ಗೋಕಾಕ:ಮಹರ್ಷಿ ವಾಲ್ಮೀಕಿ ಇಡೀ ಮನುಕುಲದ ಆಸ್ತಿ : ಸಂತೋಷ ಜಾರಕಿಹೊಳಿ
ಮಹರ್ಷಿ ವಾಲ್ಮೀಕಿ ಇಡೀ ಮನುಕುಲದ ಆಸ್ತಿ : ಸಂತೋಷ ಜಾರಕಿಹೊಳಿ
ಗೋಕಾಕ ಅ 24 : ರಾಮಾಯಣದಂತಹ ಮಹಾಕಾವ್ಯವನ್ನು ವಿಶ್ವಕ್ಕೆ ಅರ್ಪಿಸಿದ ಮಹರ್ಷಿ ವಾಲ್ಮೀಕಿ ಒಬ್ಬ ವ್ಯಕ್ತಿ, ಒಂದು ಜಾತಿ, ಸಮಾಜ, ದೇಶ ಹಾಗೂ ಭಾಷೆಗೆ ಸೀಮಿತರಲ್ಲ. ಇಡೀ ಮನುಕುಲದ ಆಸ್ತಿಯೆಂದು ಯುವ ಧುರೀಣ ಸಂತೋಷ ರಮೇಶ ಜಾರಕಿಹೊಳಿ ಹೇಳಿದರು.
ಬುಧವಾರದಂದು ಇಲ್ಲಿಯ ವಾಲ್ಮೀಕಿ ದೇವಸ್ಥಾನದ ಆವರಣದಲ್ಲಿ ತಾಲೂಕಾಡಳಿತ, ನಗರ ಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಂಟಿಯಾಗಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಾತ್ಮರನ್ನು ಒಂದೇ ಜಾತಿಗೆ ಸೀಮಿತಗೊಳಿಸಬೇಡಿ ಎಂದು ಹೇಳಿದರು.
ವಾಲ್ಮೀಕಿ ಮಹರ್ಷಿ ವಿಶ್ವಪ್ರಜ್ಞೆಯ ಮಹಾಚೇತನ. ಭಾರತೀಯ ಸಂಸ್ಕøತಿ ಮತ್ತು ನಾಗರಿಕತೆಯ ನಿರ್ಮಾಪಕ. ಜಗತ್ತಿಗೆ ವಿಶ್ವ ಮಾನವ ಸಂದೇಶ ನೀಡಿದ ಮಹಾನ್ ಪುರುಷವೆಂದು ಬಣ್ಣಿಸಿದ ಅವರು, ಅವರು ರಚಿಸಿದ ಮಹಾಕಾವ್ಯ ರಾಮಾಯಣ ಸರ್ವಕಾಲಕ್ಕೂ ಎಲ್ಲರಿಗೂ ದಾರಿದೀಪವಾಗಿದೆ. ಇಂದಿನ ಯುವ ಜನಾಂಗ ಇಂತಹ ವಿಶ್ವಚೇತನ ವಾಲ್ಮೀಕಿ ಮಹರ್ಷಿ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಅಣಿಯಾಗುವಂತೆ ಕರೆ ನೀಡಿದರು.
ಅನಾದಿ ಕಾಲದಿಂದಲೂ ಪುರೋಹಿತ ಶಾಹಿಗಳಿಂದ ಧರ್ಮ ಹಾಗೂ ದೇವರ ಹೆಸರಿನಲ್ಲಿ ಶೋಷಣೆಗೆ ಒಳಗಾಗುತ್ತಿರುವ ವಾಲ್ಮೀಕಿ ಸಮಾಜ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಪ್ರತಿಯೊಬ್ಬರೂ ಸಾಕ್ಷರರಾಗಬೇಕು. ಮೂಢನಂಬಿಕೆಗಳಿಂದ ಹೊರಬಂದು ಸಮಾಜದ ಉನ್ನತಿ ಮತ್ತು ಪ್ರಗತಿಗೆ ಒಗ್ಗಟ್ಟಿನಿಂದ ಶ್ರಮಿಸುವಂತೆ ಸಂತೋಷ ಜಾರಕಿಹೊಳಿ ಅವರು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಹಶೀಲದಾರ ಜಿ.ಎಸ್.ಮಳಗಿ ಅವರು, ಹಿಂದುಳಿದ ವರ್ಗಗಳ ಅಭಿವೃದ್ದಿಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಅಂತಹ ಸೌಲಭ್ಯಗಳನ್ನು ಪಡೆದುಕೊಂಡು ಬಾಂಧವರು ಆರ್ಥಿಕಾಭಿವೃದ್ದಿ ಹೊಂದಬೇಕು. ಜೊತೆಗೆ ದೇಶದ ಏಳ್ಗೆಗಾಗಿ ದುಡಿಯುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಇಲಾಖೆ ಹಾಗೂ ಸಮಾಜದ ವತಿಯಿಂದ ಸತ್ಕರಿಸಲಾಯಿತು.
ವೇದಿಕೆಯಲ್ಲಿ ತಾ.ಪಂ. ಅಧ್ಯಕ್ಷೆ ಸುನಂದಾ ಕರದೇಸಾಯಿ, ಉಪಾಧ್ಯಕ್ಷ ವಾಯ್.ಬಿ.ನಾಯಿಕ,ಜಿ.ಪಂ. ಸದಸ್ಯರಾದ ಟಿ.ಆರ್.ಕಾಗಲ, ಮಡ್ಡೆಪ್ಪ ತೋಳಿನವರ, ಎಪಿಎಮ್‍ಸಿ ನಿರ್ದೇಶಕ ಬಸವರಾಜ ಸಾಯನ್ನವರ, ಸಮಾಜದ ಮುಖಂಡರಾದ ಲಕ್ಕಪ್ಪ ಪೂಜೇರಿ, ಶಿವಪ್ಪ ಗುಡ್ಡಾಕಾರ, ಹಣಮಂತ ಪೂಜೇರಿ, ಯುವ ಮುಖಂಡ ನಾಗಪ್ಪ ಶೇಖರಗೋಳ, ಪೌರಾಯುಕ್ತ ಎಮ್.ಎಚ್.ಅತ್ತಾರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ಎಸ್.ವಿ.ಕಲ್ಲಪ್ಪನವರ, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಜಯಶ್ರೀ ಗೋಟೂರಿ ನಗರ ಸಭೆ ಸದಸ್ಯರು ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಇದ್ದರು