ಕೌಜಲಗಿ:ಗೋಕಾಕ ಜಿಲ್ಲೆ : ಕೌಜಲಗಿ ತಾಲೂಕಾಗಲಿ

ಗೋಕಾಕ ಜಿಲ್ಲೆ : ಕೌಜಲಗಿ ತಾಲೂಕಾಗಲಿ
ಕೌಜಲಗಿ ಡಿ 16 : ಗೋಕಾಕ ಜಿಲ್ಲಾ ರಚನೆಗೆ ಕೌಜಲಗಿ ಜನರ ಸಂಪೂರ್ಣ ಬೆಂಬಲವಿದೆ. ಹಾಗೆಯೇ ಕೌಜಲಗಿ ತಾಲೂಕು ರಚನೆಗೂ ಗೋಕಾಕ ಮತ್ತು ಮೂಡಲಗಿ ಜನ ಬೆಂಬಲಕ್ಕೆ ನಿಲ್ಲುವುದು ಈ ಸಂದರ್ಭದಲ್ಲಿ ಮಹತ್ವದ್ದಾಗಿದೆ ಎಂದು ನಿಯೋಜಿತ ಕೌಜಲಗಿ ತಾಲೂಕು ಹೋರಾಟ ಸಮಿತಿ ತಿಳಿಸಿದೆ.
ಕರ್ನಾಟಕದ 29 ಜಿಲ್ಲೆಗಳಲ್ಲಿ ಬೆಳಗಾವಿ ಅತೀ ದೊಡ್ಡ ಜಿಲ್ಲೆಯಾಗಿದೆ. 2 ಲೋಕಸಭಾ ಕ್ಷೇತ್ರಗಳು, 18 ವಿಧಾನಸಭಾ ಕ್ಷೇತ್ರಗಳು ಹಾಗೂ 14 ತಾಲೂಕುಗಳನ್ನೊಳಗೊಂಡಿದೆ. ಶೈಕ್ಷಣಿಕವಾಗಿ ಬೆಳಗಾವಿ ಎರಡೆರಡು ಭಾಗಗಳಾಗಿ ಹಂಚಿ ಹೋಗಿದೆ.
“ಕಾಗವಾಡದಿಂದಾಂ ಜಾಂಬೋಟಿಯವರೆಗಿರ್ದ ಜಿಲ್ಲೆ ಬೆಳಗಾವಿಯಂ” ಎಂದು ಕವಿಗಳು ಹಾಡಿ ಹೊಗಳುವಂತಾಗಿದೆ. ಭೌಗೋಳಿಕವಾಗಿ ಸಾವಿರಾರು ಚದರ ಕಿ.ಮೀ. ನಲ್ಲಿ ವಿಸ್ತಾರಗೊಂಡ ಬೆಳಗಾವಿ ಜಿಲ್ಲೆ ವಿಭಜನೆ ಮಾಡಬೇಕಾದುದು ತೀರಾ ಅಗತ್ಯ. ಆದರೆ ಮಹಾರಾಷ್ಟ್ರದ ಗಡಿ ಭಾಗದ ಜಿಲ್ಲೆಯಾಗಿರುವುದರಿಂದ ಬೆಳಗಾವಿ ಕಳೆದು ಹೋಗುವ ಭೀತಿಯು ಕನ್ನಡಿಗರನ್ನು ಕಾಡುತ್ತಿದೆ. ಜಿಲ್ಲೆಯ ವಿಭಜನೆಯಿಂದ ಅನುಕೂಲ ಮತ್ತು ಅನಾನುಕೂಲತೆಗಳು ಸಾಕಷ್ಟಿವೆ. ಗಡಿ ಸಮಸ್ಯೆ ಸುಪ್ರಿಂ ಕೋರ್ಟ ಅಂಗಳದಲ್ಲಿದೆ. ಮಹಾಜನ ವರದಿ ತೀರ್ಪು ಅಂತಿಮಗೊಂಡಿಲ್ಲ. ಹಾಗೇ ನೋಡಿದರೆ 1997 ರಲ್ಲಿಯೇ ಬೆಳಗಾವಿ ಜಿಲ್ಲೆ ವಿಭಜನೆಯಾಗಿ ನೂತನ ಜಿಲ್ಲೆಗಳು ಜನ್ಮ ತಾಳಿದ್ದವು. ಗಡಿ ಸಮಸ್ಯೆ ಇತ್ಯರ್ಥ ನೆಪದಲ್ಲಿ 20 ವರ್ಷಗಳಿಂದ ಜಿಲ್ಲೆ ವಿಭಜನೆಗೊಳ್ಳುತ್ತಿಲ್ಲ. ಇನ್ನೂ 20 ವರ್ಷ ಉರುಳಿದರೂ ಸಮಸ್ಯೆ ತಿಲಿಗೊಳ್ಳಲಾರದೆಂದು ಜನಾಭಿಪ್ರಾಯವಾಗಿದೆ. ಬೆಳಗಾವಿ ಹೀಗಾಗಿ ವಿಭಜನೆಗೊಳ್ಳದೆ ಉಳಿಯುತ್ತಲೇ ಬರುತ್ತಿದೆ. ಈ ಎಲ್ಲ ಸಮಸ್ಯೆಗಳ ಸುಳಿಯಲ್ಲಿ ಸಾಮಾನ್ಯ ರೈತರು ನಾಗರಿಕರು, ಮಹಿಳೆಯರು, ಮಕ್ಕಳು, ಕೂಲಿಕಾರರು, ನಿರ್ಗತಿಕರು ಸಿಲುಕಿ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 200-300 ಕಿ.ಮೀ. ದೂರದಿಂದ ಬೆಳಗಾವಿಗೆ ಬಂದು ಕೋರ್ಟ-ಕಚೇರಿ ಕೆಲಸಗಳನ್ನು ಸಾಮಾನ್ಯರು ಪೂರೈಸಿಕೊಳ್ಳಬೇಕಾಗಿದೆ. ಸಾವiನ್ಯರ ನೋವಿನ ಕಡೆಗೂ ಗಮನ ಹರಿಸಬೇಕಾಗಿದೆ.
ಗಡಿ ಸಮಸ್ಯೆಯೊಂದನ್ನೆ ಮುಂದಿಟ್ಟುಕೊಂಡು ಜಿಲ್ಲೆ ವಿಭಜನೆ ನಿರಕರಿಸುತ್ತ ಬಂದರೆ ಬಡವರ ಸ್ಥಿತಿ-ಗತಿಯ ವಿಚಾರವನ್ನು ಮಾಡಬೇಕಾಗಿದೆ. ಕಳೆದ 20 ವರ್ಷಗಳಿಂದಲೂ ಗಡಿ ಸಮಸ್ಯೆ ಇತ್ಯರ್ಥವಾದ ಮೇಲೆ ಜಿಲ್ಲೆ ವಿಭಜಿಸಲಾಗುವುದು ಎಂದು ಹೇಳಲಾಗುತ್ತದೆ ವಿನಃ ಸಮಸ್ಯೆ ಇತ್ಯರ್ಥ- ಜಿಲ್ಲೆ ವಿಭಜನೆ ಕಡೆ ಸರಕಾರ ಚಿಂತಿಸುತ್ತಿಲ್ಲ. ಬೆಳಗಾವಿ ಕನ್ನಡಿಗರ ಸ್ವತ್ತು. ಅದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಬೆಳಗಾವಿ ರಕ್ಷಣೆಗಾಗಿ ಸಮಸ್ತ 6 ಕೋಟಿ ಕನ್ನಡಿಗರೆಲ್ಲ ಮುಂದಾಗಿದ್ದಾರೆ. 6 ಕೋಟಿ ಜನರ ಗೆದ್ದು ಬೆಳಗಾವಿ ಕಸಿದುಕೊಳ್ಳಲು ಸಾಧ್ಯವಿಲ್ಲ. ಆದುದರಿಂದ -1997 ರಿಂದ ನೆಲೆಗುದ್ದಿಗೆ ಬಿದ್ದ ಜಿಲ್ಲಾ ವಿಭಜನೆ 2017 ರಲ್ಲಿಯಾದರೂ ಪೂರ್ಣಗೊಳ್ಳಲಿ.
ಜನವೇರಿ 26 ರಂದು ನೂತನ ಜಿಲ್ಲೆಗಳನ್ನು ಘೋಷಿಸುವುದಾದರೆ ಗೋಕಾಕಕ್ಕೆ ಮೊದಲು ಆದ್ಯತೆ ನೀಡಬೇಕು. 1997 ರಲ್ಲಿ ಜೆ.ಎಚ್.ಪಟೇಲರು ಗೋಕಾಕ ಜಿಲ್ಲೆಯೆಂದು ಅಧಿಸೂಚನೆ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗ ಪಟೇಲರ ರಾಜಕೀಯ ಶಾಲೆಯೇ ಕಲಿತು ಬೆಳೆದ ಸಿದ್ಧರಾಮಯ್ಯನವರು ಗೋಕಾಕ ಜಿಲ್ಲೆಯನ್ನು ರಚಿಸಬೇಕು. ಹಾಗೆಯೇ ಗೋಕಾಕ ತಾಲೂಕು ಭೌಗೋಳಿಕವಾಗಿ ಮೂರು ತಾಲೂಕುಗಳಾಗುವಷ್ಟು ವಿಸ್ತೀರ್ಣಗೊಂಡಿದೆ. ಈಗಾಗಲೇ ಒಂದು ಮೂಡಲಗಿ ತಾಲೂಕನ್ನು ಘೋಷಿಸಿದೆ. ಅದರಂತೆ ಇನ್ನೊಂದು ತಾಲೂಕಾಗುವಷ್ಟು ಹಳ್ಳಿಗಳನ್ನು ಒಳಗೊಂಡ ಗೋಕಾಕ ತಾಲೂಕನ್ನು ವಿಭಜಿಸಿ ಕೌಜಲಗಿ ತಾಲೂಕು ರಚಿಸಬೇಕಾಗಿರುವುದು ಅತ್ಯಂತ ಅವಶ್ಯವಾಗಿದೆ.
1973 ರಿಂದಲೂ ಕೌಜಲಗಿ ತಾಲೂಕಿಗಾಗಿ ಹೋರಾಡುತ್ತಲೇ ಬಂದಿದೆ. ಹುಂಡೇಕಾರ, ಗದ್ದಿಗೌಡರ, ವಾಸುದೇವ ಸಮಿತಿಗಳು ಕೌಜಲಗಿಯನ್ನು ತಾಲೂಕು ಕೇಂದ್ರವನ್ನಾಗಿಸಬೇಕೆಂದು ಶಿಫಾರಸ್ಸು ಮಾಡಿವೆ. ಈ ಎಲ್ಲ ಸಮಿತಿಗಳು ಮಾಡಿದ ಶಿಫಾರಸ್ಸಿನಲ್ಲಿ ಕೌಜಲಗಿ ಕೇಂದ್ರವಾಗಿದೆ. ಗೋಕಾಕ ತಾಲೂಕು ಕೌಜಲಗಿ ಹೋಬಳಿಯ –ಕೌಜಲಗಿ, ರಡ್ಡೇರಟ್ಟಿ, ಕಳ್ಳಿಗುದ್ದಿ, ಹೊಸಳ್ಳಿ, ಮನ್ನಿಕೇರಿ, ಬಗರನಾಳ, ಗೋಸಬಾಳ, ಬಿಲಕುಂದಿ, ಬೆಟಗೇರಿ, ಕೆಮ್ಮನಕೋಲ, ತಪಶಿ, ಉದಗಟ್ಟಿ, ರಾಮದುರ್ಗ ತಾಲೂಕಿನ ಚಂದರಗಿ ಹೋಬಳಿಯ -ಹುಲಕುಂದ, ಬಾಗೋಜಿಕೊಪ್ಪ, ಚಿಕ್ಕೊಪ್ಪ, ಹಿರೇಕೊಪ್ಪ, ಮುರಕಟ್ನಾಳ, ಹೊಸೂರು, ಕಾಮನಕೊಪ್ಪ, ಹೊಸಳ್ಳಿ, ಬಿಜಗುಪ್ಪಿ, ಚಿಪ್ಪಲಕಟ್ಟಿ, ಕುನ್ನಾಳ, ತೊಂಡಿಕಟ್ಟಿ, ಬುದ್ನಿಖುರ್ದ, ಕಮಕೇರಿ, ಹೊಸಕೋಟಿ, ಗುತ್ತಿಗೋಳಿ, ಕುಳ್ಳೂರು ಹಾಗೂ ಸವದತ್ತಿ ತಾಲೂಕಿನ ಯರಗಟ್ಟಿ ಹೋಬಳಿಯ –ಮೆಳ್ಳಿಕೇರಿ, ದಾಸನಾಳ, ಮುಗಳಿಹಾಳ, ಅಕ್ಕಿಸಾಗರ, ಕೊಡ್ಲಿವಾಡ, ಇಟ್ನಾಳ, ಕೊರಕೊಪ್ಪ, ಸತ್ತಿಗೇರಿ, ಕುರುಬಗಟ್ಟಿ, ತಾವಲಗೇರಿ, ಮರಡಿ ಶಿವಾಪೂರ, ಗೋವನಕೊಪ್ಪ -ಒಟ್ಟು 41 ಗ್ರಾಮಗಳನ್ನೊಳಗೊಂಡು ಕೌಜಲಗಿಯನ್ನು ತಾಲೂಕು ಕೇಂದ್ರವಾಗಿಸಬೇಕೆಂದು ತಿಳಿಸಿದೆ. ಆದರೆ ಸರಕಾರ ಇದಾವುದನ್ನು ಆಲೋಚಿಸದೆ ಜನೇವರಿ 1 ರಂದು ಅಸ್ಥಿತ್ವಕ್ಕೆ ಬರುತ್ತಿರುವ ರಾಜ್ಯದ ನೂತನ 50 ತಾಲೂಕುಗಳ ಜೊತೆ ಇನ್ನು ಕೆಲವು ತಾಲೂಕುಗಳನ್ನು ಸೇರ್ಪಡಿಸುವ ಚಿಂತನೆಯಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರು ತೊಡಗಿದ್ದಾರೆ. ಈಗಲೂ ತಾಲೂಕಿಗಾಗಿ ಕೊಡಗು ಜಿಲ್ಲೆಯ ಕಾವೇರಿ ಹೋರಾಡುತ್ತಿದೆ. ಹೀಗಾಗಿ ಕೌಜಲಗಿ ಜನರ ಬಹುದಿನದ ಬೇಡಿಕೆಯಾದ ಕೌಜಲಗಿ ತಾಲೂಕು ಜನೇವರಿ 1 ರಿಂದಲೇ ಅಸ್ಥಿತ್ವಕ್ಕೆ ಬರುವಂತೆ ಘೋಷಿಸಿ ನೂತನ ಗೋಕಾಕ ಜಿಲ್ಲೆಯಲ್ಲಿ ಸೇರ್ಪಡಿಸಬೇಕು. ಗೋಕಾಕ ಜಿಲ್ಲಾ ರಚನೆ ಎಷ್ಟು ವೈಜ್ಞಾನಿಕವಾಗಿದೆಯೇ ಅಷ್ಟೇ ವೈಜ್ಞಾನಿಕ ನೆಲೆಯಲ್ಲಿ ಕೌಜಲಗಿ ತಾಲೂಕು ರಚನೆಗೊಳ್ಳುವುದು ಅತ್ಯಂತ ಸೂಕ್ತವಾಗಿದೆ ಮತ್ತು ಅವಶ್ಯಕವಾಗಿದೆ.
ಎಂ. ಆರ್. ಭೋವಿ
ಅಧ್ಯಕ್ಷರು, ನಿಯೋಜಿತ ಕೌಜಲಗಿ ತಾಲೂಕು ಹೋರಾಟ ಸಮಿತಿ :
ಗೋಕಾಕ ಜಿಲ್ಲೆಗೆ ನಮ್ಮದು ಸಂಪೂರ್ಣ ಬೆಂಬಲವಿದೆ. ಗೋಕಾಕ ಜಿಲ್ಲೆಯಾದರೆ ಕೌಜಲಗಿಯೂ ನೂತನ ತಾಲೂಕಾಗಬೇಕು. ಕೌಜಲಗಿ ತಾಲೂಕಾಗಲು ಕಳೆದ 30 ವರ್ಷಗಳಿಂದ ಹೋರಾಡುತ್ತಿದ್ದೇವೆ.
ಡಾ. ರಾಜೇಂದ್ರ ಸಣ್ಣಕ್ಕಿ
ಪ್ರ.ಕಾರ್ಯದರ್ಶಿ, ನಿಯೋಜಿತ ಕೌಜಲಗಿ ತಾಲೂಕು ಹೋರಾಟ ಸಮಿತಿ :
ಕೌಜಲಗಿ ತಾಲೂಕು ರಚನೆಗೆ ಯಾರ ವಿರೋಧವೂ ಇಲ್ಲ. ಕೌಜಲಗಿ ತಾಲೂಕಿಗಾಗಿ 1973 ರಿಂದಲೂ ಹೋರಾಡುತ್ತಿದ್ದೇವೆ. ತಾಲೂಕು ಪುನರ್ವಿಂಗಡಣಾ ಸಮಿತಿಗಳು ಶಿಫಾರಸ್ಸು ಮಾಡಿವೆ. ಕೌಜಲಗಿ ನೂತನ ತಾಲೂಕು ರಚನೆಗಾಗಿ ನೂತನ ಗೋಕಾಕ ಜಿಲ್ಲೆಗೆ ಸೇರ್ಪಡಿಸಬೇಕು.
–
ಅಶೋಕ ಪರುಶೆಟ್ಟಿ
ಕಾರ್ಯಾಧ್ಯಕ್ಷರು, ನಿಯೋಜಿತ ಕೌಜಲಗಿ ತಾಲೂಕು ಹೋರಾಟ ಸಮಿತಿ:
ಆರ್.ಎಂ.ವಿರಕ್ತಮಠ ಅವರಿಂದ ಆರಂಭಗೊಂಡ ಕೌಜಲಗಿ ತಾಲೂಕು ಹೋರಾಟ ಇಂದಿಗೂ ಮುಂದುವರೆದಿದೆ. ಆದರೆ ಸರಕಾರ ಈ ಭಾಗದ ಜನರಿಗೆ ವಂಚಿಸುತ್ತಿದೆ. ಗೋಕಾಕ ಜಿಲ್ಲೆ ರಚಿಸಿ ಕೌಜಲಗಿಯನ್ನು ತಾಲೂಕಾಗಿಸಬೇಕು.
ಅರವಿಂದ ದಳವಾಯಿ
ರಾಜ್ಯ ಉಪಾಧ್ಯಕ್ಷರು, ಸಂಯುಕ್ತ ಜನತಾದಳ ಪಕ್ಷ:
ಗೋಕಾಕ ತಾಲೂಕಿನ ಪೂರ್ವ ಭಾಗ ಕೌಜಲಗಿಗೆ ರಾಮದುರ್ಗ ಮತ್ತು ಸವದತ್ತಿ ತಾಲೂಕಿನ 20+20 ಗ್ರಾಮಗಳನ್ನು ಸೇರ್ಪಡಿಸಿ ನೂತನ ತಾಲೂಕು ರಚಿಸಬೇಕು. ಇದರಿಂದ ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗುತ್ತದೆ.
