ಗೋಕಾಕ:ಅರಣ್ಯ ಇಲಾಖೆಯಿಂದ ಟ್ಯಾಂಕರ್ ಮೂಲಕ ನೀರು ಹಾಕಿ ಸಸಿ ಸಂರಕ್ಷಣೆ ಮಾಡುವ ಕಾರ್ಯ
ಅರಣ್ಯ ಇಲಾಖೆಯಿಂದ ಟ್ಯಾಂಕರ್ ಮೂಲಕ ನೀರು ಹಾಕಿ ಸಸಿ ಸಂರಕ್ಷಣೆ ಮಾಡುವ ಕಾರ್ಯ
ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಮಾ 14 :
ಗ್ರಾಮದ ಮುಖ್ಯ ರಸ್ತೆ, ಶಾಲಾ ಆವರಣ ಸೇರಿದಂತೆ ಹಲವಡೆ ನೆಡಲಾದ ಗಿಡಗಳಿಗೆ ಟ್ಯಾಂಕರ್ ಮೂಲಕ ನೀರು ಹಾಕಿ ಸಸಿ ಸಂರಕ್ಷಣೆ ಮಾಡುವ ಕಾರ್ಯ ಗುರುವಾರ ಮಾ.14 ರಂದು ಸಹ ಗ್ರಾಮದಲ್ಲಿ ನಡೆಯಿತು.
ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಮಳೆ ಪ್ರಮಾಣ ಕಡಿಮೆಯಾಗಿದ್ದು, ಪ್ರಸಕ್ತ ವರ್ಷದ ಬೇಸಿಗೆಯ ಬಿಸಿಲಿನ ತಾಪ ಈಗಲೇ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೆಲದಿನಗಳಿಂದ ಗೋಕಾಕ ಅರಣ್ಯ ಇಲಾಖೆ ಸಹಯೋಗದಲ್ಲಿ ಟ್ಯಾಂಕರ್ ಮೂಲಕ ಗಿಡಗಳಿಗೆ ನೀರು ಹಾಕುವ ಕೆಲಸ ಭರದಿಂದ ನಡೆದಿದೆ.
ನರೇಗಾ ಯೋಜನೆಯಡಿ ಸದ್ಯ ಟ್ಯಾಂಕರ್ ಮೂಲಕ ನೀರುಣಿಸಿ ಸಸಿಗಳನ್ನು ಸಂರಕ್ಷಣೆ ಹಾಗೂ ಮಳೆ ಆಗುವವರೆಗೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲು ಸಿಬ್ಬಂದಿಗೆ ಸೂಚಿಸಲಾಗಿದೆ. ಇಲ್ಲಿಯ ಕೆಲ ರೈತರು ನೀರು ಕೊಟ್ಟು ಸಹಕರಿಸುತ್ತಿದ್ದಾರೆ ಎಂದು ಗೋಕಾಕ ಅರಣ್ಯ ಇಲಾಖೆಯ ವಲಯಾಧಿಕಾರಿ ಕೆ.ಎನ್ ವಣ್ಣೂರ ತಿಳಿಸಿದ್ದಾರೆ.
ಗೋಕಾಕ ಅರಣ್ಯ ಇಲಾಖೆಯವರು ಸಸಿಗಳನ್ನು ನೆಡುವ ಜತೆಗೆ ಅವುಗಳ ರಕ್ಷಣೆಗೆ ಸುತ್ತಲೂ ಮುಳ್ಳಿನ ಬೇಲಿ ಹಾಕಲಾಗಿದೆ. ಒಟ್ಟಿನಲ್ಲಿ ನೆಟ್ಟ ಸಸಿಗಳನ್ನು ಪೋಷಿಸುವ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಕ್ಕೆ ಸ್ಥಳೀಯ ಸಾರ್ವಜನಿಕರು ಹಾಗೂ ವಾಹನ ಸವಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಇಲ್ಲಿಯ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ, ಅರಣ್ಯ ಇಲಾಖೆಯ ಜೆ.ಎ. ಮುಜಾವರ, ಮಂಜುನಾಥ ಹತ್ತಿ, ರಾಕೇಶ ನಡೋಣಿ, ಕಾಳಪ್ಪ ಪತ್ತಾರ, ಸಂಜು ಮಾಳೇದ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ, ಇತರರು ಇದ್ದರು.