ಗೋಕಾಕ:ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಮಾಜಮುಖಿ ಚಿಂತನೆಗಳನ್ನು ರೂಢಿಸಿಕೊಳ್ಳಬೇಕು : ಸಂತೋಷ ಕಾಮಗೌಡ ಸಲಹೆ

ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಮಾಜಮುಖಿ ಚಿಂತನೆಗಳನ್ನು ರೂಢಿಸಿಕೊಳ್ಳಬೇಕು : ಸಂತೋಷ ಕಾಮಗೌಡ ಸಲಹೆ
ಗೋಕಾಕ ಆ 8 : ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಮಾಜಮುಖಿ ಚಿಂತನೆಗಳನ್ನು ತಮ್ಮ ದಿನನಿತ್ಯದ ಜೀವನದಲ್ಲಿ ರೂಢಿಸಿಕೊಳ್ಳಬೇಕೆಂದು ಎಂದು ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಸಂತೋಷ ಕಾಮಗೌಡ ಹೇಳಿದರು.
ಶನಿವಾರದಂದು ನಗರದ ಶ್ರೀ ಸಿದ್ದಲಿಂಗೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಬಿಸಿಎ ಪದವಿ ವಿದ್ಯಾರ್ಥಿಗಳಿಗೆ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ “ಯುವ ಸಬಲೀಕರಣ ಮತ್ತು ನಾಗರಿಕ ಜವಾಬ್ದಾರಿ” ಕುರಿತು ಕೈಗೊಂಡ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ವಿದ್ಯಾರ್ಥಿಗಳು ಗಮನ ಹರಿಸುತ್ತಿರಬೇಕು ಇದರಿಂದ ಸಮಾಜವನ್ನು ಗಟ್ಟಿಯಾಗಿ ಕಟ್ಟಲು ಸಾಧ್ಯವಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಗುರಿಯನ್ನು ಬೆನ್ನತ್ತಿ ವಿದ್ಯಾಭ್ಯಾಸ ಮಾಡಬೇಕು. ವಿದ್ಯಾರ್ಥಿಗಳು ಸ್ವಯಂರಕ್ಷಣೆಗೆ ಪೂರಕವಾಗುವ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ದಿಸೆಯಲ್ಲಿ ವಿದ್ಯಾರ್ಥಿಗಳು ಯಾವ ವಿಷಯಗಳ ಬಗ್ಗೆ ಪ್ರಶ್ನೆ ಮಾಡಬೇಕು, ಯಾವ ವಿಷಯಗಳ ಬಗ್ಗೆ ಪ್ರಶ್ನೆ ಮಾಡಬಾರದು ಎಂಬುದನ್ನು ಗ್ರಹಿಸಿಕೊಂಡು ಪ್ರಶ್ನೆ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಗುರುದೇವ ಸಿದ್ದಾಪುರಮಠ, ಆಡಳಿತಾಧಿಕಾರಿ ಅಡಿವೇಶ ಗವಿಮಠ, ಲತಾ ಪಾಟೀಲ ಉಪಸ್ಥಿತರಿದ್ದರು.
