ಗೋಕಾಕ:ಮಾದಕ ವಸ್ತುಗಳ ಬಳಕೆ ಮತ್ತು ಅಕ್ರಮ ಸಾಗಾಟ ತಡೆಗಟ್ಟುವಲ್ಲಿ ಸಾರ್ವಜನಿಕರು, ಪೋಷಕರು, ಯುವಜನತೆಯ ಸಹಕಾರ ಅಗತ್ಯ : ಡಿ.ವಾಯ್.ಎಸ್.ಪಿ ರವಿ ನಾಯಿಕ

ಮಾದಕ ವಸ್ತುಗಳ ಬಳಕೆ ಮತ್ತು ಅಕ್ರಮ ಸಾಗಾಟ ತಡೆಗಟ್ಟುವಲ್ಲಿ
ಸಾರ್ವಜನಿಕರು, ಪೋಷಕರು, ಯುವಜನತೆಯ ಸಹಕಾರ ಅಗತ್ಯ : ಡಿ.ವಾಯ್.ಎಸ್.ಪಿ ರವಿ ನಾಯಿಕ
ಗೋಕಾಕ ಜೂ 25 : ಸಮಾಜದಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಅಕ್ರಮ ಸಾಗಾಟ ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ಜತೆಗೆ ಸಾರ್ವಜನಿಕರು, ಪೋಷಕರು ಸೇರಿದಂತೆ ಇಂದಿನ ಯುವಜನತೆಯ ಸಹಕಾರವು ಅತ್ಯವಶ್ಯಕವಾಗಿದೆ ಎಂದು ಡಿ.ವಾಯ್.ಎಸ್.ಪಿ ರವಿ ನಾಯಿಕ ಹೇಳಿದರು.
ಬುಧವಾರದಂದು ನಗರದ ಜೆ.ಎಸ್.ಎಸ್.ಕಾಲೇಜಿನ ಸಭಾಂಗಣದಲ್ಲಿ ಬೆಳಗಾವಿ ಜಿಲ್ಲಾ ಪೊಲೀಸ್ ಗೋಕಾಕ ಉಪ ವಿಭಾಗ, ಗೋಕಾಕ ವೃತ್ತ ಹಮ್ಮಿಕೊಂಡ ವ್ಯಸನ ಮುಕ್ತ ಸಮಾಜಕ್ಕಾಗಿ ಡ್ರಗ್ಸ್ ವಿರುದ್ಧ ಜಾಗೃತಿ ಜಾಥಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜೀವನ ನಾವು ಅಂದ ಕೊಂಡಂತೆ ಇರುವುದಿಲ್ಲ. ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸಿ ಜಯಶಾಲಿ ಆಗಬೇಕು. ಭವಿಷ್ಯತ್ತಿನ ಉತ್ತಮ ಪ್ರಜೆಗಳಾಗಲು ಹಾಗೂ ಉತ್ತಮ ಸಮಾಜ ನಿರ್ಮಿಸಲು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನವಹಿಸಬೇಕು. ಯಾವುದೇ ಕಾರಣಕ್ಕೂ ಮಾದಕ ವಸ್ತುಗಳ ವ್ಯಸನಿಗಳಾಗಬಾರದು. ಕುಟುಂಬದ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ಮಾದಕ ವಸ್ತುಗಳಿಂದ ಅತ್ಯಂತ ಜಾಗೃತರಾಗಿರಬೇಕು. ಸ್ವಸ್ಥ ಸಮಾಜದಲ್ಲಿ ಆರೋಗ್ಯವಂತ ಜೀವನವನ್ನು ನಡೆಸಬೇಕು ಎಂದ ಅವರು ಸಮಾಜದ ಜವಾಬ್ದಾರಿಯುತ ಪ್ರಜೆಯಾಗಿ ಮಾದಕ ವಸ್ತುಗಳ ಮಾರಾಟ ಮತ್ತು ಅಕ್ರಮ ಸಾಗಾಟದಂತಹ ಪ್ರಕರಣಗಳು ಕಂಡು ಬಂದರೆ ತತ್‌ಕ್ಷಣ ಪೋಲೀಸ್ ಇಲಾಖೆಯ ಗಮನಕ್ಕೆ ತರಬೇಕು. ಮಾದಕ ದ್ರವ್ಯ ಹಾಗೂ ಮಾದಕ ವಸ್ತುಗಳ ಮಾರಾಟ, ಬಳಸುವಿಕೆಯನ್ನು ತಡೆಯುವಲ್ಲಿ ಯುವಜನತೆಯು ಪ್ರಮುಖ ಪಾತ್ರ ವಹಿಸಿ, ಮಾದಕ ವಸ್ತುಗಳ ಮುಕ್ತ ಸಮಾಜ ನಿರ್ಮಿಸಬೇಕು ಎಂದರು.
ಆರ್.ಎಂ.ವಾಲಿ ಮಾತನಾಡಿ ವಿಶ್ವದಾದ್ಯಂತ ಮಾದಕ ವಸ್ತುಗಳ ದುಶ್ಚಟಗಳಿಗೆ ಇತ್ತೀಚಿನ ವರ್ಷಗಳಲ್ಲಿ ಮಕ್ಕಳು ಮತ್ತು ಯುವಕರು ಹೆಚ್ಚು ಬಲಿಯಾಗುತ್ತಿದ್ದಾರೆ. ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಣೆ ಕಾನೂನ ಬಾಹಿರ ಎಂದು ಗೊತ್ತಿದ್ದರೂ ಇದರ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಡ್ರಗ್ ಮಾಫಿಯಾ ಹತೋಟಿಗೆ ತರಲು ವಿಶ್ವದೆಲ್ಲೆಡೆ ಕಾನೂನು ಪ್ರಯತ್ನಗಳು ನಡೆಯುತ್ತಿವೆ. ಆದರೆ ಇದನ್ನು ಬುಡ ಸಮೇತ ಕಿತ್ತು ಹಾಕಲು ಸಾರ್ವಜನಿಕರ ಸಹಕಾರ ಅಷ್ಟೇ ಪ್ರಮುಖವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಪಿಐ ಸುರೇಶ್ ಬಾಬು, ಪಿಎಸ್ಐ ಕೆ.ವಾಲಿಕರ, ಕಿರಣ ಮೋಹಿತೆ, ಪ್ರಾಚಾರ್ಯ ಎಸ್.ಪಿ.ದಂಡಿನ ಉಪಸ್ಥಿತರಿದ್ದರು.