ಗೋಕಾಕ:ಶಿಕ್ಷಕರು ಪ್ರಸ್ತುತ ಶೈಕ್ಷಣಿಕ ನೀತಿಗೆ ಹೊಂದಿಕೊಂಡು ಗುಣಮಟ್ಟದ ಶಿಕ್ಷಣ ನೀಡಬೇಕು : ಸಂಸದೆ ಪ್ರಿಯಾಂಕಾ

ಶಿಕ್ಷಕರು ಪ್ರಸ್ತುತ ಶೈಕ್ಷಣಿಕ ನೀತಿಗೆ ಹೊಂದಿಕೊಂಡು ಗುಣಮಟ್ಟದ ಶಿಕ್ಷಣ ನೀಡಬೇಕು : ಸಂಸದೆ ಪ್ರಿಯಾಂಕಾ
ಗೋಕಾಕ ನ 14 : ಶಿಕ್ಷಣ ಮಕ್ಕಳನ್ನು ಕತ್ತಲೆಯಿಂದ ಬೆಳಕಿನ ಕಡೆ ಕೊಂಡೊಯ್ಯತ್ತದೆ ಹಾಗಾಗಿ ಶಿಕ್ಷಕರು ಪ್ರಸ್ತುತ ಶೈಕ್ಷಣಿಕ ನೀತಿಗೆ ಹೊಂದಿಕೊಂಡು ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಚಿಕ್ಕೋಡಿ ಸಂಸದೆ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ಶುಕ್ರವಾರದಂದು ನಗರದ ಪಿ.ಎಂ.ಶ್ರೀ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ಪೋಷಕರ – ಶಿಕ್ಷಕರ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಬಗ್ಗೆ ಚಿಂತನೆ ಮಾಡದೆ ಶಿಕ್ಷಣಕ್ಕೆ ಮಹತ್ವ ನೀಡದೆ ಹೋದರೆ ದೇಶ ಏಳಿಗೆ ಸಾಧಿಸಲು ಸಾಧ್ಯವಿಲ್ಲ ಅದನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಕರು ಮತ್ತು ಪಾಲಕರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಕೊಡಿಸಬೇಕು. ರಾಜ್ಯದಲ್ಲಿ ಸಾಧನೆ ಮಾಡಿದ ಸಾಧಕರೆಲ್ಲಾ ಹೆಚ್ಚಾಗಿ ಸರಕಾರಿ ಶಾಲೆಯಲ್ಲಿ ಓದಿದವರು ಇದ್ದಾರೆ. ವಿದ್ಯಾರ್ಥಿ ಜೀವನ ದೇವರು ಕೊಟ್ಟ ಒಂದು ಸುವರ್ಣ ಅವಕಾಶ ಎಂದು ತಿಳಿದು ಒಳ್ಳೆಯ ವಿದ್ಯಾಭ್ಯಾಸ ಮಾಡಿದರೆ ಮುಂದೆ ಡಾಕ್ಟರ್ ಇಂಜಿನಿಯರ ಆಗಲು ಸಾಧ್ಯ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಶಿಕ್ಷಕೇತರ ಚಟುವಟಿಕೆಗಳಿಗೆ ಮಹತ್ವ ನೀಡಬೇಕು. ಪೋಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಿ ಶಿಕ್ಷಣ ಕಲಿಸಿದರೆ ಅವರು ಸಾಧನೆ ತೋರಲು ಸಾಧ್ಯ.
ತಂದೆ ಸತೀಶ ಜಾರಕಿಹೊಳಿ ಅವರು ಕಳೆದ ಹಲವು ದಶಕಗಳಿಂದ ಶಿಕ್ಷಣ ಮತ್ತು ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದ್ದು, ಸರಕಾರಿ ಪದವಿಪೂರ್ವ ಮಹಾವಿದ್ಯಾಲಯಕ್ಕೂ ಎಲ್ಲಾ ರೀತಿಯಲ್ಲಿ ಸಹಕಾರ ನೀಡಲು ನಾವು ಬದ್ದರಾಗಿದ್ದೇವೆ ಎಂದರು. ಬಹುಮುಖ್ಯವಾಗಿ ವಿದ್ಯಾರ್ಥಿ ದಿಸೆಯಲ್ಲಿ ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವಲ್ಲಿ ಶಿಕ್ಷಕರ ಮತ್ತು ಪಾಲಕರು ಪಾತ್ರ ಮಹತ್ವದಾಗಿದ್ದು, ತಮ್ಮ ಮಕ್ಕಳು ಶಾಲೆಯಲ್ಲಿ ಯಾವ,ಯಾವ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿ ಪಾಲಕರು ಪಡೆದುಕೊಳ್ಳುತ್ತಿರಬೇಕು. ಇದು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಮುಂಬರುವ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಈಗಿನಿಂದಲೇ ತಯಾರಿ ಮಾಡಿದರೆ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯ ಎಲ್ಲಾ ವಿದ್ಯಾರ್ಥಿಗಳು ಚನ್ನಾಗಿ ವಿದ್ಯಾಬ್ಯಾಸ ಮಾಡಿ ತಾವು ಇಟ್ಟಿರುವ ಗುರಿಯನ್ನು ಉತ್ತಮ ರೀತಿಯಲ್ಲಿ ಸಾಧಿಸಿರಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಸ್ವರ್ಧೆಗಳಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಸಿದ್ದಪ್ಪ ಹುಚ್ಚರಾಮಗೋಳ, ಪ್ರಾಚಾರ್ಯ ಅನ್ನಪೂರ್ಣ ಕುರಬೇಟ್, ಉಪ ಪ್ರಾಚಾರ್ಯ ಎಂ.ಬಿ.ಬಳಗಾರ ಉಪಸ್ಥಿತರಿದ್ದರು.
