RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ನಾಳೆಯಿಂದ ಹಿಡಕಲ್ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲಾಗುವುದು : ಶಾಸಕ ಬಾಲಚಂದ್ರ

ಗೋಕಾಕ:ನಾಳೆಯಿಂದ ಹಿಡಕಲ್ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲಾಗುವುದು : ಶಾಸಕ ಬಾಲಚಂದ್ರ 

ನಾಳೆಯಿಂದ ಹಿಡಕಲ್ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲಾಗುವುದು : ಶಾಸಕ ಬಾಲಚಂದ್ರ

ಗೋಕಾಕ ನ 5 : ರೈತರ ಬೆಳೆಗಳಿಗೆ ನಾಳೆಯಿಂದ 15 ದಿನಗಳವರೆಗೆ ಹಿಡಕಲ್ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಇಂದಿಲ್ಲಿ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಘಟಪ್ರಭಾ ಯೋಜನಾ ಮಟ್ಟದ ನೀರು ಬಳಕೆದಾರರ ಮಹಾಮಂಡಳದ ಸಭೆ ನಡೆಸಿ ಜಲಾಶಯದಲ್ಲಿ ಸಂಗ್ರಹವಿರುವ ನೀರಿನ ಮಾಹಿತಿಯನ್ನು ಪಡೆದುಕೊಂಡರು. ಇದೇ ಸಂದರ್ಭದಲ್ಲಿ ರೈತರ ಬೆಳೆಗಳಿಗೆ ನೀರು ಅಗತ್ಯವಾಗಿರುವುದರಿಂದ, ಕೂಡಲೇ ಹಿಡಕಲ್ ಜಲಾಶಯದಿಂದ ರೈತರ ಹಿತದೃಷ್ಟಿಯಿಂದ ನೀರನ್ನು ಬಿಡುಗಡೆಗೊಳಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಪೌರಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರೊಂದಿಗೆ ದೂರವಾಣಿ ಮೂಲಕ ಮನವಿ ಮಾಡಿಕೊಂಡರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮನವಿಗೆ ಸ್ಪಂದಿಸಿದ ಸಚಿವ ರಮೇಶ ಜಾರಕಿಹೊಳಿ ಅವರು, ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ ಕಾಲುವೆಗೆ 2400 ಕ್ಯೂಸೆಕ್ಸ್, ಘಟಪ್ರಭಾ ಬಲದಂಡೆ ಕಾಲುವೆಗೆ 2000 ಕ್ಯೂಸೆಕ್ಸ್, ಸಿಬಿಸಿ ಕಾಲುವೆಗೆ 500 ಕ್ಯೂಸೆಕ್ಸ್ ಹಾಗೂ ಘಟಪ್ರಭಾ ನದಿಗೆ 200 ಕ್ಯೂಸೆಕ್ಸ್ ನ. 6 ರಿಂದ 15 ದಿನಗಳವರೆಗೆ ನೀರನ್ನು ಹರಿಸುವಂತೆ ಸೂಚನೆ ನೀಡಿದರು. ತುರ್ತಾಗಿ ನೀರು ಹರಿಸಬೇಕಾಗಿರುವುದರಿಂದ ಮುಂದಿನ ಸಭೆಯಲ್ಲಿ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೈತರಿಗೆ ಅವಶ್ಯವೆನಿಸಿದರೆ ನವ್ಹೆಂಬರ ತಿಂಗಳಲ್ಲಿ 5 ದಿನಗಳವರೆಗೆ ನೀರನ್ನು ಮತ್ತೇ ಹರಿಸಲಾಗುವುದು. ನೀರನ್ನು ಪೋಲು ಮಾಡದೇ ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸಭೆಯಲ್ಲಿ ಘಟಪ್ರಭಾ ಯೋಜನಾ ಮಟ್ಟದ ನೀರು ಬಳಕೆದಾರರ ಮಹಾಮಂಡಳದ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಅಧೀಕ್ಷಕ ಅಭಿಯಂತರ ಸಿ.ಬಿ. ಹಿರೇಮಠ ಹಾಗೂ ಮಹಾಮಂಡಳದ ನಿರ್ದೇಶಕರು, ಉಪಸ್ಥಿತರಿದ್ದರು.

Related posts: