RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಜಾರಕಿಹೊಳಿ ಸಹೋದರರಂತಹ ಶಿಷ್ಯರನ್ನು ಪಡೆದಿರುವುದು ನನ್ನ ಭಾಗ್ಯ : ಎಂ ಎ ಕುಂಬಾರಿ

ಗೋಕಾಕ:ಜಾರಕಿಹೊಳಿ ಸಹೋದರರಂತಹ ಶಿಷ್ಯರನ್ನು ಪಡೆದಿರುವುದು ನನ್ನ ಭಾಗ್ಯ : ಎಂ ಎ ಕುಂಬಾರಿ 

ಜಾರಕಿಹೊಳಿ ಸಹೋದರರಂತಹ ಶಿಷ್ಯರನ್ನು ಪಡೆದಿರುವುದು ನನ್ನ ಭಾಗ್ಯ : ಎಂ ಎ ಕುಂಬಾರಿ

1981-82ನೇ ಸಾಲಿನ ಎಂ.ಎಚ್.ಎಸ್ ಹೈಸ್ಕೂಲಿನ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿ ಬಳಗದಿಂದ ಗುರುವಂದನೆ ಕಾರ್ಯಕ್ರಮ.

ಗೋಕಾಕ ಡಿ 16 : ನನ್ನ ಕೈಯಲ್ಲಿ ಕಲಿತ ಮೂವರು ವಿದ್ಯಾರ್ಥಿಗಳಿಂದು ಶಾಸಕರಾಗಿ, ಸಚಿವರಾಗಿ ಜನಸೇವೆ ಮಾಡುತ್ತಿರುವುದನ್ನು ನೋಡಿ ತುಂಬಾ ಖುಷಿಯಾಗುತ್ತಿದೆ. ರಮೇಶ, ಸತೀಶ ಹಾಗೂ ಬಾಲಚಂದ್ರ ಅವರಂತಹ ಸಹೋದರರಿಗೆ ಪಾಠ ಮಾಡಿದ ಘಳಿಗೆ ಸ್ಮರಣೀಯವಾಗಿದೆ ಎಂದು ನಿವೃತ್ತ ಶಿಕ್ಷಕ ಎಂ.ಎ. ಕುಂಬಾರಿ ಭಾವುಕರಾಗಿ ಹೇಳಿದರು.
ನಗರದ ಶುಭಂ ಗಾರ್ಡನ್‍ನಲ್ಲಿ ಶನಿವಾರದಂದು 1981-82ನೇ ಸಾಲಿನ ಎಂ.ಎಚ್. ಹೈಸ್ಕೂಲಿನ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿ ಬಳಗದಿಂದ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಶಿಷ್ಯ ಸಮೂಹದಿಂದ ಸತ್ಕಾರ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಈ ಮೂವರು ಜಾರಕಿಹೊಳಿ ಸಹೋದರರು ಸಮಾಜಮುಖಿ ಕಾರ್ಯಗಳಿಂದ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಜೊತೆಗೆ ಐವರು ಅಣ್ಣ-ತಮ್ಮಂದಿರರಿಗೆ ವಿದ್ಯೆ ಕಲಿಸಿದ ಗುರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಔದ್ಯೋಗಿಕ, ಆರ್ಥಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಉನ್ನತಿ ಮತ್ತು ಪ್ರಗತಿಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯವೆಂದು ಪ್ರಶಂಸಿಸಿದರು.
ಅರಭಾವಿ ಕ್ಷೇತ್ರದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶೈಕ್ಷಣಿಕ ಕ್ರಾಂತಿ ಮಾಡುತ್ತಿದ್ದಾರೆ. ಕಡಿಮೆ ಶಿಕ್ಷಣ ಹೊಂದಿದ್ದರೂ ಸರ್ಕಾರಿ ಪ್ರೌಢ ಶಾಲೆಗಳು, ವಸತಿ ಶಾಲೆಗಳು, ವಸತಿ ನಿಲಯಗಳನ್ನು ಆರಂಭಿಸುವ ಮೂಲಕ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಪಾಲಿಗೆ ದಾರಿದೀಪವಾಗಿದ್ದಾರೆ. ಜನಸೇವೆಯೇ ಜನಾರ್ದನ ಸೇವೆ ಎಂದು ಭಾವಿಸಿಕೊಂಡು ಕ್ಷೇತ್ರದ ಅಮೂಲಾಗ್ರ ಬದಲಾವಣೆಗೆ ಶ್ರಮಿಸುತ್ತಿರುವ ಬಾಲಚಂದ್ರ ಜಾರಕಿಹೊಳಿ ಅವರು ಇತ್ತೀಚೆಗೆ ಆಘಾತಕಾರಿ ಸುದ್ಧಿಯೊಂದನ್ನು ನೀಡಿರುವುದು ನನಗೆ ನಿಜಕ್ಕೂ ಬೇಸರವೆನಿಸುತ್ತದೆ. ತಮ್ಮ 60ನೇ ವಯಸ್ಸಿಗೆ ರಾಜಕೀಯ ನಿವೃತ್ತಿ ಬಯಸಿರುವ ಬಾಲಚಂದ್ರ ಅವರು ಕೊನೆಯುಸಿರುವರೆಗೆ ಜನಸೇವೆ ಮಾಡಬೇಕೆಂಬುದು ನನ್ನ ಬಯಕೆಯಾಗಿದೆ. ರಾಜಕಾರಣಿಗಳಿಗೆ ವಯಸ್ಸಿನ ಮಿತಿ ಇಲ್ಲ. ಅದರಲ್ಲೂ ಬಾಲಚಂದ್ರ ಅವರಂತಹ ಹೃದಯವಂತ, ದಾನವಂತ, ಕರುಣಾಮಯಿ, ಧರ್ಮವಂತ ವ್ಯಕ್ತಿಗೆ ನಿವೃತ್ತಿ ಎನ್ನುವ ಪದ ಅನ್ವಯವಾಗುವುದಿಲ್ಲವೆಂದು ಹೇಳಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡುತ್ತಿರುವುದು.

ಈಗಲೂ ಜಾರಕಿಹೊಳಿ ಸಹೋದರರು ಕಲಿತ ಶಾಲೆ, ಕಲಿಸಿದ ಗುರುಗಳ ಬಗ್ಗೆ ಅಪಾರ ಅಭಿಮಾನ ಹೊಂದಿದ್ದಾರೆ. ದೇವರಿಗೆ ನೀಡುವಷ್ಟು ಗೌರವವನ್ನು ಶಾಲೆ ಹಾಗೂ ಶಿಕ್ಷಕರಿಗೆ ನೀಡುತ್ತಿದ್ದಾರೆ. ಶಾಲೆಗೆ ಹಾಯ್ದುಹೋಗುವ ಸಂದರ್ಭದಲ್ಲಿ ಶಾಲೆಗೆ ನಮಸ್ಕರಿಸುವ ಪರಿಪಾಠ ರೂಢಿಸಿಕೊಂಡಿರುವುದು ಅವರ ಸಂಸ್ಕಾರವನ್ನು ಎತ್ತಿ ತೋರಿಸುತ್ತದೆ. 81-82ನೇ ಸಾಲಿನ ವಿದ್ಯಾರ್ಥಿಗಳನ್ನು ಪಡೆದಿರುವುದು ನನ್ನ ಭಾಗ್ಯ ಎಂದು ತಿಳಿಸಿದರು.
ಎಂ.ಎಚ್. ಹೈಸ್ಕೂಲಿನ ಹಳೆಯ ವಿದ್ಯಾರ್ಥಿ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡುತ್ತ, ನಾನು ಹೆಚ್ಚು ಶಿಕ್ಷಣ ಪಡೆಯದಿದ್ದರೂ ನಿಮ್ಮ ಆಶೀರ್ವಾದದ ಫಲದಿಂದ ಅರಭಾವಿ ಕ್ಷೇತ್ರದ ಶಾಸಕನಾಗಿದ್ದುಕೊಂಡು ಶಿಕ್ಷಣದ ಅಮೂಲಾಗ್ರ ಬದಲಾವಣೆಗೆ ಶ್ರಮಿಸುತ್ತಿದ್ದೇನೆ. 18 ಹೊಸ ಸರ್ಕಾರಿ ಪ್ರೌಢ ಶಾಲೆಗಳನ್ನು ಆರಂಭಿಸಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದೇನೆ. ಇದುವೇ ನಾನು ನಿಮಗೆ ಅರ್ಪಿಸುವ ಗುರುದಕ್ಷಿಣೆ ಎಂದು ಹೇಳಿದರು.
ತಾಲೂಕಿನಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು ವಸತಿ ಶಾಲೆಗಳನ್ನು ಆರಂಭಿಸಿದ್ದೇನೆ. ಮೂಡಲಗಿ ವಲಯ ರಾಜ್ಯದಲ್ಲಿಯೇ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿರುವುದು ಸಾಧನೆಯಾಗಿದೆ. ಸರ್ಕಾರಿ ಶಾಲೆಗಳಲ್ಲಿ 37,543 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದೂ ಕೂಡ ರಾಜ್ಯದಲ್ಲಿಯೇ ಸರ್ವಕಾಲಿಕ ದಾಖಲೆಯಾಗಿದೆ ಎಂದು ಹೇಳಿದರು. ಸಮಾಜದ ಶ್ರೇಯೋಭಿವೃದ್ಧಿಗೆ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತಿದೆ. ಸಮಾಜ ತಿದ್ದಲು ಶಿಕ್ಷಣವೊಂದೇ ಪ್ರಭಲ ಅಸ್ತ್ರವಾಗಿದೆ. ಶಾಸಕನಾಗಿ, ಸಚಿವನಾಗಿ ಜನಮುಖಿ ಕಾರ್ಯಗಳನ್ನು ಕೈಗೊಳ್ಳಲು ವಿದ್ಯಾಗುರುಗಳ ಆಶೀರ್ವಾದವೇ ನನಗೆ ಶ್ರೀರಕ್ಷೆಯಾಗಿದೆ. ಇಂತಹ ಗುರುಗಳನ್ನು ಪಡೆದಿರುವುದು ನನ್ನ ಪುಣ್ಯವೆಂದು ಹೇಳಿದರು. ವಿದ್ಯಾರ್ಥಿ ಜೀವನದ ಘಟನೆಗಳನ್ನು ಮೆಲಕು ಹಾಕಿಕೊಂಡರು.
ಗುರುಗಳಾದ ಐ.ಎಂ. ರಾಯರ, ಪಿ.ಕೆ. ಕದಂ, ಎಸ್.ಜಿ. ಮುಂಗರವಾಡಿ, ಎಂ.ಎಸ್. ಪಟ್ಟಣಶೆಟ್ಟಿ, ಜಿ.ಡಿ. ಹಿರೇಮಠ, ಪಿ.ಪಿ. ತೇರದಾಳ, ಎಸ್.ಡಿ. ಮಲ್ಲಾಪುರಿ, ಪಿ.ಕೆ. ಕೊಟ್ರಶೆಟ್ಟಿ, ಆರ್.ಎ. ಹಿರೇಮಠ, ಎಲ್.ಎಸ್. ಮಂಗಿ ಅವರನ್ನು ಶಿಷ್ಯರು ಹೃದಯತುಂಬಿ ಸತ್ಕರಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸಹ ಸತ್ಕರಿಸಿದ ಗುರುವೃಂದ ರಾಜಕೀಯದಲ್ಲಿ ಇನ್ನೂ ಉನ್ನತ ಸ್ಥಾನ ಅಲಂಕರಿಸಲಿ ಎಂದು ಹಾರೈಸಿದರು.

Related posts: