ಬೆಳಗಾವಿ:ಕುಲಗೋಡ ವಿತರಣಾ ಕಾಲುವೆ ನಿರ್ಮಾಣ ಕಾಮಗಾರಿ ಪರಿಶೀಲನೆಯಲ್ಲಿದೆ : ಶಾಸಕ ಬಾಲಚಂದ್ರರ ಪ್ರಶ್ನೆಗೆ ಉತ್ತರಿಸಿದ ಸಚಿವ ಎಮ್.ಬಿ..ಪಾಟೀಲ
ಕುಲಗೋಡ ವಿತರಣಾ ಕಾಲುವೆ ನಿರ್ಮಾಣ ಕಾಮಗಾರಿ ಪರಿಶೀಲನೆಯಲ್ಲಿದೆ : ಶಾಸಕ ಬಾಲಚಂದ್ರರ ಪ್ರಶ್ನೆಗೆ ಉತ್ತರಿಸಿದ ಸಚಿವ ಎಮ್.ಬಿ .ಪಾಟೀಲ
ಬೆಳಗಾವಿ ನ 24: ಘಟಪ್ರಭಾ ಬಲದಂಡೆ ಕಾಲುವೆ ಯೋಜನೆಯ ಕುಲಗೋಡ ವಿತರಣಾ ಕಾಲುವೆಯಡಿ ಬರುವ ಕಿ.ಮೀ 1 ರಿಹಾಗಂದ 10 ರವರೆಗೆ ಕಾಲುವೆ ನಿರ್ಮಾಣ ಕಾಮಗಾರಿಗೆ 24.40 ಕೋಟಿ ರೂ. ಮೊತ್ತದ ಪ್ರಸ್ತಾವನೆಯು ನಿಗಮದ ಪರಿಶೀಲನೆಯಲ್ಲಿದೆ ಎಂದು ಜಲಸಂಪನ್ಮೂಲ ಸಚಿವ ಎಮ್.ಬಿ.ಪಾಟೀಲ ತಿಳಿಸಿದರು.
ಅರಭಾಂವಿ ಬಿಜೆಪಿ ಶಾಸಕ ಬಾಲಚಂದ್ರ ಲಕ್ಷ್ಮಣರಾವ್ ಜಾರಕಿಹೊಳಿ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು, ಈ ಯೋಜನೆ ವ್ಯಾಪ್ತಿಯಲ್ಲಿ ಲಕ್ಷ್ಮೇಶ್ವರ, ಸುಣಧೋಳಿ, ಕುಲಗೋಡ, ಹೊಸಟ್ಟಿ, ಹೊನಕುಪ್ಪಿ ಹಾಗೂ ಭೈರನಟ್ಟಿ ಗ್ರಾಮಗಳ ಜಮೀನುಗಳು ಕಾಲುವೆಯ ಕೊನೆಯ ಭಾಗದ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಮಹತ್ವದ ಯೋಜನೆಯಾಗಿದೆ ಎಂದು ಹೇಳಿದರು.
ಕಾಲುವೆಯ ಕೊನೆಯ ಅಂಚಿನವರೆಗೆ ನೀರು ಹರಿಯುವುದನ್ನು ಖಾತ್ರಿಪಡಿಸಲು ಈ ವಿತರಣಾ ಕಾಲುವೆಯ ಕಿ.ಮೀ 0+920 ರಿಂದ ಕಿ.ಮೀ 9+380 ಗೆ ನೇರವಾಗಿ ಗುರುತ್ವಾಕರ್ಷಣೆ ಪೈಪ್ ಮಾರ್ಗದ ಮೂಲಕ ನೀರನ್ನು ಹರಿಸಲಾಗುವುದು ಎಂದು ಅವರು ಹೇಳಿದರು.
ಘಟಪ್ರಭಾ ಬಲದಂಡೆ ಕಾಲುವೆ ಯೋಜನೆಯಡಿ ಕಿ.ಮೀ 84+620 ರ ಅಡಿಯಲ್ಲಿ ಕುಲಗೋಡ ವಿತರಣಾ ಕಾಲುವೆ ಬರುತ್ತಿದ್ದು ಸುಮಾರು 18.99 ಕಿ.ಮೀ ಉದ್ದವಿದೆ. ಈ ವಿತರಣಾ ಕಾಲುವೆಯಡಿ ಮುಂಗಾರು ಹಂಗಾಮಿಗೆ 1637.12 ಹೆಕ್ಟರ್ ಹಾಗೂ ಹಿಂಗಾರು ಹಂಗಾಮಿಗೆ 1589.99 ಹೆಕ್ಟೆರ್ ಸೇರಿದಂತೆ ಒಟ್ಟು 3227.11 ಹೆಕ್ಟರ್ ಜಮೀನು ನೀರಾವರಿಗೆ ಅಧಿಸೂಚಿಸಲಾಗಿರುತ್ತದೆ ಎಂದು ಸಚಿವ ಎಮ್.ಬಿ.ಪಾಟೀಲ ಅವರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಶ್ನೆಗೆ ಉತ್ತರಿಸಿದರು.