ಖಾನಾಪುರ:ಫೆಬ್ರುವರಿಯಲ್ಲೇ ಶುರುವಾಯ್ತು ಗುಂಡೊಳ್ಳಿಯಲ್ಲಿ ಕುಡಿವ ನೀರಿನ ಹಾಹಾಕಾರ
ಫೆಬ್ರುವರಿಯಲ್ಲೇ ಶುರುವಾಯ್ತು ಗುಂಡೊಳ್ಳಿಯಲ್ಲಿ ಕುಡಿವ ನೀರಿನ ಹಾಹಾಕಾರ
ಖಾನಾಪುರ ಫೆ 10: ಖಾನಾಪೂರ ತಾಲೂಕಿನ ಲಿಂಗನಮಠ ಗ್ರಾ.ಪಂ.ವ್ಯಾಪ್ತಿಯ ಗುಂಡೊಳ್ಳಿ ಗ್ರಾಮ 1800 ಜನಸಂಖ್ಯೆ ಹೊಂದಿದ್ದು, 400 ಕುಟುಂಬಗಳು ಕುಡಿವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಎರಡು ವರ್ಷಗಳ ಹಿಂದೆ 18 ಲಕ್ಷ ರೂ.ಗಳ ವೆಚ್ಚದಲ್ಲಿ ನೀರಿನ ಟ್ಯಾಂಕ್ ನಿರ್ಮಾಣವಾಗಿದೆ.ಅದಕ್ಕೆ ಪೂರ್ಣ ನೀರಿಲ್ಲ.ಗ್ರಾಮದಲ್ಲಿ ಇದ್ದ ಎರಡು ಕೊಳವೆ ಬಾವಿಗಳನ್ನು ಸೇರಿಸಿದರೂ ಕೇವಲ 1.5 ಇಂಚಿನಷ್ಟು ಮಾತ್ರ ನೀರು ಹೊರಬರುತ್ತಿದೆ.ನಾಲ್ಕು ದಿನಗಳಿಗೊಮ್ಮೆ ನಲ್ಲಿಗೆ ಬಿಡುವ ನೀರನ್ನು ಪಡೆಯಲು ಗ್ರಾಮಸ್ಥರು ಕೂಲಿನಾಲಿ ಬಿಟ್ಟು ದಿನಗಟ್ಟಲೆ ನೀರು ಸಂಗ್ರಹಿಸಿಟ್ಟುಕೊಳ್ಳುವ ಪರಿಸ್ಥಿತಿ ಇದೆ.
ಗ್ರಾಮದಿಂದ ಇಬ್ಬರು ಸದಸ್ಯರು ಆಯ್ಕೆಯಾಗಿದ್ದರೂ ಕುಡಿವ ನೀರಿನ ಸಮಸ್ಯೆಯತ್ತ ಗಮನ ಹರಿಸುತ್ತಿಲ್ಲ,ಒಡೆದ ಪೈಪಲೈನ್ ದುರಸ್ತಿ ಮಾಡುತ್ತಿಲ್ಲ.ತಹಶೀಲದಾರರು,ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನಮಗೆ ನೀರಿನ ಭವಣೆ ತಪ್ಪಿಲ್ಲ ಎಂದು ಗ್ರಾಮಸ್ಥರು ಕುಡಿವ ನೀರಿನ ಸಮಸ್ಯೆ ಕುರಿತ ತಮ್ಮ ಅಳಲು ತೋಡಿಕೊಂಡರು. ದಲಿತ ಮುಖಂಡ ಹಾಗೂ ಬಿಜೆಪಿ ನಾಯಕ ಮಾರುತಿ ಹರಿಜನ ನೇತೃತ್ವದಲ್ಲಿ ಗ್ರಾಮದ ಜನರು ಖಾಲಿ ಕೊಡಗಳನ್ನು ಪ್ರದರ್ಶಿಸಿ,ಕುಡಿವ ನೀರಿನ ಸಮಸ್ಯೆಯನ್ನು ಆದಷ್ಟು ಬೇಗನೆ ಪರಿಹರಿಸಬೇಕು ಎಂದು ಪ್ರತಿಭಟಿಸಿದರು.