ಘಟಪ್ರಭಾ: ಅರಭಾವಿ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಉನ್ನತಿಕರಿಸಿದ ಹೊಸ ಪ್ರೌಢ ಶಾಲೆಗಳು ಮಂಜೂರು : ಶಾಸಕ ಬಾಲಚಂದ್ರ

ಅರಭಾವಿ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಉನ್ನತಿಕರಿಸಿದ ಹೊಸ ಪ್ರೌಢ ಶಾಲೆಗಳು ಮಂಜೂರು : ಶಾಸಕ ಬಾಲಚಂದ್ರ
ಘಟಪ್ರಭಾ ಜೂ 30 : ಅರಭಾವಿ ಮತಕ್ಷೇತ್ರದ ಹಡಗಿನಾಳ, ಅರಳಿಮಟ್ಟಿ ಮತ್ತು ಮುನ್ಯಾಳ ಗ್ರಾಮಗಳಿಗೆ ಪ್ರಸಕ್ತ ಸಾಲಿನಿಂದ ಉನ್ನತಿಕರಿಸಿದ ಹೊಸ ಪ್ರೌಢ ಶಾಲೆಗಳು ಮಂಜೂರಾಗಿವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಶನಿವಾರದಂದು ಸಮೀಪದ ಅರಭಾವಿ ಪಟ್ಟಣಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು ಉನ್ನತಿಕರಿಸಿದ 6 ಹೊಸ ಪ್ರೌಢ ಶಾಲೆಗಳು ಆರಂಭಗೊಂಡಿದ್ದು, ಇದರಲ್ಲಿ ಮೂಡಲಗಿ ಶೈಕ್ಷಣಿಕ ವಲಯಕ್ಕೆ 3 ಹೊಸ ಪ್ರೌಢ ಶಾಲೆಗಳು ಮಂಜೂರಾಗಿವೆ ಎಂದು ಹೇಳಿದರು.
ಪಟ್ಟಣದ ಸಾರ್ವಜನಿಕರಿಗೆ ಅಕ್ರಮ-ಸಕ್ರಮ ನಿವೇಶನದ ಹಕ್ಕುಪತ್ರಗಳನ್ನು ವಿತರಿಸುವಂತೆ ತಹಶೀಲ್ದಾರ ಅವರಿಗೆ ಸೂಚಿಸಲಾಗಿದ್ದು, ಅರಭಾವಿ ನಾಡ ಕಛೇರಿಯಲ್ಲಿಯೇ ಸಾರ್ವಜನಿಕರಿಗೆ ಕಂದಾಯ ಇಲಾಖೆಗೆ ಸಂಬಂಧಪಟ್ಟ ದಾಖಲಾತಿಗಳು ದೊರೆಯಲಿವೆ ಎಂದು ಹೇಳಿದರು.
ಅರಭಾವಿ ಪಟ್ಟಣದಲ್ಲಿ 10 ಎಕರೆ ಜಾಗೆಯನ್ನು ಡಾ:ಬಿ.ಆರ್. ಅಂಬೇಡ್ಕರ ವಸತಿ ಶಾಲೆಗೆ ನೀಡಲಾಗಿದೆ. ಇದಕ್ಕಾಗಿ 18 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವಣೆ ಸಲ್ಲಿಸಲಾಗಿದೆ. ಸಹಾಯಕ ಪ್ರಾದೇಶಿಕ ಸಾರಿಗೆ ಕಛೇರಿ ನಿರ್ಮಾಣಕ್ಕೆ ಅರಭಾವಿಯಲ್ಲಿ 8 ಎಕರೆ ಜಾಗೆ ನೀಡಲಾಗಿದೆ. ಜಿಟಿಸಿ ಕಾಲೇಜ್‍ಗೆ 10 ಎಕರೆ ನಿವೇಶನ ನೀಡಲಾಗಿದೆ ಎಂದು ಹೇಳಿದರು.
5ನೇ ಬಾರಿ ಆಯ್ಕೆ ಮಾಡಿದ್ದಕ್ಕೆ ಅಭಿನಂದನೆ : ಮೇ 12 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಸತತ 5ನೇ ಬಾರಿಗೆ ಆಯ್ಕೆ ಮಾಡಿದ ಮತದಾರರನ್ನು ಅಭಿನಂದಿಸಿದ ಅವರು, ಜನರ ಪ್ರೀತಿ-ವಿಶ್ವಾಸಕ್ಕೆ ಯಾವುದೇ ಚ್ಯುತಿ ಬರದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದಾಗಿ ಹೇಳಿದರು. ಅರಭಾವಿ ಪಟ್ಟಣದ ಅಭಿವೃದ್ಧಿಗೂ ಸಹ ಸರ್ಕಾರದಿಂದ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಶಾಸಕರಿಗೆ ಸತ್ಕಾರ : ಶಾಸಕರಾಗಿ ಪ್ರಥಮ ಬಾರಿಗೆ ಅರಭಾವಿ ಪಟ್ಟಣಕ್ಕೆ ಆಗಮಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸಾರ್ವಜನಿಕರು ಹೃದಯಸ್ಪರ್ಶಿಯಾಗಿ ಸತ್ಕರಿಸಿದರು. ಪಟ್ಟಣ ಪಂಚಾಯತಿ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸೇರಿದಂತೆ ಇನ್ನುಳಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಶಾಸಕರನ್ನು ಸತ್ಕರಿಸಿದರು.
ಜಿಪಂ ಮಾಜಿ ಸದಸ್ಯ ಶಂಕರ ಬಿಲಕುಂದಿ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಮುತ್ತೆಪ್ಪ ಜಲ್ಲಿ, ಘಯೋನೀಬ ಮಹಾಮಂಡಳದ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ನಿಂಗಪ್ಪ ಇಳಿಗೇರ, ಭೀಮಪ್ಪ ಹಳ್ಳೂರ, ಕೆಂಪಣ್ಣಾ ಕಡಲಗಿ, ರಮೇಶ ಮಾದರ, ರಾಯಪ್ಪ ಬಂಡಿವಡ್ಡರ, ಪಿಕೆಪಿಎಸ್ ಅಧ್ಯಕ್ಷ ದೇವೇಂದ್ರ ಅರಭಾವಿ, ಬಾಳೇಶ ಜಾಧವ, ಅರಭಾವಿ ಗ್ರಾಪಂ ಮಾಜಿ ಅಧ್ಯಕ್ಷರಾದ ಸಾತಪ್ಪ ಜೈನ್, ಯಲ್ಲಪ್ಪ ಸತ್ತಿಗೇರಿ, ಲಕ್ಷ್ಮಣ ನಿಂಗನ್ನವರ, ಬಸವರಾಜ ಆಲೋಶಿ, ವಿಠ್ಠಲ ದೇವುಗೋಳ, ಪಟ್ಟಣ ಪಂಚಾಯತ ಸರ್ವ ಸದಸ್ಯರು ಹಾಗೂ ಪಿಕೆಪಿಎಸ್ ಸದಸ್ಯರುಗಳು, ಅರಭಾವಿ ಪಟ್ಟಣ ಪಂಚಾಯತ ವ್ಯಾಪ್ತಿಯ ಮುಖಂಡರು ಉಪಸ್ಥಿತರಿದ್ದರು.