RNI NO. KARKAN/2006/27779|Tuesday, December 30, 2025
You are here: Home » breaking news » ಬೆಳಗಾವಿ:ರಾಷ್ಟ್ರಕವಿ ಕುವೆಂಪು ಕನಸಿನ ಕರ್ನಾಟಕವನ್ನು ರೂಪಿಸಲು ಎಲ್ಲರೂ ಶ್ರಮಿಸೋಣ : ಸಚಿವ ರಮೇಶ

ಬೆಳಗಾವಿ:ರಾಷ್ಟ್ರಕವಿ ಕುವೆಂಪು ಕನಸಿನ ಕರ್ನಾಟಕವನ್ನು ರೂಪಿಸಲು ಎಲ್ಲರೂ ಶ್ರಮಿಸೋಣ : ಸಚಿವ ರಮೇಶ 

ರಾಷ್ಟ್ರಕವಿ ಕುವೆಂಪು ಕನಸಿನ ಕರ್ನಾಟಕವನ್ನು ರೂಪಿಸಲು ಎಲ್ಲರೂ  ಶ್ರಮಿಸೋಣ : ಸಚಿವ ರಮೇಶ

ಬೆಳಗಾವಿ ನ 1: ನಾಡಿನ ಸಾಹಿತ್ಯ, ಸಂಸ್ಕೃತಿ ಹಾಗೂ ಕಲಾ ಪರಂಪರೆ  ಅರಿತುಕೊಂಡು ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಯುವಜನತೆ ಮುಂದಾಗಬೇಕು. ರಾಷ್ಟ್ರಕವಿ ಕುವೆಂಪು ಕನಸಿನ ಸರ್ವ ಜನಾಂಗದ ಶಾಂತಿಯ ತೋಟವಾಗಿ ಕರ್ನಾಟಕವನ್ನು ರೂಪಿಸಲು ಎಲ್ಲರೂ  ಶ್ರಮಿಸೋಣ. ಎಲ್ಲರೂ ಒಂದಾಗಿ ಕನ್ನಡದ ತೇರು ಮುನ್ನಡೆಸೋಣ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ಇಲ್ಲಿಯ ಸಿಪಿಎಡ್ ಮೈದಾನದಲ್ಲಿ  ಬುಧವಾರ 62ನೇ ಕರ್ನಾಟಕ ರಾಜ್ಯೋತ್ಸವದ  ನಿಮಿತ್ತ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಪಾರಿವಾಳ ಮತ್ತು ಬಲೂನು ಹಾರಿಸಿದ ನಂತರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

   ಬೆಳಗಾವಿ ಜಿಲ್ಲೆಯ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಿದ ಸಚಿವ ರಮೇಶ್ ಜಾರಕಿಹೊಳಿ,  ಬೆಳಗಾವಿಯ ಹಿರಿಮೆ, ಕೊಡುಗೆ, ಕನ್ನಡಕ್ಕಾಗಿ ದುಡಿದ,ಮಡಿದ ಮಹನೀಯರನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.

 ಭೌಗೋಳಿಕ ಹಾಗೂ ಹಿತಕರ ಹವಾಮಾನದಿಂದಾಗಿ ಆಕರ್ಷಣೆಯ ಕೇಂದ್ರವಾಗಿರುವ ಬೆಳಗಾವಿ ಜಿಲ್ಲೆ  ಚಾರಿತ್ರಿಕವಾಗಿಯೂ ವೀರ-ಶೂರರ ನಾಡಾಗಿದೆ.  ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿದ ಕಿತ್ತೂರಿನ ರಾಣಿ ಚೆನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಾಡಿನ ಧೀಮಂತ ಶಕ್ತಿ ಎನಿಸಿದ್ದಾರೆ.  ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಭಾರತೀಯ ಕಾಂಗ್ರೆಸ್ ಅಧಿವೇಶನ 1924ರಲ್ಲಿ ಬೆಳಗಾವಿಯ ಪುಣ್ಯಭೂಮಿಯಲ್ಲೇ ನಡೆದಿತ್ತು. ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಜನರೆಲ್ಲ ಒಂದೇ ಪ್ರಾಂತ್ಯದ ಆಡಳಿತಕ್ಕೆ ಒಳಪಡಬೇಕು ಎಂಬ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಡೆದ ಏಕೀಕರಣ ಹೋರಾಟದಲ್ಲೂ ಬೆಳಗಾವಿ ಜಿಲ್ಲೆಯ ಪಾತ್ರ ಪ್ರಮುಖವಾಗಿತ್ತು ಎಂದು ಅವರು ನೆನಪಿಸಿಕೊಂಡರು.

   ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಬೆಳಗಾವಿ ಜಿಲ್ಲೆಯ  ಹಲವಾರು ಮಹನೀಯರು ಕ್ರಿಯಾಶೀಲರಾಗಿ ಹೋರಾಡಿದರು. ಡೆಪ್ಯೂಟಿ ಚೆನ್ನಬಸಪ್ಪ, ಬೈಲಹೊಂಗಲದ ಗಂಗಾಧರ ತುರಮುರಿ, ಹುದಲಿಯ ಸ್ವಾತಂತ್ರ್ಯಯೋಧರಾದ ಗಂಗಾಧರರಾವ್ ದೇಶಪಾಂಡೆ, ಚಿಂಚಲಿಯ ರಾಷ್ಟ್ರೀಯವಾದಿ ಆರ್.ಎಸ್.ಹುಕ್ಕೇರಿ, ತ್ರಿವಿಧ ದಾಸೋಹಿ ನಾಗನೂರ ಶಿವಬಸವ ಮಹಾಸ್ವಾಮಿಗಳು, ಗೋಕಾವಿ ನಾಡಿನ ಬೆಟಗೇರಿ ಕೃಷ್ಣಶರ್ಮ, ಸವದತ್ತಿಯ ಶಂ.ಬಾ.ಜೋಶಿ, ಅಂಕಲಿಯ ಬಸವಪ್ರಭು ಕೋರೆ,  ಅಥಣಿಯ ಬಿ.ಎನ್.ದಾತಾರ, ಕುಂದರನಾಡಿನ ಅಣ್ಣೂ ಗುರೂಜಿ, ದತ್ತೋಪಂತ ಬೆಳವಿ, ಸಂಪಗಾವಿಯ ಚನ್ನಪ್ಪ ವಾಲಿ ಮೊದಲಾದವರ ಕೊಡುಗೆಯನ್ನು ಮರೆಯುವಂತಿಲ್ಲ ಎಂದು ಅವರು ಹೇಳಿದರು.

ಕರ್ನಾಟಕ ಸರ್ಕಾರವು ನಾಡನುಡಿ ರಕ್ಷಣೆ, ನೆಲಜಲ ಅಭಿವೃದ್ಧಿ ಸೇರಿ ನಾಡಿನ ಹಿತಕ್ಕಾಗಿ  ನೂರಾರು ಯೋಜನೆಗಳನ್ನು ಜಾರಿಗೆ ತಂದಿದೆ.  50,000 ರೂ. ವರೆಗಿನ ರೈತರ ಸಾಲ ಮನ್ನಾ,  ರಾಜ್ಯದಲ್ಲಿ 19 ಲಕ್ಷದ 77 ಸಾವಿರದ 641 ರೈತರಿಗೆ ರುಪೇ ಕಾರ್ಡ್ ವಿತರಣೆ,  ಬೆಳಗಾವಿ ಜಿಲ್ಲೆಯಲ್ಲಿ ಅಕ್ಟೋಬರ್ ಅಂತ್ಯಕ್ಕೆ 2 ಲಕ್ಷದ 6 ಸಾವಿರದ 342 ರೈತರಿಗೆ ರೂ.865 ಕೋಟಿ ಸಾಲ ವಿತರಣೆ, Ø
ರಾಜ್ಯದಲ್ಲಿ 36 ಸಾವಿರ ಸ್ವಸಹಾಯ ಗುಂಪುಗಳಿಗೆ 790 ಕೋಟಿ ಸಾಲ ವಿತರಿಸುವ ಗುರಿ,

ಮಕ್ಕಳಿಗೆ ಕ್ಷೀರಭಾಗ್ಯ,  ರಾಜ್ಯದಾದ್ಯಂತ “ಮಾತೃಪೂರ್ಣ” ಯೋಜನೆ ಜಾರಿ, ಅಲ್ಪಸಂಖ್ಯಾತರಿಗೆ ಟ್ಯಾಕ್ಸಿ ಖರೀದಿಸಲು ಸಹಾಯಧನ, ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಯಂತ್ರೋಪಕರಣಗಳಿಗೆ ಸಹಾಯಧನ , ಅಲ್ಪಸಂಖ್ಯಾತರ ಸ್ವಯಂ ಉದ್ಯೋಗ, ಗಂಗಾಕಲ್ಯಾಣ ಮತ್ತು ಭೂ ಖರೀದಿ ಯೋಜನೆಗಳಿಗೆ ಸುಮಾರು 18 ಕೋಟಿ ರೂಪಾಯಿ ಆರ್ಥಿಕ ಗುರಿ,  ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗೂ 8ನೇ ತರಗತಿ ಓದುತ್ತಿರುವ 19 ಸಾವಿರ ಮಕ್ಕಳಿಗೆ ಉಚಿತವಾಗಿ ಬೈಸಿಕಲ್ ವಿತರಣೆ  ಹೀಗೆ ಹಲವು ಅಭಿವೃದ್ಧಿ ಪರ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ ಎಂದು ಸಚಿವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ವಿತರಿಸಲು  ಕ್ಷಯರೋಗದ ಮಾತ್ರೆ ಮತ್ತು ಔಷಧಿಯನ್ನು ಸಚಿವ ರಮೇಶ್ ಜಾರಕಿಹೊಳಿ ಬಿಡುಗಡೆಗೊಳಿಸಿದರು. ಎತ್ತುಗಳನ್ನು ಪೂಜಿಸುವ ಮೂಲಕ ಸ್ತಬ್ಧ ಚಿತ್ರಗಳ ಸಹಿತದ ಆಕರ್ಷಕ ಮೆರವಣಿಗೆ  ಸಚಿವರು ಚಾಲನೆ ನೀಡಿದರು.

ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ, ಪೊಲೀಸ್ ವರಿಷ್ಠ ಡಾ.ರವಿಕಾಂತೇಗೌಡ, ಶಾಸಕ ಫಿರೋಜ್ ಶೇಠ್, ಶಾಸಕ ಸಂಜಯ ಪಾಟೀಲ, ಜಿ.ಪಂ. ಅಧ್ಯಕ್ಷೆ ಆಶಾ ಐಹೊಳೆ, ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು.

 ಪೊಲೀಸ್, ಎನ್ ಸಿಸಿ, ಗೃಹ ರಕ್ಷಣ ದಳ, ಗೈಡ್ಸ್, ಅಗ್ನಿಶಾಮಕದಳ ಸೇರಿ 18 ಗುಂಪುಗಳು ಆಕರ್ಷಕ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದವು.

 ವಿವಿಧ ಶಾಲೆಗಳ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು.

 ಸಿಪಿಎಡ್ ಮೈದಾನದಿಂದ ಚೆನ್ನಮ್ಮ ವೃತ್ತದವರೆಗೂ ನಡೆದ ಮೆರವಣಿಗೆಯಲ್ಲಿ ವಿವಿಧ ಇಲಾಖೆಗಳ 50ಕ್ಕೂ ಹೆಚ್ಚು ಸ್ಥಬ್ಧ ಚಿತ್ರಗಳು  ಭಾಗವಹಿಸಿದ್ದವು. ಜಾನಪದ ಕಲಾತಂಡಗಳ ಕಲಾ ಪ್ರದರ್ಶನ, ವಾದ್ಯಮೇಳಗಳ ಸಂಭ್ರಮ, ಹಾಡು, ಕುಣಿತಗಳು ಮೆರವಣಿಗೆಗೆ ಕಳೆ ನೀಡಿದ್ದವು. ಸಾವಿರಾರು ಜನರು ಚೆನ್ನಮ್ಮ ವೃತ್ತದಲ್ಲಿ ಮೈಳೈಸಿ ರಾಣಿ ಚೆನ್ನಮ್ಮಅವರಿಗೆ ಗೌರವ ಸಲ್ಲಿಸುವ ಜೊತೆಗೆ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಭಾಗಿಯಾದರು.

 ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಕನ್ನಡಾಭಿಮಾನಿಗಳು ಆಗಮಿಸಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡದ್ದು ವಿಶೇಷವಾಗಿತ್ತು.

Related posts: