RNI NO. KARKAN/2006/27779|Saturday, July 27, 2024
You are here: Home » breaking news » ಮೂಡಲಗಿ:ಅಗತ್ಯವಿರುವ ಮೂಲ ಸೌಕರ್ಯಗಳನ್ನು ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ : ಶಾಸಕ ಬಾಲಚಂದ್ರ

ಮೂಡಲಗಿ:ಅಗತ್ಯವಿರುವ ಮೂಲ ಸೌಕರ್ಯಗಳನ್ನು ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ : ಶಾಸಕ ಬಾಲಚಂದ್ರ 

ಅಗತ್ಯವಿರುವ ಮೂಲ ಸೌಕರ್ಯಗಳನ್ನು ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ : ಶಾಸಕ ಬಾಲಚಂದ್ರ

ಮೂಡಲಗಿ ಫೆ 14 : ಕಮಲದಿನ್ನಿ ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದಿಸುತ್ತಿದ್ದು, ರಸ್ತೆ ಕಾಮಗಾರಿ, ಕಾಂಕ್ರೀಟ ರಸ್ತೆ, ಕುಡಿಯುವ ನೀರು ಸೇರಿದಂತೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ನೀಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಸಮೀಪದ ಕಮಲದಿನ್ನಿ ಗ್ರಾಮದಲ್ಲಿ ಮಂಗಳವಾರದಂದು ಲಕ್ಷ್ಮೀದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಭಿವೃದ್ಧಿ ಕಾರ್ಯಗಳಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿರುವುದಾಗಿ ಹೇಳಿದರು.
ಗ್ರಾಮಸ್ಥರು ಒಗ್ಗಟ್ಟಾಗಿ ಕೆಲಸ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಕಮಲದಿನ್ನಿ ಗ್ರಾಮಕ್ಕೆ ಹೆಚ್ಚು ಅನುಕೂಲವಾಗಲಿದೆ. ಲಕ್ಷ್ಮೀದೇವಿ ಜಾತ್ರೆಯನ್ನು ಪ್ರತಿವರ್ಷ ಅದ್ಧೂರಿಯಾಗಿ ನೆರವೇರಿಸುತ್ತಿರುವುದು ಸಂತಸದ ಸಂಗತಿ. ಮುಂದಿನ ದಿನಗಳಲ್ಲಿ ಮಳೆಯಾಗಿ ಬೆಳೆಗಳು ಚೆನ್ನಾಗಿ ಬೆಳೆದು ರೈತರ ಮುಖದಲ್ಲಿ ಪರಿಮಳ ಮೂಡಲಿ. ಲಕ್ಷ್ಮೀದೇವಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸಿದರು.
ಯುವಕರ ಒಗ್ಗಟ್ಟಿನ ಬಲದಿಂದ ಹಿರಿಯರ ಸಹಕಾರದಿಂದ ಗ್ರಾಮಾಭಿವೃದ್ಧಿ ಸಾಧ್ಯವಾಗಿದೆ. ಇದೇ ಒಗ್ಗಟ್ಟು ಎಲ್ಲ ಕಡೆಗಳಲ್ಲೂ ಬೆಳೆಯಬೇಕು. ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯುವಕರು ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದು ಹೇಳಿದರು.
ಭಾಗೋಜಿಕೊಪ್ಪದ ಶಿವಲಿಂಗ ಮಹಾಸ್ವಾಮಿಗಳು ಹಾಗೂ ಸುಣಧೋಳಿ ಶಿವಾನಂದ ಸ್ವಾಮಿಗಳು ಆಶೀರ್ವಚನ ನೀಡಿ, ಅರಭಾವಿ ಕ್ಷೇತ್ರದ ಜನರು ನಿಜವಾಗಲೂ ಪುಣ್ಯವಂತರು. ಬಾಲಚಂದ್ರ ಅವರಂತಹ ದಾನಶೂರ ಕರ್ಣನನ್ನು ಪಡೆದಿದ್ದೀರಿ. ಅವರ ಬಳಿಗೆ ಯಾರೇ ಹೋದರೂ ಅವರನ್ನು ಖಾಲಿ ಕೈಯಿಂದ ಕಳಿಸಿದ ಉದಾಹರಣೆ ಇಲ್ಲ. ಜನರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವ ಹೃದಯವಂತ ವ್ಯಕ್ತಿತ್ವ ಅವರದು. ಇವರಿಂದಲೇ ಕ್ಷೇತ್ರದಲ್ಲೆಲ್ಲ ಗುಡಿ-ಗುಂಡಾರಗಳು, ಮಠ-ಮಂದಿರಗಳು, ಮಸೀದಿ-ಚರ್ಚಗಳು ಜೀರ್ಣೋದ್ಧಾರವಾಗಿವೆ. ಹೆತ್ತವರನ್ನು ದೂರ ಮಾಡುವ ಈ ದಿನಗಳಲ್ಲಿ ತಾಯಿ-ತಂದೆಯವರ ಸ್ಮರಣಾರ್ಥ ಕೈಗೊಳ್ಳುತ್ತಿರುವ ವಿಧಾಯಕ ಕಾರ್ಯಗಳು ಮೆಚ್ಚುವಂತದ್ದು ಎಂದು ಶ್ಲಾಘಿಸಿದರು.
ಮುಖಂಡರಾದ ಲಕ್ಷ್ಮಣ ಹುಚರಡ್ಡಿ, ಬಸಪ್ಪ ಸಂಕನ್ನವರ, ಬಿ.ಎಚ್. ರಡ್ಡಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಮೂಡಲಗಿ ಪುರಸಭೆ ಮಾಜಿ ಅಧ್ಯಕ್ಷ ವೀರಣ್ಣಾ ಹೊಸೂರ, ಹನಮಂತ ತೇರದಾಳ, ತಾಪಂ ಸದಸ್ಯ ಹನಮಂತ ಡೊಂಬರ, ಮುನ್ಯಾಳ ಗ್ರಾಪಂ ಅಧ್ಯಕ್ಷ ಹನಮಂತ ತಳವಾರ, ಸಂತೋಷ ಸೋನವಾಲ್ಕರ, ಅಶೋಕ ನಾಯಿಕ, ಲಕ್ಕಪ್ಪ ಹುಚರಡ್ಡಿ, ಶಂಕರ ಬುದ್ನಿ, ಯಮನಪ್ಪ ಮಂಟನವರ, ರಂಗಪ್ಪ ಕುಲಗೋಡ, ಬಸವರಾಜ ಬಡಗನ್ನವರ, ಈರಪ್ಪ ಸಂಕನ್ನವರ, ರಾಮಣ್ಣಾ ಭಾಗೋಜಿ, ಹನಮಂತ ಪೂಜೇರಿ, ಮುದಕಪ್ಪ ಕೆಂಚರಡ್ಡಿ, ನವೀನ ಬಡಗನ್ನವರ, ತಮ್ಮಣ್ಣಾ ಕೆಂಚರಡ್ಡಿ, ಯಲ್ಲಪ್ಪ ಸಂತಿ, ಈರಪ್ಪ ಜಿನಗನ್ನವರ, ಭೀಮಶಿ ಪೂಜೇರಿ, ರಮೇಶ ಈರಡ್ಡಿ, ರಮೇಶ ಪಾಟೀಲ, ಉಪಸ್ಥಿತರಿದ್ದರು.

Related posts: