RNI NO. KARKAN/2006/27779|Wednesday, October 15, 2025
You are here: Home » breaking news » ಮೂಡಲಗಿ:ಶಬರಿಮಲೆ ಅಯ್ಯಪ್ಪಸ್ವಾಮಿಯು ರಾಷ್ಟ್ರೀಯ ಭಾವೈಕ್ಯತೆಯ ಸಂಕೇತ : ಶಾಸಕ ಬಾಲಚಂದ್ರ

ಮೂಡಲಗಿ:ಶಬರಿಮಲೆ ಅಯ್ಯಪ್ಪಸ್ವಾಮಿಯು ರಾಷ್ಟ್ರೀಯ ಭಾವೈಕ್ಯತೆಯ ಸಂಕೇತ : ಶಾಸಕ ಬಾಲಚಂದ್ರ 

ಶಬರಿಮಲೆ ಅಯ್ಯಪ್ಪಸ್ವಾಮಿಯು ರಾಷ್ಟ್ರೀಯ ಭಾವೈಕ್ಯತೆಯ ಸಂಕೇತ : ಶಾಸಕ ಬಾಲಚಂದ್ರ

ಮೂಡಲಗಿ ಡಿ 31: ದೇಶ-ವಿದೇಶಗಳಿಂದ ಕೋಟಿ-ಕೋಟಿ ಭಕ್ತರನ್ನು ತನ್ನೆಡೆಗೆ ಆಕರ್ಷಿಸುವ ಶಬರಿಮಲೆ ಅಯ್ಯಪ್ಪಸ್ವಾಮಿಯು ರಾಷ್ಟ್ರೀಯ ಭಾವೈಕ್ಯತೆಯ ಸಂಕೇತವೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿಗೆ ಸಮೀಪದ ಮಸಗುಪ್ಪಿ ಗ್ರಾಮದ ಮಹಾಲಕ್ಷ್ಮೀ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಕಳೆದ ಶುಕ್ರವಾರ ರಾತ್ರಿ ಜರುಗಿದ ಅಯ್ಯಪ್ಪಸ್ವಾಮಿ ಮಹಾಪೂಜೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಕಳೆದ 19 ವರ್ಷಗಳಿಂದ ಕಠಿಣ ವೃತ ಪಾಲಿಸಿಕೊಂಡು ಅಯ್ಯಪ್ಪನ ಕೃಪೆಗೆ ಪಾತ್ರರಾಗುತ್ತಿರುವುದು ಶ್ಲಾಘನೀಯವೆಂದರು.
ವಿಶ್ವದ ಅತ್ಯಂತ ಹೆಚ್ಚು ಭಕ್ತ ಸಮೂಹವನ್ನು ಸಂದರ್ಶಿಸುವ ಧಾರ್ಮಿಕ ತಾಣಗಳಲ್ಲೊಂದಾದ ಶಬರಿಮಲೆ ಅಯ್ಯಪ್ಪ, ಮೆಕ್ಕಾದ ಹಜ್ ಬಳಿಕ ವಿಶ್ವದ ಅತೀ ದೊಡ್ಡ ವಾರ್ಷಿಕ ಯಾತ್ರಾ ಕೇಂದ್ರವಾಗಿದೆ ಎಂದು ಹೇಳಿದರು. ಕಲಿಯುಗದ ವರದನಾಗಿ ನೆಲೆ ನಿಂತಿರುವ ಅಯ್ಯಪ್ಪಸ್ವಾಮಿ ಕೇರಳ-ತಮಿಳುನಾಡು ಗಡಿಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ದಟ್ಟ ಅರಣ್ಯಗಳಿರುವ ಫೂಂಗಾವಣಂ ಎಂಬ 18 ಪರ್ವತಗಳಿಂದ ಈ ಕ್ಷೇತ್ರ ಆವೃತ್ತವಾಗಿದ್ದು, ಅಯ್ಯಪ್ಪಸ್ವಾಮಿ ವಿಗ್ರಹವನ್ನು ಪರಶುರಾಮನು ಸ್ಥಾಪಿಸಿದನೆಂಬ ಪ್ರತೀತಿಯೂ ಇದೆ ಎಂದು ದೇವಸ್ಥಾನದ ಇತಿಹಾಸವನ್ನು ವಿವರಿಸಿದರು.

ಮಸಗುಪ್ಪಿಯಲ್ಲಿ ನಡೆದ ಅಯ್ಯಪ್ಪಸ್ವಾಮಿ 19ನೇ ವರ್ಷದ ಮಹಾಪೂಜೆಯಲ್ಲಿ ಪಾಲ್ಗೊಂಡು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಯ್ಯಪ್ಪಸ್ವಾಮಿಯ ಮೆಟ್ಟಿಲುಗಳಿಗೆ ದೀಪ ಪ್ರಜ್ವಲನ ಮಾಡುತ್ತಿರುವುದು.

ಜ.10 ರಂದು ನೀರು ಬಿಡುಗಡೆ : ರೈತಾಪಿ ಸಮೂಹದ ಒಳತಿಗಾಗಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ, ಬಲದಂಡೆ ಹಾಗೂ ಸಿಬಿಸಿ ಕಾಲುವೆಗಳಿಗೆ ಜನೇವರಿ 10 ರಿಂದ ನೀರು ಹರಿಸಲು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ. ನೀರು ಹರಿಸುವುದರ ಬಗ್ಗೆ ಸಚಿವರು ಪೂರಕವಾಗಿ ಸ್ಪಂದಿಸಿದ್ದಾರೆಂದು ಹೇಳಿದರು.
ಮಸಗುಪ್ಪಿ ಗ್ರಾಮದಲ್ಲಿ ಹಲವು ಕಲ್ಯಾಣಪರ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದ್ದು, ಅಭಿವೃದ್ಧಿ ಕಾರ್ಯಗಳಲ್ಲಿ ಎಲ್ಲರನ್ನು ಒಟ್ಟಾಗಿ ಸೇರಿಸಿಕೊಂಡು ಹೋಗಲಾಗುತ್ತಿದೆ. ಮಸಗುಪ್ಪಿಯೂ ಸೇರಿದಂತೆ ಅರಭಾವಿ ಮತಕ್ಷೇತ್ರದ ಸರ್ವತೋಮುಖ ಏಳ್ಗೆಗೆ ಸದಾ ಬದ್ಧನಿರುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಸುಣಧೋಳಿಯ ಶಿವಾನಂದ ಸ್ವಾಮಿಗಳು ಮಾತನಾಡಿ, ಶಾಸಕನೆಂದರೆ ಹೇಗಿರಬೇಕೆಂಬುದನ್ನು ಬಾಲಚಂದ್ರ ಜಾರಕಿಹೊಳಿ ಅವರು ಜನತೆಗೆ ತೋರಿಸಿಕೊಟ್ಟಿದ್ದಾರೆ. ಅಭಿವೃದ್ಧಿಯ ಹರಿಕಾರರಾಗಿರುವ ಇವರು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮದೇಯಾದ ವಿಶಿಷ್ಟ ಛಾಪು ಮೂಡಿಸಿರುವ ಹೆಮ್ಮೆಯ ಜನನಾಯಕರಾಗಿದ್ದಾರೆ. ಇಂತಹ ಶಾಸಕರನ್ನು ಅರಭಾವಿ ಕ್ಷೇತ್ರ ಪಡೆದಿರುವುದು ನಿಜಕ್ಕೂ ಧನ್ಯ ಎಂದು ಶ್ಲಾಘಿಸಿದರು.
ತಪಸಿಯ ಸುರೇಶ ಮಹಾರಾಜರು, ವೆಂಕಟೇಶ ಗುರುಸ್ವಾಮಿ, ಮಲ್ಲಪ್ಪ ಸ್ವಾಮಿ, ಮಹಾಂತೇಶ ಸ್ವಾಮಿ, ಸಂಜು ಹೊಸಕೋಟಿ, ಭರಮಪ್ಪ ಆಶಿರೊಟ್ಟಿ, ಬಸು ಭುಜನ್ನವರ, ಭೀಮಶಿ ಆಶಿರೊಟ್ಟಿ, ಮುರಿಗೆಪ್ಪ ಗಾಡವಿ, ವಿರುಪಾಕ್ಷಿ ಕೊಳವಿ, ಮುಂತಾದವರು ಉಪಸ್ಥಿತರಿದ್ದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸಕಲ ಅಯ್ಯಪ್ಪಸ್ವಾಮಿ ಸದ್ಬಕ್ತರಿಂದ ಸತ್ಕರಿಸಲಾಯಿತು.

Related posts: