ಗೋಕಾಕ:ಜನೇವರಿ 4 ರಂದು ಗೋಕಾಕ ತಾಲೂಕಿನ ಪ್ರಥಮ ಜಾನಪದ ಸಮ್ಮೇಳನ : ಸರ್ವಾಧ್ಯಕ್ಷರಾಗಿ ಬಸವಣ್ಣೆಪ್ಪ ಕಬಾಡಗಿ ಆಯ್ಕೆ

ಜನೇವರಿ 4 ರಂದು ಗೋಕಾಕ ತಾಲೂಕಿನ ಪ್ರಥಮ ಜಾನಪದ ಸಮ್ಮೇಳನ : ಸರ್ವಾಧ್ಯಕ್ಷರಾಗಿ ಬಸವಣ್ಣೆಪ್ಪ ಕಬಾಡಗಿ ಆಯ್ಕೆ
ಗೋಕಾಕ ಡಿ 13 : ಗೋಕಾಕ ತಾಲೂಕಿನ ಪ್ರಥಮ ಕನ್ನಡ ಜಾನಪದ ಸಮ್ಮೇಳನವನ್ನು ತಾಲೂಕಿನ ಹಡಗಿನಾಳ ಗ್ರಾಮದ ಶ್ರೀ ಮುತ್ತೇಶ್ವರ ಹುಣಶೀಬಣದಲ್ಲಿ ಬರುವ 4 ನೇ ಜನೇವರಿ 2026 ರಂದು ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಶನಿವಾರದಂದು ನಗರದ ಸಿದ್ಧಾರ್ಥ ಲಲಿತಕಲಾ ಮಹಾವಿದ್ಯಾಲಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬೆಳಗಾವಿಯ ಮೋಹನ್ ಗುಂಡ್ಲೂರ ಅಧ್ಯಕ್ಷತೆಯಲ್ಲಿ ತಾಲೂಕಿನ ವಿವಿಧ ಜಾನಪದ ಕಲಾ ಪ್ರಕಾರಗಳನ್ನು ಪ್ರದರ್ಶನ ನೀಡಲು ಮತ್ತು ಹಿರಿಯ ಜಾನಪದ ಸಾಹಿತಿಗಳು ಮತ್ತು ಕಲಾವಿದರನ್ನು ಗೌರವಿಸುವ ಕಾರ್ಯವಾಗಲಿ, ತಾಲೂಕಿನ ಸಂಘಟನೆಗಳು ಹಾಗೂ ಸರ್ವರೂ ಸಮ್ಮೇಳನ ಯಶಸ್ವಿಗೊಳಿಸಲು ಸಹಕಾರ ಕೋರಲಾಯಿತು
ಕೊಣ್ಣೂರ ಶಿವಾಪೂರದ ತೊಂಬತ್ತು ವರ್ಷದ ಹಿರಿಯ ಜಾನಪದ ಕಲಾವಿದ, ಸಾಹಿತಿ ಶಿವಾಪೂರದ ಬಸವಣ್ಣೆಪ್ಪ ಪರಪ್ಪ ಕಬಾಡಗಿ ಅವರನ್ನು ಪ್ರಥಮ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಕನ್ನಡ ಭುವನೇಶ್ವರಿ ದೇವಿ ಹಾಗೂ ಸರ್ವಾಧ್ಯಕ್ಷರ ಮೆರವಣಿಗೆ, ವಿವಿಧ ಗೋಷ್ಠಿಗಳನ್ನು ಹಮ್ಮಿಕೊಂಡು ಎಲ್ಲಾ ಪ್ರಕಾರದ ಕಲೆಗಳು ಅನಾವರಣಕ್ಕೆ ಸಮ್ಮೇಳನ ಸಾಕ್ಷಿಯಾಗಲೆಂಬ ಅಭಿಪ್ರಾಯಗಳನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಪ್ರಾಚಾರ್ಯ ಜಯಾನಂದ ಮಾದರ, ಡಾ.ಸುರೇಶ್ ಹನಗಂಡಿ,ಈಶ್ವರಚಂದ್ರ ಬೆಟಗೇರಿ, ಶ್ರೀಮತಿ ವಿದ್ಯಾ ಮಗದುಮ್ಮ, ಸಾದಿಕ ಹಲ್ಯಾಳ, ಅಶೋಕ ಲಗಮಪ್ಪಗೋಳ, ಬಸವರಾಜ ಮುರಗೋಡ, ಡಾ.ಉದ್ದಣ್ಣ ಗೋಡೇರ, ಬಲದೇವ ಸಣ್ಣಕ್ಕಿ, ಡಾ.ಅರುಣ ಸವತಿಕಾಯಿ,ನಾಮದೇವ ಹರಿಜನ, ಮುತ್ತೆಪ್ಪ ಹರಿಜನ, ಆನಂದ ಸೋರಗಾವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

