ಬೆಳಗಾವಿ:ಹುಕ್ಕೇರಿ ತಾಲೂಕಿನ ಮಠಾಧೀಶರಿಂದ ನೆರೆ ಸಂತ್ರಸ್ತರಿಗೆ 2.55 ಲಕ್ಷ ರೂ ಧನ ಸಹಾಯ
ಹುಕ್ಕೇರಿ ತಾಲೂಕಿನ ಮಠಾಧೀಶರಿಂದ ನೆರೆ ಸಂತ್ರಸ್ತರಿಗೆ 2.55 ಲಕ್ಷ ರೂ ಧನ ಸಹಾಯ
ಬೆಳಗಾವಿ ಅ 30 : ಹುಕ್ಕೇರಿ ತಾಲೂಕಿನ ಮಠಾಧೀಶರ ವೇದಿಕೆ ವತಿಯಿಂದ ಕೊಡಗು ನೆರೆ ಸಂತ್ರಸ್ತರಿಗೆ ಮಠಾಧೀಶರಿಂದ ಮತ್ತು ಸಾರ್ವಜನಿಕರಿಂದ ಸಂಗ್ರಹಿಸಲಾಗಿದ್ದ 2.55 ಲಕ್ಷ ರೂ ಚೆಕ್ಕನ್ನು ಇಂದು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಳುಹಿಸಕೊಡಲಾಯಿತು
ಒಕ್ಕೂಟದ ಎಲ್ಲ ಸ್ವಾಮೀಜಿಗಳು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಅವರ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಚೆಕ್ ರವಾನಿಸಲಾಯಿತು. ಹುಕ್ಕೇರಿ ತಾಲೂಕು ಮಠಾಧೀಶರ ಒಕ್ಕೂಟ ಕೊಡಗು ನೆರೆ ಸಂತ್ರಸ್ತರ ನೆರವಿಗೆ ಧಾವಿಸುವ ಮೂಲಕ ವಿಶೇಷತೆ ಮೆರೆದಿದೆ. ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹಾಗೂ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ವೈಯಕ್ತಿಕವಾಗಿ ತಲಾ 25 ಸಾವಿರ ರೂ. ಸಂತ್ರಸ್ತರ ನೆರವಿಗಾಗಿ ನೀಡಿದ್ದಾರೆ.
ತಾಲೂಕಿನ ವಿವಿಧ ಮಠಾಧೀಶರು ಹಾಗೂ ಸಾರ್ವಜನಿಕರಿಂದ ಒಕ್ಕೂಟದ ವತಿಯಿಂದ ಒಟ್ಟು 2.55 ಲಕ್ಷ ರೂ. ಪರಿಹಾರ ನಿಧಿ ಸಂಗ್ರಹಿಸಿದ್ದರು.ಈ ಹಿಂದೆ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಾದಾಗ ರೈತರಲ್ಲಿ ಧೈರ್ಯ ತುಂಬುವ ಕೆಲಸ ಒಕ್ಕೂಟದಿಂದ ಮಾಡಲಾಗಿತ್ತು. ಅಲ್ಲದೆ ಹುಕ್ಕೇರಿ ತಾಲೂಕಿನ ಮೃತ ರೈತ ಕುಟುಂಬಗಳಿಗೆ ತಲಾ 50 ಸಾವಿರ ರೂ. ಕೊಟ್ಟು ಸಾಂತ್ವನ ಹೇಳಲಾಗಿತ್ತು. ಜಿಲ್ಲೆಯಲ್ಲಿ ಈ ಹಿಂದೆ ತೀವ್ರ ಬರದಿಂದ ಜಾನುವಾರುಗಳಿಗೆ ಮೇವು ಕೊರತೆ ಉಂಟಾದಾಗ ಹುಕ್ಕೇರಿ ತಾಲೂಕು ಮಠಾಧೀಶರ ಒಕ್ಕೂಟದ ವತಿಯಿಂದ ಮೇವು ಕೂಡ ಒದಗಿಸಿಕೊಡಲಾಗಿತ್ತು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ, ಹತ್ತರಗಿ ಕಾರಿಮಠದ ಗುರುಸಿದ್ಧ ಸ್ವಾಮೀಜಿ, ಹುಕ್ಕೇರಿ ವಿರಕ್ತಮಠದ ಶಿವಬಸವ ಸ್ವಾಮೀಜಿ, ಯರನಾಳದ ಬ್ರಹ್ಮಾನಂದ ಸ್ವಾಮೀಜಿ ಈ ವೇಳೆ ಉಪಸ್ಥಿತರಿದ್ದರು.