ವಿಶ್ವಶಾಂತಿಗಾಗಿ ಕೈಗೊಂಡ ರಮಜಾನ ತಿಂಗಳ ಉಪವಾಸಕ್ಕೆ ಇಂದು ವಿದಾಯ : ನಾಡಿನಾದ್ಯಂತ ಮುಸ್ಲಿಂ ಭಾಂಧವರಿಂದ ಇಂದು ಈದ್-ಉಲ್-ಫಿತರ್” ಆಚರಣೆ
ವಿಶ್ವಶಾಂತಿಗಾಗಿ ಕೈಗೊಂಡ ರಮಜಾನ ತಿಂಗಳ ಉಪವಾಸಕ್ಕೆ ಇಂದು ವಿದಾಯ : ನಾಡಿನಾದ್ಯಂತ ಮುಸ್ಲಿಂ ಭಾಂಧವರಿಂದ ಇಂದು ಈದ್-ಉಲ್-ಫಿತರ್” ಆಚರಣೆ
ವಿಶೇಷ ಲೇಖನ :
ಕಾಶೀಮ ಹಟ್ಟಿಹೊಳಿ, ಖಾನಾಪುರ
ದೇಶದಲ್ಲಿ ಅನೇಕ ಧರ್ಮಗಳು ಇವೆ, ವಿವಿಧ ದರ್ಮಗಳಲ್ಲಿ ಬಗೆಬಗೆಯ ಹಬ್ಬಗಳು ಅವರ ಪದ್ಧತಿಗೆ ಅನುಸಾರವಾಗಿ ಆಚರಿಸಲಾಗುತ್ತದೆ. ಅಂತಹ ಧರ್ಮಗಳಲ್ಲಿ ಮುಸ್ಲಿಂ ಧರ್ಮಿಯರಲ್ಲಿ ರಮಜಾನ ಹಬ್ಬವು ಒಂದಾಗಿದೆ. ಆದ್ದರಿಂದ ರಮಜಾನ ಹಬ್ಬವು ನಾಡಿನ ಮುಸ್ಲಿಂ ಬಾಂಧವರಿಗೆ ಪವಿತ್ರವಾದಂತಹ ಹಬ್ಬವಾಗಿದೆ. ಈ ಹಬ್ಬದಲ್ಲಿ ನಾಡಿನ ಒಳಿತಿಗಾಗಿ ಒಂದು ತಿಂಗಳು ಉಪವಾಸ ವೃತಾಚರಣೆ ಮಾಡುವುದರಿಂದ ಭಗವಂತನಲ್ಲಿ (ಅಲ್ಹಾ) ಅರ್ಪಣೆ ಮಾಡುತ್ತಾರೆ. ಈ ಹಬ್ಬವು ನಾಡಿನ ಹಿಂದೂ-ಮುಸ್ಲಿಂ ಭಾಂದವರಲ್ಲಿ ಭಾವೈಕ್ಯತೆಯನ್ನು ಬೆಸೆಯುವಂತಹ ಹಬ್ಬವಾಗಿದೆ ಎಂದು ಧರ್ಮದ ಮೌಲ್ವಿಗಳು ಜನತೆಗೆ ಸಾರಿ ಹೇಳುತ್ತಾರೆ.
ರಮಜಾನ ತಿಂಗಳಲ್ಲಿ ಹಸಿವೆಯನ್ನು ಬೆಳಿಗ್ಗೆಯಿಂದ ಸಂಜೆಯವರೆಗೆ ಸಹಿಸಿಕೊಳ್ಳಬೇಕು. ಈ ದಿನಗಳಲ್ಲಿ ಮನಸ್ಸನ್ನು ಚಂಚಲವಾಗಲು ಬಿಡದೆ ಉಪವಾಸವನ್ನು ನಿಷ್ಠೆಯಿಂದ ಮಾಡಬೇಕು. ಹೀಗೆ ಮಾಡಿದ್ದೆ ಆದಲ್ಲಿ ಮರಣ ನಂತರ “ಆಖಿರತ್” ಅಂದರೆ ಪರಲೋಕವಾಸದಲ್ಲಿ ಅನುಭವಿಸಬಹುದಾದ ಕಷ್ಟಗಳಿಂದ ತಪ್ಪಿಸಿಕೊಳ್ಳಬಹುದು. ಅಲ್ಲಾಹನು ಪ್ರತಿವರುಷ ರಮಜಾನ್ ತಿಂಗಳಲ್ಲಿ ಮುಸಲ್ಮಾನರ “ಈಮಾನ್”ನ್ನು ಅಂದರೆ ಸತ್ಯನಿಷ್ಠೆಯನ್ನು ಪರೀಕ್ಷೆ ಮಾಡುತ್ತಾನೆ. ರಮಜಾನ್ ಮಾಸದ ಉಪವಾಸವೃತ ಮಾಡುವದು ಎಷ್ಟು ಪುಣ್ಯದ ಕೆಲಸವೂ ಹಾಗೆ ಉಪವಾಸವಿರುವವರಿಗೆ ಕೊನೆಯಲ್ಲಿ “ಇಫ್ತಾರ” ಅಂದರೆ ಭೋಜನಕೂಟ ಏರ್ಪಡಿಸುವುದು ಸತ್ಕಾರ್ಯವಾಗಿದೆ. ಪಾಪ ಹಾಗೂ ನರಕಾಗ್ನಿಯ ಶಕ್ತಿಯಿಂದ ಇದು ಬಂಧಮುಕ್ತಗೊಳಿಸುತ್ತದೆ ಎಂದು ಪ್ರವಾದಿ ಮಹಮದ್ ತಿಳಿಸಿದ್ದಾರೆ. ಇಸ್ಲಾಂನ ಪವಿತ್ರ ಸ್ತಂಭಗಳಲ್ಲಿ ಒಂದಾಗಿರುವ ಉಪವಾಸವೃತದ ಈ ಒಂದು ತಿಂಗಳು ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ಪ್ರವಾದಿ ತಮ್ಮ ಅನುಯಾಯಿಗಳಿಗೆ ತಿಳಿಸಿದ್ದಾರೆ. ದಾನಧರ್ಮವನ್ನು ಅನುಸರಿಸುವ ರಮಜಾನ್ ತಿಂಗಳಲ್ಲಿ ಧನವಂತರು ನಿರ್ಗತಿಕರಿಗೆ ದಾನಮಾಡಬೇಕು, ಇಲ್ಲದಿದ್ದರೆ ಈ ರಮಜಾನ್ ಆಚರಣೆ ಅಪೂರ್ಣ ಎಂಬ ನಂಬಿಕೆ ಜನರ ಮನಸಲ್ಲಿ ಅಡಗಿದೆ.
ಉಪವಾಸ ವೃತವೆಂಬುದು ದೇವರ ಅನುಕರಣೆಗಾಗಿ ಆಗಿದೆ. ಮನಷ್ಯ ಮನುಷ್ಯರಲ್ಲಿ ಒಳ್ಳೆಯ ಭಾಂದವ್ಯವೆಂಬುದು ಬರಬೇಕಾದರೆ ಹಬ್ಬಹರಿದಿನಗಳನ್ನು ಆಚರಿಸುವುದು ಅವಶ್ಯವಾಗಿದೆ. ಒಳ್ಳೆಯ ಸಂಸ್ಕಾರವಂತ ಬದುಕನ್ನು ಕಟ್ಟಿಕೊಳ್ಳಲು ಹಿಂದೂ-ಮುಸ್ಲಿಂ ಭಾಂದವರಲ್ಲಿ ಭಾವೈಕ್ಯತೆ ಇದ್ದರೆ ಸಾಧ್ಯವಾಗುತ್ತದೆ ಎಂದು ಹೇಳಬಹುದು.
ಮುಸ್ಲಿಂರಿಗೆ ರಮಜಾನ್ ಚಂದಿರನನ್ನು ನೋಡಿದ ಮೆಲೆಯೇ ತಿಂಗಳಿನ ಉಪವಾಸಕ್ಕೆ ಅಂತ್ಯ ಬೀಳುವುದು, ಅಂದೇ ರಮಜಾನ್ ತಿಂಗಳ ಕೊನೆಯ ದಿನ. ಅದಕ್ಕೆ ಷವಾಲ್ ತಿಂಗಳ ಪ್ರಥಮ ಪುಣ್ಯ ದಿನವೆಂದು ಕರೆಯುತ್ತಾರೆ. ಮುಸ್ಲಿಂರು ಅಲ್ಹಾನನ್ನು ಪ್ರಾರ್ಥಿಸುತ್ತಾರೆ. ಸೃಷ್ಠಿಕರ್ತನನ್ನು ಸದಾ ನೆನೆಯಿರಿ, ಪೈಗಂಬರರ ಪವಿತ್ರ ಜೀವನ ನಿಮಗೆ ಆದರ್ಶವಾಗಲಿ. ಪರರ ಸೇವೆ, ಪರೋಪಕಾರದಿಂದ ನಿಮಗೆ ಸುಖ, ಶಾಂತಿ ದೊರಕಲಿ, ಲೋಕ ಕಲ್ಯಾಣವೇ ನಿಮ್ಮ ಗುರಿಯಾಗಿರಲಿ ಎಂದು ಮೌಲ್ವಿಗಳು ಉಪದೇಶ ಮಾಡುತ್ತಾರೆ. ಲೋಕ ಕಲ್ಯಾಣಕ್ಕೆ ಬೇಡಿಕೆ ಸಲ್ಲಿಸುವುದರ ಮೂಲಕ ರಮಜಾನ್ ಹಬ್ಬ ಮುಕ್ತಾಯವಾಗುತ್ತದೆ. ಈ ದಿನಕ್ಕೆ “ಇದ್-ಉಲ್-ಫಿತರ್” (ಕುತುಬ್-ಎ-ರಮಜಾನ್) ಕರೆಯುತ್ತಾರೆ. ಕೋನೆಗೆ ಈ ದಿನದಂದು ಎಲ್ಲ ಮುಸ್ಲಿಂ ಭಾಂದವರು ಸೇರಿಕೊಂಡು ಹಜರತ ಮಹಮ್ಮದ ಪೈಗಂಬರರ ಮಾರ್ಗದರ್ಶನದಲ್ಲಿ ಅಲ್ಲಾಹನಿಗೆ (ಭಗವಂತ) ನೆನೆದು ಈದ್ಗಾ ಮೈದಾನದಲ್ಲಿ ಸಾಮೂಹಿಕ ನಮಾಜ್(ಪ್ರಾರ್ಥನೆ) ಸಲ್ಲಿಸಿ ಪ್ರಿತಿಗೆ ಪಾತ್ರರಾಗುತ್ತಾರೆ.
ಹಾಫಿಜ್ ಅಬ್ದುಲಮುಸವ್ವಿರ. ಲಿಂಗನಮಠ :
ರಮಜಾನ್ ಹಬ್ಬವು ಧರ್ಮದ ಆಚರಣೆಯಾಗಿದ್ದರೂ ಅದನ್ನು ಮೀರಿದ ಅಂತ:ಕರಣವನ್ನು ನಾವು ಕಾಣಬಹುದು. ಬಡವರು, ನಿರ್ಗತಿಕರು, ದೀನದಲಿತರು, ದುರ್ಬಲರಿಗೆ, ಹಸಿವಿನಿಂದ ಮುಕ್ತಿ ನೀಡಲು ಅವರಿಗೆ ಸಹಾಯ ಮಾಡಲು ಅಮಜಾನ್ ಪ್ರೇರೆಪಿಸುತ್ತದೆ. ಮನುಷ್ಯನಲ್ಲಿನ ಸಣ್ಣತನ, ಕೀಳರಿಮೆಯನ್ನು ಕಳೆದು ಆತನಲ್ಲಿ ಹೊಸ ಭರವಸೆ ಮೂಡಿಸಿ ಗೆಳೆತನ ಮತ್ತು ಮಾನವೀಯತೆಯ ಸೆಲೆ ಉಕ್ಕಿಸುವುದೇ ರಮಜಾನ್ ಹಬ್ಬದ ನೈಜ ಸಂದೇಶ.