ಗೋಕಾಕ:ಪ್ರತಿ ಮಂಗಳವಾರ ಬೆಟಗೇರಿ ಗ್ರಾಮ ಸಂಪೂರ್ಣ ಬಂದ್..!

ಪ್ರತಿ ಮಂಗಳವಾರ ಬೆಟಗೇರಿ ಗ್ರಾಮ ಸಂಪೂರ್ಣ ಬಂದ್..!
ವಿಶೇಷ ವರದಿ : ಅಡಿವೇಶ ಮುಧೋಳ
ಬೆಟಗೇರಿ ಜೂ 13 : ಬಾಗಿಲು ಹಾಕಿದ ಅಂಗಡಿ-ಮುಂಗಟ್ಟುಗಳು… ಬಿಕೋ ಎನ್ನುತ್ತೀರುವ ಗ್ರಾಮದ ಓಣಿಯ ಬೀದಿಗಳು… ಗ್ರಾಮದಲ್ಲಿ ಮೌನ ವಾತಾವರಣ…ಇನ್ನೂ ನಾಲ್ಕು ಮಂಗಳವಾರ ದಿನ ಸಂಪೂರ್ಣ ಬಂದ್.! ಇದ್ಯಾವ ಬಂದ್ ಆಚರಣೆ, ಎಲ್ಲಿ ಅನ್ನುತ್ತೀರಾ..? ಮಂಗಳವಾರ ಜೂನ್.12 ರಂದು ಕುಂದಾನಗರಿ ಬೆಳಗಾವಿ ಜಿಲ್ಲೆಯ ಕರದಂಟೂರು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮಸ್ಥರು ಕಟ್ಟಾ ವಾರ ಆಚರಣೆ ಹಿನ್ನಲೆಯಲ್ಲಿ ದೇವರಿಗೆ ಮೊರೆ ಹೊದ ಗ್ರಾಮದ ದೃಶ್ಯವಿದು..!!
ವಾರ ಬಿಡುವ ಸಂಪ್ರದಾಯ ಹಿನ್ನಲೆ : ಗ್ರಾಮದ ಪುರ್ವಜರಿಂದ ಅನುಸರಿಸಿಕೊಂಡು ಬಂದ ವಾರ ಬಿಡುವ ಸಂಪ್ರದಾಯ ಪ್ರತಿ ವರ್ಷ ಜೂನ್ ಮತ್ತು ಜುಲೈ ತಿಂಗಳಲ್ಲಿ ಗ್ರಾಮದ ಜನರಿಗೆ, ದನಕರುಗಳಿಗೆ ರೋಗ-ರುಜೀನ ಬರದಂತೆ ಹಾಗೂ ಸಕಾಲಕ್ಕೆ ಮಳೆಯಾಗದಿದ್ದರೆ, ಮಳೆಗಾಗಿ ವಾರದ ಒಂದು ದಿನ ಮಂಗಳವಾರ ಇಲ್ಲವೇ ಶುಕ್ರವಾರ ಸೇರಿದಂತೆ ಒಟ್ಟು 5 ದಿನ ಇಡೀ ಗ್ರಾಮದ ಜನರು ಕೃಷಿ ಚಟುವಟಿಕೆ ನಿಲ್ಲಿಸಿ, ದೇವರಲ್ಲಿ ಪ್ರಾರ್ಥಿಸಿಕೊಳ್ಳುವ ಪದ್ದತಿಗೆ ವಾರ ಬಿಡುವ ಪದ್ದತಿ ಎನ್ನುತ್ತಾರೆ.
ಇದು ಗ್ರಾಮದಲ್ಲಿ ಪುರ್ವಜರಿಂದ ನಡೆದುಕೊಂಡ ಬಂದ ಸಂಪ್ರದಾಯ, ಊರಿಗೆ ಇದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಬಹುಕಾಲದಿಂದ ಇದೆ. ಹೀಗಾಗಿ ನಾವು ಪ್ರತಿ ವರ್ಷ ಊರಿನಲ್ಲಿ ವಾರ ಬಿಡುವ ಪದ್ದತಿ ಅನುಸರಿಸಿಕೊಂಡು, ವಾರದ ದಿನ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುತ್ತಿದ್ದೆವೆ. ಅಂತಾ ಈ ಬೆಟಗೇರಿ ಗ್ರಾಮದ ಹಿರಿಯರು ಹೇಳುವ ಮಾತುಗಳಿವು.
ಈಗಗಲೇ ಜೂ.12 ರಂದು ವಾರದ ಮೊದಲನೇಯ ಮಂಗಳವಾರ ದಿನ ಮುಗಿದು, ಒಟ್ಟು ಐದು ಮಂಗಳವಾರ ದಿನ ಕಟ್ಟಾ ವಾರದ ದಿನ ಆಚರಣೆ ಮಾಡಲಾಗುತ್ತದೆ. ಹೀಗಾಗಿ ಇನ್ನೂ ನಾಲ್ಕು ಮಂಗಳವಾರ ದಿನ ಇದೇ ಜೂ.19, ಜೂ.26 ಜು.3 ಮತ್ತು ಜು.10 ಮಂಗಳವಾರ ರಂದು ಬೆಟಗೇರಿ ಗ್ರಾಮ ಸಂಪೂರ್ಣ ಬಂದ್ ಆಚರಿಸಿದಂತಿರುತ್ತದೆ.
ಕಟ್ಟಾ ವಾರ ಬಿಡುವ ಪದ್ಧತಿ : ಉತ್ತರ ಕರ್ನಾಟಕ ಭಾಗದ ಹಳ್ಳಿಗಳಲ್ಲಿ ಈ ವಾರ ಬಿಡುವ ಪದ್ಧತಿ ಇದೆ. ಹೀಗಾಗಿ ಈ ಗ್ರಾಮದಲ್ಲಿ ವಾರ ಬಿಡುವ ಸಂಪ್ರದಾಯದಂತೆ ಗ್ರಾಮದ ಇಂದಿನ ಹಿರಿಯರು ಸೇರಿ ವಾರಬಿಡುವ ದಿನ ನಿರ್ಧರಿಸಿ, ಗ್ರಾಮದಲ್ಲೆಡೆ ಡಂಗುರ ಹೊಡೆಯಲಾಗುತ್ತದೆ. ವಾರದ ಈ 5 ದಿನಗಳಂದು ರೈತರ್ಯಾರೂ ಕೃಷಿ ಚಟುವಟಿಕೆ ಕೈಗೊಳ್ಳುವಂತಿಲ್ಲ, ಊರಿನಲ್ಲಿರುವ ಔಷಧ ಅಂಗಡಿ, ಆಸ್ಪತ್ರೆ ಹೊರತುಪಡಿಸಿ, ಕಿರಾಣಿ, ಮದ್ಯದಂಗಡಿ, ಚಹಾಅಂಗಡಿ, ಪಾನ್ ಬೀಡಾಂಗಡಿಗಳು ಸೇರಿದಂತೆ ಹೇರ್‍ಕಟಿಂಗ್ ಅಂಗಡಿ ಸಹ ಬಾಗಿಲು ತೆರೆಯದೇ ಬಂದ್ ಮಾಡಲಾಗಿರುತ್ತದೆ.
ಎಲ್ಲರ ಮನೆಯಲ್ಲೂ ರೊಟ್ಟಿ ಮಾಡುವಂತಿಲ್ಲ, ವಗ್ಗರಣೆಯಂತೂ ಹಾಕುವಂತಿಲ್ಲ, ಮಾಂಸಾಹಾರ ಅಡುಗೆ ತಯಾರಿಸುವಂತಿಲ್ಲ, ಪುರಜನರು ಪುರ ದೇವರ ಎಲ್ಲ ದೇವಸ್ಥಾನಕ್ಕೆ ತೆರಳಿ ನೈವೇದ್ಯ ಅರ್ಪನೆ, ಪೂಜೆ-ಪುನಸ್ಕಾರ ಸಲ್ಲಿಸುವ, ದೇವಾಲಯ ಕಟ್ಟೆಗಳಿಗೆ ನೀರು ಹಾಕುವದು ಭಯ, ಭಕ್ತಿ ಸಡಗರದಿಂದ ನಡೆಯುತ್ತವೆ. ಅಷ್ಟೇ ಅಲ್ಲದೇ ವಾರ ಬಿಟ್ಟ ಮೊದಲ ದಿನದಂದು ಗ್ರಾಮದ ಹೊರವಲಯದ ನಾಲ್ಕು ದಿಕ್ಕುಗಳಲ್ಲಿ ಸೀಮೆಗೆ ಪುರ ದೇವರ ಪಲ್ಲಕ್ಕಿ ಉತ್ಸವದ ಮೂಲಕ ಕರಿಕಟ್ಟುವದು, ನಂತರದ ವಾರದ ದಿನಗಳಲ್ಲಿ ಊರಿನ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆದು, ಕೊನೆಯ ದಿನ ಸಮಾರೂಪ ಕಾರ್ಯಕ್ರಮ ಹಾಗೂ ವಾರದ ಕೊನೆಯ ದಿನ ಕರಿ ಹರಿಯುವ ಕಾರ್ಯಕ್ರಮ ಕಟ್ಟುನಿಟ್ಟಿನ ಧಾರ್ಮಿಕ ವಿದಿ ವಿಧಾನಗಳಿಂದ ಭಕ್ತಿ ವೈಭವದಿಂದ ಊರಲ್ಲಿ ಕಟ್ಟಾ ವಾರ ಬಿಟ್ಟ ಆಚರಣೆ ನಡೆಯುತ್ತದೆ.
ಇಂದಿನ ಯುಗದಲ್ಲಿ ವಿಜ್ಞಾನ ತಂತ್ರಜ್ಞಾನ ಮುಂದುವರೆದರೂ ಗೊಡ್ಡು ಸಂಪ್ರದಾಯ ಆಚರಣೆಗಳಿಗೆ ಜನರು ಮೊರೆ ಹೊಗುತ್ತಿರುವದು ವಿಪರ್ಯಾಸ ಸಂಗತಿಯೇ ಸರಿ. ಮಳೆ ಆಗಲು ಪರಿಸರ ಸಂರಕ್ಷಣೆ, ಪ್ರತಿಯೊಬ್ಬರು ಹೊಲ-ಗದ್ದೆಗಳಲ್ಲಿ, ಮನೆ ಅಕ್ಕ-ಪಕ್ಕ ಖಾಲಿ ಇರುವ ಸ್ಥಳಗಳಲ್ಲಿ ಗಿಡ ಮರ ನೆಟ್ಟು ಬೆಳಸಲು ಮುಂದಾಗಬೇಕು. ದೇವರ ಮೇಲೆ ಭಯ, ಭಕ್ತಿ. ನಂಬಿಕೆ ಇರಲಿ ಆದರೆ ಮೂಢನಂಬಿಕೆಗಳನ್ನು ಮುಂದುವರಿಸಿಕೊಂಡು ಹೊಗುತ್ತಿರುವದು ಎಷ್ಟು ಸರಿ ಅಂಬುದು ಪ್ರಜ್ಞಾವಂತ ನಾಗರಿಕರ ಯಕ್ಷಪ್ರಶ್ನೆಯಾಗಿದೆ.

ವಾರದ ಜೂನ 12 ರಂದು ಮಂಗಳವಾರ ಮೊದಲ ದಿನ ಪುರ ದೇವರ ಪಲ್ಲಕ್ಕಿ ಉತ್ಸವ ಮೂಲಕ ಗ್ರಾಮದ ಹೊರವಲಯದಲ್ಲಿ ಕರಿ ಕಟ್ಟುವ ಕಾರ್ಯಕ್ರಮ ನಡೆಯಿತು.
ಸದಾಶಿವ ಕುರಿ ಗ್ರಾಮದ ವಾರ ಆಚರಣೆಯ ಹಿರಿಯ ನಾಗರಿಕ
“ ಹಲವು ತಲೆಮಾರುಗಳಿಂದ ಗ್ರಾಮದಲ್ಲಿ ನಮ್ಮ ಪುರ್ವಜರು ವಾರ ಬಿಡುವ ಪದ್ದತಿ ಅನುಸರಿಸಿಕೊಂಡು ಬಂದಿದ್ದಾರೆ. ಊರಿಗೆ ಒಳ್ಳೆಯದಾಗುತ್ತದೆ ಎಂಬ ಹಿತದೃಷ್ಟಿಯಿಂದ ನಾವು ಈ ಪದ್ದತಿ ಮುಂದುವರಿಸಿಕೊಂಡು ಹೊಗುತ್ತಿದ್ದೆವೆ. ಕೆಲವೊಂದು ಕಟ್ಟುನಿಟ್ಟಿನ ವೃತಾಚರಣೆ ಮಾಡುವದರ ಮೂಲಕ ಗ್ರಾಮದ ಸರ್ವ ಸಮುದಾಯದವರು ಸೇರಿಕೊಂಡು ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತೆವೆ.”