ಗೋಕಾಕ:ಮಹಾ ಸಂಸದ ಮಾನೆ,ವಿರುದ್ಧ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುವಂತೆ ಆಗ್ರಹಿಸಿ ಸಂಸದೆ ಪ್ರಿಯಾಂಕಾಗೆ ಕರವೇ ಮನವಿ

ಮಹಾ ಸಂಸದ ಮಾನೆ,ವಿರುದ್ಧ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುವಂತೆ ಆಗ್ರಹಿಸಿ ಸಂಸದೆ ಪ್ರಿಯಾಂಕಾಗೆ ಕರವೇ ಮನವಿ
ಗೋಕಾಕ ಡಿ 24 : ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ, ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕುವ ಕುರಿತು, ಕೇಂದ್ರ ಗೃಹಸಚಿವರಿಗೆ ದೂರು ನೀಡುವಂತೆ ಆಗ್ರಹಿಸಿ ಬುಧವಾರದಂದು ನಗರದಲ್ಲಿ ಚಿಕ್ಕೋಡಿ ಸಂಸದೆ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮನವಿ ಅರ್ಪಿಸಲಾಯಿತು.
ಮಹಾರಾಷ್ಟ್ರದ ನಾಯಕರು ಕಳೆದ ಐವತ್ತು ವರ್ಷಗಳಿಂದ ಬೆಳಗಾವಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಭಾಷಾ ವೈಷಮ್ಯದ ವಿಷ ಬೀಜ ಬಿತ್ತುವ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ. ನಮ್ಮ ನಾಡಿನ ಜನ ರಾಜ್ಯೋತ್ಸವ ಆಚರಣೆ ಮಾಡುವ ಸಂಧರ್ಭದಲ್ಲಿ ಬೆಳಗಾವಿಯಲ್ಲಿ ಕರಾಳ ದಿನಾಚರಣೆ ಮಾಡುವದು, ಬೆಳಗಾವಿಯಲ್ಲಿ ಅಧಿವೇಶನ ನಡೆಯುವಾಗ ಮರಾಠಿ ಮೇಳಾವ್ ಮಾಡುವ ನಾಡದ್ರೋಹಿ ಎಂ.ಇ.ಎಸ್ ನಾಯಕರು ಮಹಾರಾಷ್ಟ್ರದ ನಾಯಕರನ್ನು ಬೆಳಗಾವಿಗೆ ಕರೆಯಿಸಿ ಅವರಿಂದ ಪ್ರಚೋದನಕಾರಿ ಭಾಷಣ ಮಾಡಿಸಿ, ಬೆಳಗಾವಿಯ ಭಾಷಾ ಬಾಂಧವ್ಯಕ್ಕೆ ಧಕ್ಕೆ ತರುತ್ತಲೇ ಬಂದಿದ್ದಾರೆ. ಮಹಾರಾಷ್ಟ್ರದಿಂದ ಕರ್ನಾಟಕ ರಾಜ್ಯಕ್ಕೆ ಬಂದು ಇಲ್ಲಿಯ ಭಾಷಾ ಬಾಂಧವ್ಯಕ್ಕೆ ಧಕ್ಕೆ ತಂದು ಭಾರತದ ಒಕ್ಕೂಟದ ವ್ಯವಸ್ಥೆಯನ್ನೇ ಹಾಳು ಮಾಡುತ್ತಿರುವ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಸಂಸದ ಧೈರ್ಯಶೀಲ ಮಾನೆ ವಿರುದ್ಧ ಕೇಂದ್ರ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳುವಂತೆ ಚಿಕ್ಕೋಡಿ ಸಂಸಸದರಾದ ತಾವು ಸಂಸತ್ತಿನಲ್ಲಿ ಈ ಕುರಿತು ಧ್ವನಿ ಎತ್ತಿ ಕೇಂದ್ರ ಸರ್ಕಾರದ ಗಮನ ಸೆಳೆಯುವ ಜೊತೆಗೆ ಕೇಂದ್ರದ ಗೃಹ ಮಂತ್ರಿಗಳಿಗೆ ತಾವು ಲಿಖಿತ ದೂರು ಸಲ್ಲಿಸಬೇಕು ಎಂದು ನಾಡಿನ ಸಮಸ್ತ ಕನ್ನಡಿಗರ ಪರವಾಗಿ ಮನವಿಯಲ್ಲಿ ವಿನಂತಿಸಲಾಗಿದೆ.
ಬೆಳಗಾವಿಯ ಗಡಿ ವಿಚಾರ ಬಂದಾಗ, ಭಾಷೆಯ ವಿಚಾರ ಬಂದಾಗ ಮಹಾರಾಷ್ಟ್ರದ ನಾಯಕರು ಪಕ್ಷಾತೀತವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತುತ್ತಾರೆ.ಆದ್ರೆ ನಮ್ಮ ನಾಡಿನ ಸಂಸದರು ಮೌನವಹಿಸುತ್ತಾರೆ. ಮಹಾರಾಷ್ಟ್ರದ ನಾಯಕರಿಗೆ ಪ್ರತ್ಯುತ್ತರ ನೀಡುವದು ನಿಮ್ಮ ಜವಾಬ್ದಾರಿಯಾಗಿದೆ. ನೆಲ,ಜಲ,ಭಾಷೆ,ಸಂಸ್ಕೃತಿಯ ವಿಚಾರ ಬಂದಾಗ ನಮ್ಮ ಭಾಗದ ಸಂಸದರಾದ ತಾವು ನಮ್ಮ ನಾಡಿನ ಪರವಾಗಿ,ಕನ್ನಡಿಗರ ಪರವಾಗಿ ಧ್ವನಿ ಎತ್ತಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮನವಿಯಲ್ಲಿ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ,ಜಿಲ್ಲಾ ಮಾಧ್ಯಮ ವಕ್ತಾರ ಸಾದಿಕ ಹಲ್ಯಾಳ, ನಿಜಾಮ ನದಾಫ್ ,ಹನೀಫ ಸನದಿ, ಕೆಂಪಣ್ಣ ಕಡಕೋಳ, ಮೀರಾಸಾಬ ಅಂಕಲಗಿ, ಜಾಫರ್ ಬುಡ್ಡೆಬಾಯ,ನ್ಯಾಮತ್ ಬಾಯ, ಶ್ರೀಶೈಲ ಚಿನ್ನಾನಿ, ಲಕ್ಷ್ಮಣ ಕುಮಾರ,ಜಗದೀಶ ಪೂಜೇರಿ, ಸಿದ್ದಪ್ಪ ವಗ್ಗರ, ತುಕಾರಾಂ ಕಾಗ್ಲಿ ವಜ್ರಕಾಂತ ಜೊತೆನ್ನವರ, ಕಾಡಪ್ಪ ಕುಂಬಾರ, ಸೈಯದ್ ಮುಲ್ಲಾ, ದಸ್ತಗಿರಿ ಮುಲ್ಲಾ, ಲಕ್ಷ್ಮಣ ಕುರಲಿ, ಪಾಂಡು ಬನಾಜ, ಎ.ಬಿ. ಹಣಬರ,ವಿಜಯ ವೈದ್ಯ ಉಪಸ್ಥಿತರಿದ್ದರು.
