ಗೋಕಾಕ:ಗ್ರಾಪಂ ವತಿಯಿಂದ ಕುಡಿವ ನೀರು ಪೂರೈಸಲು ವ್ಯವಸ್ಥೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತ
ಗ್ರಾಪಂ ವತಿಯಿಂದ ಕುಡಿವ ನೀರು ಪೂರೈಸಲು ವ್ಯವಸ್ಥೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತ.
*ಅಡಿವೇಶ ಮುಧೋಳ. ಬೆಟಗೇರಿ
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸಿಮೆಂಟ್‍ನಿಂದ ನಿರ್ಮಿತವಾದ ನೂತನ ಜಲಕುಂಭಗಳನ್ನು ಗ್ರಾಮದ ವಿವಿಧಡೆ ನಿರ್ಮಿಸಿ, ನೀರು ಸಂಗ್ರಹಿಸಿ ಗ್ರಾಮಸ್ಥರಿಗೆ ಕುಡಿವ ನೀರು ಪೂರೈಕೆ ಮಾಡಲಾಗುತ್ತಿದೆ.
ಈ ಹಿಂದೆ ಗ್ರಾಮದಲ್ಲಿ ಕೈ ಪಂಪ್ ಹಾಗೂ ನಲ್ಲಿಗಳ ಮೂಲಕ ಕುಡಿವ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ನಲ್ಲಿಗಳ ಮೂಲಕ ಬರುವ ನೀರು ಗ್ರಾಮದ ಎಲ್ಲ ಮನೆಗಳಿಗೆ ಸರಿಯಾಗಿ ತಲುಪದೆ ಇದ್ದುದರಿಂದ ಹಾಗೂ ನಲ್ಲಿ ವ್ಯವಸ್ಥೆ ಇಲ್ಲದವರ ಮನೆಗಳ ನೀರಿನ ಸಮಸ್ಯೆ ಹೋಗಲಾಡಿಸಲು ಹರಸಾಹಸ ಪಡಬೇಕಾಗಿತ್ತು. ಗ್ರಾಮದಲ್ಲಿ ಕೈ ಪಂಪ್‍ಗಳು ಈಗ ಸ್ಥಗಿತಗೊಂಡಿವೆ.
ಅಲ್ಲದೇ ಜಲಸಮಸ್ಯೆ ನಿವಾರಣೆಗಾಗಿ ಈ ಮೊದಲು ಕೊಳವೆ ಬಾಂವಿ ಕೊರೆಯಿಸಿ ಅವುಗಳಿಗೆ ನೀರೆತ್ತುವ ಯಂತ್ರ ಅಳವಡಿಸಿ ನೀರು ಪೂರೈಕೆ ಮಾಡಲಾಗುತ್ತಿತ್ತು. ಅನವಶ್ಯಕವಾಗಿ ನೀರು ವ್ಯಯವಾಗುವದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕುಡಿವ ನೀರಿನ ಸಮಸ್ಯೆಗೆ ವ್ಯವಸ್ಥಿತ ಪರಿಹಾರ ಕಲ್ಪಿಸಲು ಸ್ಥಳೀಯ ಗ್ರಾಪಂದವರು ನೂತನ ಜಲಕುಂಭಗಳ ಮೂಲಕ ಕುಡಿವ ನೀರು ಪೂರೈಕೆಯ ಮಾರ್ಗೋಪಾಯದ ಕ್ರಮ ಕೈಕೊಂಡಿದ್ದಾರೆ.
ಗ್ರಾಮದ ಜನರು ಕುಡಿವ ನೀರಿನ ಸಮಸ್ಯೆ ಎದುರಿಸುವ ಮುನ್ನ ಸ್ಥಳೀಯ ಗ್ರಾಮ ಪಂಚಾಯಿತಿ ಅನುದಾನದಡಿಯಲ್ಲಿ ಸಿಮೆಂಟ್‍ನಿಂದ ನಿರ್ಮಿತವಾದ ನೂತನ ಜಲಕುಂಭಗಳನ್ನು ಊರಿನ ಕೆಲವಡೆ ನಿರ್ಮಿಸಿ, ನೀರು ಸಂಗ್ರಹಿಸಿ ಸ್ಥಳೀಯರಿಗೆ ನೀರು ಪೂರೈಕೆ ಮಾಡುತ್ತಿರುವ ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಜಲಕುಂಭಗಳ ಮೂಲಕ ಮೂಲಕ ಪೂರೈಕೆಯಾಗುತ್ತಿರುವ ಕುಡಿಯುವ ನೀರನ್ನು ಸ್ಥಳೀಯ ಗ್ರಾಮಸ್ಥರು ಅನವಶ್ಯಕವಾಗಿ ವ್ಯಯ ಮಾಡದೇ ನೀರಿನ ಸದುಪಯೋಗ ಮಾಡಿಕೊಳ್ಳಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಈಶ್ವರ ಬಳಿಗಾರ, ಪಿಡಿಒ ಎಚ್.ಎನ್.ಬಾವಿಕಟ್ಟಿ ಹಾಗೂ ಸದಸ್ಯರು ಮನವಿ ಮಾಡಿಕೊಂಡಿದ್ದಾರೆ.
“ಇನ್ಮುಂದೆಯೂ ಗ್ರಾಮಸ್ಥರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. * ಈಶ್ವರ ಬಳಿಗಾರ ಗ್ರಾಪಂ ಅಧ್ಯಕ್ಷ.
“ಸ್ಥಳೀಯರ ಮೂಲಭೂತ ಅವಶ್ಯಕ ಸಮಸ್ಯೆಗಳ ಕುರಿತು ಗ್ರಾಪಂ ಅಧ್ಯಕ್ಷ, ಸದಸ್ಯರ ಜತೆ ಚರ್ಚಿಸಿ, ಇಲಾಖೆಯ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಯತ್ನಿಸಲಾಗುವದು. * ಎಚ್.ಎನ್.ಬಾವಿಕಟ್ಟಿ. ಪಿಡಿಒ