ಗೋಕಾಕ:ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ತಂದು ಶಾಲೆಗೆ ಕೀರ್ತಿ ತರಬೇಕು : ಡಾ.ರಾಜು ಕಂಬಾರ
ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ತಂದು ಶಾಲೆಗೆ ಕೀರ್ತಿ ತರಬೇಕು : ಡಾ.ರಾಜು ಕಂಬಾರ
ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಮಾ 13 :
ಜ್ಞಾನದ ಬಲದಿಂದ ಅಜ್ಞಾನದ ಕೇಡು ಜ್ಯೋತಿಯ ಬಲದಿಂದ ತಮಂಧ ಕೇಡು ಎಂಬಂತೆ ಪ್ರತಿಯೊಬ್ಬರೂ ಇಂದಿನ ಶಿಕ್ಷಣ ಪಡೆದು ಸಮಾಜದ ಕತ್ತಲೆಯನ್ನು ಹೋಗಲಾಡಿಸಬೇಕೆಂದು ಸಮೀಪದ ಕೌಜಲಗಿಪಟ್ಟಣದ ಮರುಳಸಿದ್ಧೇಶ್ವರ ಸಿದ್ಧಸಂಸ್ಥಾನ ಮಠದ ಪೀಠಾಧ್ಯಕ್ಷ ವೀರಯ್ಯ ಮಹಾಸ್ವಾಮಿಗಳು ಹೇಳಿದರು.
ಸಮೀಪದ ಕೌಜಲಗಿ ಪಟ್ಟಣದ ಅಂಬರೀಷ ವರ್ಮ ದೇಸಾಯಿ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ, ಸಾಧಕರ ಸನ್ಮಾನ ಸಮಾರಂಭ ಇತ್ತೀಚಿಗೆ ಉದ್ಘಾಟಿಸಿ ಮಾತನಾಡಿದರು.
ಸಾಹಿತಿ ಡಾ.ರಾಜು ಕಂಬಾರ ಸತ್ಕಾರ ಸ್ವೀಕರಿಸಿ ಮಾತನಾಡಿ, ಅಂಬರೀಷವರ್ಮ ದೇಸಾಯಿ ಪ್ರೌಢ ಶಾಲೆಯ ಗೋಕಾಕ ತಾಲೂಕಿನ ಎರಡನೆಯ ಅತ್ಯಂತ ಹಳೆಯ ಪ್ರೌಢಶಾಲೆಯಾಗಿದ್ದು, 1954 ರಲ್ಲಿ ಸ್ಥಾಪನೆಗೊಂಡಿದೆ. ಇಲ್ಲಿ ಓದಿದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಗಳು ಹೆಚ್ಚು ಅಧ್ಯಯನಶೀಲರಾಗಿ ದುಡಿದು ಉತ್ತಮ ಫಲಿತಾಂಶವನ್ನು ತಂದು ಶಾಲೆಗೆ ಕೀರ್ತಿ ತಂದು ಕೊಡಬೇಕೆಂದು ಕರೆ ನೀಡಿದರು.
ಗೋಕಾಕ ಅಂಜುಮನ್ ಕಾಲೇಜಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಎ.ಎ.ಮುಲ್ಲಾ, ಸುಭಾಸ ಕೌಜಲಗಿ, ಗುತ್ತಿಗೆದಾರ ಜಗದೀಶ ಭೋವಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕಳೆದ ಶೈಕ್ಷಣಿಕ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಪಡೆದ ಶಾಲೆಯ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು. ಶಾಲೆಯ ಸಾಧಕ ಹಳೆಯ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ಜರುಗಿದವು.
ಮಾದರಿ ಶಿಕ್ಷಣ ಸಮಿತಿ ಚೇರಮನ್ ಅಶೋಕ ಪರುಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಸಂಸ್ಥೆಯ ನಿರ್ದೇಶಕರುಗಳಾದ ಡಿ.ಕೆ. ಗಾಣಿಗೇರ, ಅಶೋಕ ಕೋಟಿನತೋಟ, ಇಮಾಮಸಾಬ ಹುನ್ನೂರ, ಗುರುಪಾದ ಬಳಿಗಾರ, ದಾನಿ-ಗಣೇಶ ಶೆರೆಗಾರ, ಎಸ್.ಡಿ.ಎಂ.ಸಿ. ಅಧ್ಯಕ್ಷ ಅರವಿಂದ ಪಾಟೀಲ, ಕಲಾವಿದ ಆದಂ ಜಮಾದಾರ ಮತ್ತೀತರರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರು ವೈ.ಎಸ್. ಜಗ್ಗಿನವರ ಸ್ವಾಗತಿಸಿದರು. ಎಸ್.ಎಸ್.ಗಾಣಿಗೇರ ಪರಿಚಯಿಸಿದರು, ಕರಿಬಸಪ್ಪ ನಿರೂಪಿಸಿದರು, ಭಜಂತ್ರಿಯವರು ವಂದಿಸಿದರು.