ಗೋಕಾಕ:ಕಬ್ಬು ಬೆಳೆಗಾರ ಸಮಸ್ಯೆಗಳನ್ನು ಬಗೆ ಹರಿಸದೆ ಇದ್ದರೆ ಉಗ್ರ ಹೋರಾಟ : ರೈತ ಸಂಘದ ಎಚ್ಚರಿಕೆ

ಕಬ್ಬು ಬೆಳೆಗಾರ ಸಮಸ್ಯೆಗಳನ್ನು ಬಗೆ ಹರಿಸದೆ ಇದ್ದರೆ ಉಗ್ರ ಹೋರಾಟ : ರೈತ ಸಂಘದ ಎಚ್ಚರಿಕೆ
ಗೋಕಾಕ ಅ 14 : ಸರಕಾರ ಕಬ್ಬು ಬೆಳೆಗಾರ ಸಮಸ್ಯೆಗಳನ್ನು ಬಗೆ ಹರಿಸದೆ ರೈತರನ್ನು ಅವಮಾನಿಸಲಾಗುತ್ತಿದೆ. ಕೂಡಲೇ ರೈತರ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ತಾಲೂಕು ಮಟ್ಟದಲ್ಲಷ್ಟೇ ಅಲ್ಲದೆ ಎಲ್ಲ ಗ್ರಾಮ, ಹೊಬಳಿ ಮಟ್ಟದ ರಸ್ತೆಗಳ ಮೇಲೆ ಚಕ್ಕಡಿ ಹಾಗೂ ಎತ್ತುಗಳನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಲಾಗುವದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗಣಪತಿ ಇಳಿಗೇರ ಹೇಳಿದರು.
ಇಲ್ಲಿಯ ಕಿತ್ತೂರು ರಾಣಿ ಚನ್ನಮ್ಮ ವೃತ್ತ, ನಾಕಾ ನಂ.1ರ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿ ಮಾತನಾಡಿ, ಕೇಂದ್ರ-ರಾಜ್ಯ ಸರಕಾರಗಳು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲಿಕರು ಒಂದಾಗಿ ರೈತರ ಶೋಷಣೆ ಮಾಡುತ್ತಿದ್ದಾರೆ. ಕಬ್ಬಿಗೆ ಗರಿಷ್ಠ ಬೆಂಬಲ ಬೆಲೆ ಘೋಷಣೆ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಕೇಂದ್ರ-ರಾಜ್ಯ ಸರಕಾರಗಳು ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಬೇಕು, ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸಬೇಕು ಹಾಗೂ ರೈತರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿ ಸಮಸ್ಯೆ ಬಗೆಹರಿಸಬೇಕು. ಸರಕಾರ ಸ್ಫಂಧಿಸುವವರೆಗೆ ಪ್ರತಿಭಟನೆ ನಿರಂತರವಾಗಿ ನಡೆಯಲಿದೆ ಎಂದರು.
ಮುಖಂಡರಾದ ಕೃಷ್ಣ ಮಹಾರಾಜ, ಮಹಾದೇವ ಗೂಡೇರ, ಮುತ್ತೆಪ್ಪ ಕುರಬರ, ಬಸು ನಾಯಿಕ, ದುಂಡಪ್ಪ ನಂದಗಾವಿ, ಭೀರಪ್ಪ ಕಿಲಾರಿ, ಪರಶು ಕುರಿ, ಮುತ್ತೆಪ್ಪ ಬಾಗನ್ನವರ, ಸಂತೋಷ ನಿಂಗನೂರ, ಹನಮಂತ ವಗ್ಗನವರ, ಶಿವು ಗಡಾದ, ಸಿದ್ದಪ್ಪ ತಪಸಿ, ಲಕ್ಕಪ್ಪ ಬಾಗನ್ನವರ, ಸುನೀತಾ ಕೊಣ್ಣೂರ, ಶಿವಪುತ್ರ ಜಕಬಾಳ, ಉಮೇಶ ಗೋವನಕೊಪ್ಪ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಕೀಲರ ಸಂಘದ ಬೆಂಬಲ: ಕಬ್ಬು ಬೆಳೆಗಾರರ ಹೋರಾಟಕ್ಕೆ ಇಲ್ಲಯ ನ್ಯಾಯವಾದಿಗಳ ಸಂಘ ಕಾರ್ಯಕಲಾಪಗಳಿಂದ ದೂರ ಉಳಿದು ಬೆಂಬಲ ವ್ಯಕ್ತಪಡಿಸಿದರು. ನ್ಯಾಯವಾದಿಗಳು ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದರು.
