ಮೂಡಲಗಿ:ನ್ಯಾಯ-ನೀತಿ ಹಾಗೂ ಧರ್ಮದಿಂದ ನಡೆಯುವುದೇ ಮಾನವ ಧರ್ಮ : ಮಾಜಿ ಸಚಿವ ಬಾಲಚಂದ್ರ
ನ್ಯಾಯ-ನೀತಿ ಹಾಗೂ ಧರ್ಮದಿಂದ ನಡೆಯುವುದೇ ಮಾನವ ಧರ್ಮ : ಮಾಜಿ ಸಚಿವ ಬಾಲಚಂದ್ರ
ಮೂಡಲಗಿ ಜ 29: ನ್ಯಾಯ-ನೀತಿ ಹಾಗೂ ಧರ್ಮದಿಂದ ನಡೆಯುವುದೇ ಮಾನವ ಧರ್ಮ. ಮತ್ತೊಬ್ಬರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ರವಿವಾರ ರಾತ್ರಿ ಸಮೀಪದ ಶಿವಾಪೂರ(ಹ) ಗ್ರಾಮದಲ್ಲಿ ಆಯ್‍ಎಂಎಸ್‍ಟಿ ಚರ್ಚ ಮತ್ತು ಯೇಸುಕ್ರಿಸ್ತ ಯುವಕ ಸಂಘವು ಜಂಟಿಯಾಗಿ ಇಲ್ಲಿಯ ಸ.ಹಿ.ಪ್ರಾ.ಶಾಲೆಯ ಮೈದಾನದಲ್ಲಿ ಹಮ್ಮಿಕೊಂಡಿದ್ದ ಅದ್ಬುತ್ ಪ್ರಾರ್ಥನಾ ಕೂಟಗಳ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಎಲ್ಲ ಧರ್ಮಗಳು ಕಷ್ಟದಲ್ಲಿರುವ ಜನರಿಗೆ ಸಹಾಯಹಸ್ತ ಮಾಡುವಂತೆ ಹೇಳಿವೆ. ನಮ್ಮಲ್ಲಿರುವ ಸಂಪತ್ತಿನಲ್ಲಿ ಸಮಾಜದಲ್ಲಿರುವ ದುಸ್ತರ ಕುಟುಂಬಗಳಿಗೆ ನೆರವು ನೀಡುವಂತಾಗಬೇಕು. ನಮ್ಮಿಂದ ಮತ್ತೊಬ್ಬರ ಕುಟುಂಬಗಳು ನೆನಪಿಸುವಂತೆ ಆಗಬೇಕು. ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಹಾಯಹಸ್ತ ನೀಡಿದರೆ ನಮ್ಮ ಖಜಾನೆ ಖಾಲಿಯಾಗುವುದಿಲ್ಲ. ಬದಲಾಗಿ ಇನ್ನಷ್ಟು ಖಜಾನೆ ವೃದ್ಧಿಯಾಗುತ್ತದೆ ಎಂದು ಮೂರು ಧರ್ಮಗಳ ಪವಿತ್ರ ಗ್ರಂಥಗಳು ಸಾರಿವೆ ಎಂದರು.
ಗಳಿಸಿರುವ ಸಂಪತ್ತಿನಲ್ಲಿ ಸ್ಪಲ್ಪನ್ನಾದರೂ ದಾನ ಮಾಡಿದರೆ ನಮಗೆ ಪುಣ್ಯ ಪ್ರಾಪ್ತಿ ಲಭಿಸುತ್ತದೆ. ನಮ್ಮಿಂದ ಸಮಾಜಕ್ಕೆ ಯಾವುದಾದರೂ ರೂಪದಲ್ಲಿಯಾದರೂ ನೆರವು ನೀಡಿ ಮಾನವೀಯತೆ ಮೆರೆಯಬೇಕೆಂದು ಅವರು ಹೇಳಿದರು.
ಕ್ರೈಸ್ತ ಧರ್ಮ ಮಾನವೀಯ ಮೌಲ್ಯಗಳಿಗೆ ಹೆಸರುವಾಸಿಯಾದ ಧರ್ಮವಾಗಿದೆ. ಪ್ರಪಂಚದಾದ್ಯಂತ ಈ ಧರ್ಮ ವಿಶಾಲವಾಗಿ ಆವರಿಸಿದೆ. ಅಲ್ಲದೇ ಪ್ರಪಂಚದಲ್ಲಿ ಈ ಧರ್ಮವು ಅತೀ ದೊಡ್ಡ ಧರ್ಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಯೇಸುಕ್ರಿಸ್ತ ಸಾರಿದ ಸಂದೇಶಗಳು ಎಲ್ಲರಿಗೂ ಅನ್ವಯವಾಗುತ್ತವೆ. ಅವರ ತತ್ವ ಹಾಗೂ ಸಂದೇಶಗಳನ್ನು ಪಾಲಿಸಿಕೊಂಡು ಸಮಾಜದಲ್ಲಿ ಉತ್ತಮ ಸಂಸ್ಕಾರವಂತರಾಗಿ ಬದುಕುವಂತೆ ಹೇಳಿದರು.
ಕ್ರಿಶ್ಚಿಯನ್ ಧರ್ಮಿಯರು ಅಲ್ಲಲ್ಲಿ ಪ್ರಾರ್ಥನಾ ಕೂಟಗಳನ್ನು ಏರ್ಪಡಿಸುವ ಮೂಲಕ ಬಾಂಧವರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಪ್ರಶಂಸನೀಯವೆಂದು ಶ್ಲಾಘಿಸಿದರು.
ದೈವ ಸಂದೇಶಕರಾಗಿ ಫಾ.ಜಿ.ಇಳಂಗೋ ನಾಯ್ಕ ಸಹೋ ಮತ್ತು ಡೆವಿಡ್ ಇ ಆಗಮಿಸಿದ್ದರು.
ಅಧ್ಯಕ್ಷತೆಯನ್ನು ಮುಖಂಡ ಶಿವನಗೌಡ ಪಾಟೀಲ ವಹಿಸಿದ್ದರು.
ಪ್ರಭಾಶುಗರ ಅಧ್ಯಕ್ಷ ಅಶೋಕ ಪಾಟೀಲ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಫಾ.ಕೃಷ್ಣೋಪರ ವಿಲಿಯಂ, ಮೂಡಲಗಿ ಪುರಸಭೆ ಮಾಜಿ ಅಧ್ಯಕ್ಷರಾದ ವೀರಣ್ಣಾ ಹೊಸೂರ, ರವಿ ಸಣ್ಣಕ್ಕಿ, ಫಾ.ಕಾಲೇಬ, ಫಾ.ಕೆಂಪಣ್ಣಾ ಅಂದಾಣಿ, ಫಾ.ಪ್ರಕಾಶ ತಳವಾರ, ವಿಠ್ಠಲ ಹೊಸಮನಿ, ಗಿರೀಶ ನಾಯಿಕ, ರೇ.ಬಾಬು ವರ್ಗಿಸ್, ಫಾ.ಮಂಜು ನೇಹಮಿಯಾ, ಯಮನಪ್ಪ ಕರಬನ್ನವರ, ಪಿಎಸ್‍ಐ ಎಚ್.ವೈ. ಬಾಲದಂಡಿ, ಮರೆಪ್ಪ ಮರೆಪ್ಪಗೋಳ, ರಮೇಶ ಸಣ್ಣಕ್ಕಿ, ಸುಭಾಸ ಸಣ್ಣಕ್ಕಿ, ಪ್ರಕಾಶ ಕೆಳಗಡೆ, ಈರಣ್ಣಾ ಬನ್ನೂರ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದ ನೇತೃತ್ವವನ್ನು ಸ್ಥಳೀಯ ಆಯ್‍ಎಂಎಸ್‍ಟಿ ಚರ್ಚಿನ ಸಭಾಪಾಲಕ ಫಾ.ಮಹಾದೇವ ವಹಿಸಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಧಿಕಾರ-ಆಯುರಾರೋಗ್ಯ-ಭಾಗ್ಯ ನೀಡಿ ಯೇಸು ಕರುಣಿಸಲಿ ಎಂದು ಇಳಂಗೋ ನಾಯ್ಕ ಸಹೋ ಹಾಗೂ ಡೆವಿಡ್ ಇ ಪ್ರಾರ್ಥಸಿದರು.