ಗೋಕಾಕ:ಶ್ರೀಗಂಧ ಅಕ್ರಮ ದಾಸ್ತಾನು: ಆರೋಪಿ ಬಂಧನ

ಶ್ರೀಗಂಧ ಅಕ್ರಮ ದಾಸ್ತಾನು: ಆರೋಪಿ ಬಂಧನ
ಗೋಕಾಕ ಸೆ 12 : ಮನೆಯಲ್ಲಿ ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪದಡಿ ಆರೋಪಿಯನ್ನು ಮಾಲಿನ ಸಮೇತ ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಾಲ್ಲೂಕಿನ ಅಜ್ಜನಕಟ್ಟಿ ಗ್ರಾಮದ ಲಕ್ಷ್ಮಣ ಗೂಳಪ್ಪ ಮಾದರ ತನ್ನ ಮನೆಯಲ್ಲಿ ಯಾವುದೇ ದಾಖಲಾತಿಯಿಲ್ಲದೆ
27.60 ಕೆ.ಜಿ ಯಷ್ಟು ಶ್ರೀಗಂಧದ ತುಂಡುಗಳನ್ನು ದಾಸ್ತಾನು ಮಾಡಿದ್ದನು. ಮಾಹಿತಿ ತಿಳಿದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ ಪ್ರಿಯದರ್ಶಿ,ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಾಸಿಮರಾಜ ತೇನಗಿ ಇವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿ ಚೀಲದಲ್ಲಿ ತುಂಬಿಸಿದ್ದ ಶ್ರೀಗಂಧ ಪತ್ತೆಯಾಗಿದೆ’ ಎಂದು ದಾಳಿಯ ನೇತೃತ್ವ ವಹಿಸಿದ್ದ ವಲಯ ಅರಣ್ಯ ಅಧಿಕಾರಿ ಆನಂದ ಹೆಗಡೆ ತಿಳಿಸಿದ್ದಾರೆ.
ಶುಕ್ರವಾರದಂದು ಬೆಳಿಗ್ಗೆ ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆದಿದ್ದು, ದಾಳಿಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಹನುಮಂತ ಇಂಗಳಗಿ, ಎಮ್.ಹೆಚ್.ತೇಲಿ, ಸಾಗರ ಪಣಗುತ್ತಿ, ಹಣಮಂತ ಹಮ್ಮನ್ನವರ, ಅಶೋಕ ಮಾಧುರಿ, ಗಸ್ತು ಅರಣ್ಯ ಪಾಲಕರಾದ ರಾಯಪ್ಪ ಕೆಂಪಶಿವಣ್ಣವರ,ಮಹಾಂತೇಶ ಜಾಮುನಿ,ಸಂಜು ನಾಯಕ, ವೀರಭದ್ರಯ್ಯ ಮಠಪತಿ, ಹಣಮಂತ ಕುರಬೇಟ , ಗೀತಾ ಮಲ್ಲಿಮಾರ ಮತ್ತು ಸಿಬ್ಬಂದ್ದಿಗಳು ಭಾಗವಹಿಸಿದ್ದರು.
ದಾಳಿಯ ಸಂಧರ್ಭದಲ್ಲಿ ಆರೋಪಿ ಲಕ್ಷ್ಮಣ ಗೂಳಪ್ಪ ಮಾದರ ಇತನನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಇನ್ನುಳಿದ ಆರೋಪಿತರಾದ ಕರೆಪ್ಪ ಬಸಪ್ಪ ಮಾದರ, ಲಕ್ಷ್ಮಣ ಗೂಳಪ್ಪ ಮಾದರ,ಪುಂಡಲಿಕ ಲಂಕೆಪ್ಪ ನಾಯ್ಕ ತಲೆಮರೆಸಿಕೊಂಡಿದ್ದಾರೆ.
ಆರೋಪಿತರು ಅನಧಿಕೃತವಾಗಿ ಶ್ರೀಗಂಧದ ದಾಸ್ತಾನು ಮಾಡಿರುವುದರಿಂದ ಕರ್ನಾಟಕ ಅರಣ್ಯ ಕಾಯ್ದೆ 1963ರ ಕಲಂ.84, 86, 87 ರ ಅಡಿ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದ ಆರೋಪಿಯನ್ನು ನ್ಯಾಯಾಂಗದ ವಶಕ್ಕೆ ನೀಡಲಾಗಿದೆ.
ದಾಳಿಯ ಸಂಧರ್ಭದಲ್ಲಿ ಆರೋಪಿಯ ಮನೆಯಲ್ಲಿ ಶ್ರೀಗಂಧದ ಹಸಿ ತುಂಡುಗಳು 13 ಸಂ=27.60 ಕೆ.ಜಿ, ಶ್ರೀಗಂಧದ ಒಂದು ಚಕ್ಕೆ ಚೀಲ=11.50 ಕೆ.ಜಿ, ನಾಲ್ಕು ಕೊಡಲಿಗಳು , ಒಂದು ನೆಲ ಅಗೆಯುವ ಬಾಯಿ ಕೊಡಲಿ, ಐದು ಉದ್ದ ಗರಗಸಗಳು, ಒಂದು ತಲೆಗೆ ಕಟ್ಟುವ ಬ್ಯಾಟರಿ, ಮೂರು ಬಟ್ಟೆಯಲ್ಲಿ ಸುತ್ತಿದ ಗರಗಸಗಳು, ಎರಡು ದ್ವಿಚಕ್ರ ವಾಹನಗಳು,ಎರಡು ಮೋಬೈಲ ಫೋನಗಳನ್ನು ವಶಕ್ಕೆ ಪಡೆಯಲಾಗಿದೆ.