ಗೋಕಾಕ:ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ಶಿಕ್ಷಣ ಮಹತ್ತರ ಪಾತ್ರ ವಹಿಸುತ್ತದೆ : ಲಖನ್ ಜಾರಕಿಹೊಳಿ

ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ಶಿಕ್ಷಣ ಮಹತ್ತರ ಪಾತ್ರ ವಹಿಸುತ್ತದೆ : ಲಖನ್ ಜಾರಕಿಹೊಳಿ
ಗೋಕಾಕ ಜ 3 : ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ಶಿಕ್ಷಣ ಮಹತ್ತರ ಪಾತ್ರ ವಹಿಸುತ್ತದೆ ಎಂದು ವಿಧಾನ ಪರಿಷತ ಸದಸ್ಯ ಹಾಗೂ ಮಯೂರ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಲಖನ ಜಾರಕಿಹೊಳಿ ಹೇಳಿದರು.
ಅವರು, ಶುಕ್ರವಾರದಂದು ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತ ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಅವರಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ ಒಳ್ಳೆಯ ನಾಗರಿಕರನ್ನಾಗಿ ಮಾಡುವಂತೆ ಕರೆ ನೀಡಿದರು.
ಮುಖ್ಯಅತಿಥಿಗಳಾಗಿ ಆಗಮಿಸಿದ್ಧ ಶಾಲೆಯ ವಿದ್ಯಾರ್ಥಿನಿ ಹಾಗೂ ಬೆಂಗಳೂರಿನ ವೈದ್ಯಾಧಿಕಾರಿ ಡಾ.ದೀಪಮಾಲಾ ಪಾಟೀಲ ಮಾತನಾಡಿ, ಶಿಕ್ಷಣ ಎಂದರೆ ಸಾಕ್ಷರತರಾಗುವದರೊಂದಿಗೆ ಮೌಲ್ಯಗಳನ್ನು ತಮ್ಮಲ್ಲಿ ತುಂಬಿಕೊಳ್ಳುವದು. ಮಾನವೀಯ ಮೌಲ್ಯಗಳನ್ನು ನೀಡುವ ವಿದ್ಯೆ ಯಾರು ಕಸೀದುಕೊಳ್ಳಲು ಸಾಧ್ಯವಿಲ್ಲ ಅದು ಅದ್ಭುತವಾದ ವಿಶೇಷ ಸಂಪತ್ತಾಗಿದೆ. ಗುರುಗಳಿಗೆ ತಂದೆ-ತಾಯಿಗಳ ನಂತರ ಸ್ಥಾನವಿದ್ದು ಅವರನ್ನು ಗೌರವಿಸುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಸಿಬ್ಬಂಧಿಯನ್ನು ಸತ್ಕರಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆ ಮೇಲೆ ಸಂಸ್ಥೆಯ ಉಪಾಧ್ಯಕ್ಷೆ ಸಂಧ್ಯಾ ಜಾರಕಿಹೊಳಿ, ಕಾರ್ಯದರ್ಶಿ ಸದಾನಂದ ಕಲಾಲ, ನಿರ್ದೇಶಕ ವಿನಾಯಕ ಚಿಪ್ಪಲಕಟ್ಟಿ, ಆಡಳಿತಾಧಿಕಾರಿ ಎಸ್ ಡಿ ಮುರಗೋಡ ಉಪಸ್ಥಿತರಿದ್ದರು.
