚು ಗಣೇಶ ಮೂರ್ತಿಗಳು ಆರ್ಡರನ್ನು ಹಿಡಿದ್ದೇವೆ ಈಗ ಏನು ಮಾಡವುದು ತಿಳಿಯದಾಗಿದೆ ಎಂದು ಮೂರ್ತಿ ತಯಾರಕ ವಿನಾಯಕ ಚವ್ವಾಣ ಅವರ ಅಳಲಾಗಿದೆ.