RNI NO. KARKAN/2006/27779|Tuesday, December 3, 2024
You are here: Home » breaking news » ಗೋಕಾಕ:ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬವ ಕಾರ್ಯದಲ್ಲಿ ಶಿಕ್ಷಕರು ಬ್ಯೂಸಿ : ಶಿಕ್ಷಕರ ಕಾರ್ಯಕ್ಕೆ ಪಾಲಕರ ಮೆಚ್ಚುಗೆ

ಗೋಕಾಕ:ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬವ ಕಾರ್ಯದಲ್ಲಿ ಶಿಕ್ಷಕರು ಬ್ಯೂಸಿ : ಶಿಕ್ಷಕರ ಕಾರ್ಯಕ್ಕೆ ಪಾಲಕರ ಮೆಚ್ಚುಗೆ 

ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬವ ಕಾರ್ಯದಲ್ಲಿ ಶಿಕ್ಷಕರು ಬ್ಯೂಸಿ : ಶಿಕ್ಷಕರ ಕಾರ್ಯಕ್ಕೆ ಪಾಲಕರ ಮೆಚ್ಚುಗೆ

ಗೋಕಾಕ ನ 28 : ಕಳೆದ ಎರಡು ದಿನಗಳಿಂದ ಗೋಕಾಕ ಶೈಕ್ಷಣಿಕ ವಲಯದ ಸರಿ ಸುಮಾರು 50 ಜನ ನುರಿತ ಶಿಕ್ಷಕರ ತಂಡ ದಿನಾಲೂ ಬೆಳಗ್ಗೆ ಮತ್ತು ಸಾಯಂಕಾಲ 2 ತಾಸುಗಳ ಕಾಲ ಮಕ್ಕಳೊಂದಿಗೆ ಫೋನ್‍ನಲ್ಲಿ ಮಾತನಾಡುತ್ತಾ ಬ್ಯುಸಿ ಆಗಿರುತ್ತಾರೆ. ಅದು ಸುಮ್ಮನೇ ಅಲ್ಲ. ಬದಲಿಗೆ ಇವರು ಎಸ್‍.ಎಸ್‍.ಎಲ್‍.ಸಿ.ಮಕ್ಕಳಿಗೆ ಆತ್ಮಸ್ಥೈರ್ಯ ತುಂಬವ ಕೆಲಸ ಮಾಡ್ತಾ ಇದ್ದಾರೆ. ಹೌದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಇಲ್ಲಿನ ಬಿ.ಇ.ಓ. ಜಿ.ಬಿ.ಬಳಗಾರ ಅವರು ನವೆಂಬರ್ 23 ರಿಂದ 2025 ರ ಮಾರ್ಚ್ ಎಸ್.ಎಸ್.ಎಲ್.ಸಿ ಪರೀಕ್ಷೆಯ ಕೊನೆಯ ವಿಷಯದ ಪರೀಕ್ಷೆ ಮುಕ್ತಾಯದವರೆಗೆ. ಹೌದು ಗೋಕಾಕ ಬಿ.ಇ.ಓ. ಜಿ.ಬಿ.ಬಳಗಾರ ಅವರು ಶಾಸಕ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಕಳೆದ ಎರಡು ವರ್ಷಗಳಿಂದ ಈ ವಿನೂತನ ಕಾರ್ಯಕ್ರಮವನ್ನು ಪ್ರಾರಂಭಿಸಿ ಮಕ್ಕಳಲ್ಲಿರುವ ಪರೀಕ್ಷೆಯ ಭಯವನ್ನು ಓಡಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ.

ಶಾಸಕ ರಮೇಶ ಜಾರಕಿಹೊಳಿ ಅವರಿಂದ ಚಾಲನೆ : ಕಳೆದ ಎರಡು ವರ್ಷದ ಹಿಂದೆ ಪ್ರಾರಂಭವಾಗಿರುವ ಈ ವಿನೂತನ “ಒಂದು ಫಲಪ್ರದ ಸಂವಾದ” ಕಾರ್ಯಕ್ರಮಕ್ಕೆ ಶಾಸಕ ರಮೇಶ ಜಾರಕಿಹೊಳಿ ಅವರು ನವೆಂಬರ್ 23 ರಂದು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯ ಪಾಲಕರೋರ್ವರಿಗೆ ಫೋನ್ ಮಾಡಿ ವಿದ್ಯಾರ್ಥಿಯೊಂದಿಗೆ ಮಾತನಾಡುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಿದ್ದಾರೆ. ವಿದ್ಯಾರ್ಥಿಯೊಂದಿಗೆ ಮಾತನಾಡಿರುವ ಶಾಸಕರು ಎಸ್.ಎಸ್.ಎಲ್.ಸಿ ಪರೀಕ್ಷೆ ವಿದ್ಯಾರ್ಥಿ ಜೀವನದಲ್ಲಿ ಅತ್ಯಂತ ಮಹತ್ವದ ಘಟ್ಟವಾಗಿದ್ದು, ವಿದ್ಯಾರ್ಥಿಗಳು ಪರೀಕ್ಷೆಯನ್ನು ಯಾವದೇ ಆಂತಕವಿಲ್ಲದೆ ಎದುರಿಸಬೇಕು. ಶಿಕ್ಷಕರು ಹೇಳುವ ಪ್ರತಿಯೊಂದು ಮಾತುಗಳನ್ನು ಚಾಚು ತಪ್ಪದೆ ಪಾಲಿಸಿ, ಸಮಯಕ್ಕೆ ಮಹತ್ವ ಕೊಟ್ಟು ಅಧ್ಯಯನಶೀಲರಾಗಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತಂದು ಗೋಕಾಕ ವಲಯಯಕ್ಕೆ ಕೀರ್ತಿ ತರಬೇಕು ಎಂದು ವಿದ್ಯಾರ್ಥಿಗಳನ್ನು ಹುರುದುಂಬಿಸಿದ್ದಾರೆ.

50 ಜನ ನುರಿತ ಶಿಕ್ಷಕರ ತಂಡ ರಚನೆ : ಈ ಕಾರ್ಯಕ್ರಮ ಪರಿಣಾಮಕಾರಿಯಾಗಲು ಬಿ‌ಇ.ಓ. ‌ ಬಳಗಾರ ಅವರು ವಲಯದ 50 ಜನ ಶಿಕ್ಷಕರ ತಂಡವನ್ನು ರಚಿಸಿ ಅವರಿಗೆ ಶಾಲಾವಾರು ವಿದ್ಯಾರ್ಥಿಗಳನ್ನು ಹಂಚಿ ಕೊಟ್ಟಿದ್ದಾರೆ. ಈ ಶಿಕ್ಷಕರು ಬೆಳಿಗ್ಗೆ 5 ಘಂಟೆಯಿಂದ 7:30 ರವರೆಗೆ ಹಾಗೂ ಶಾಲಾ ಅವಧಿ ಮುಗಿದ ಮೇಲೆ ಸಾಯಂಕಾಲ 6 ರಿಂದ 8 ಘಂಟೆಯವರೆಗೆ ಎಸ್.ಎಸ್.ಎಲ್.ಸಿ. ಮಕ್ಕಳ ಪಾಲಕರಿಗೆ ಫೋನ್ ಮಾಡಿ ಮೊದಲು ಅವರೊಂದಿಗೆ ಸಂಭಾಷಣೆ ಮಾಡಿ ನಂತರ ಮಕ್ಕಳೊಂದಿಗೆ ಮಾತನಾಡುವ ಶಿಕ್ಷಕ ಮತ್ತು ಶಿಕ್ಷಕಿಯರ ಶೈಲಿ ನಿಜವಾಗಿಯೂ ಮೆಚ್ಚುವಂತಹದ್ದು, ಆರಾಮಿದ್ದಿಯಾ ಎಂದು ಪ್ರಾರಂಭವಾಗುವ ಶಿಕ್ಷಕರ ಮಾತು ವಿದ್ಯಾರ್ಥಿಗಳನ್ನು ಆಯಾಯ ವಿಷಯದ ಆಳಕ್ಕೆ ಕೊಂಡಯ್ಯುತ್ತದೆ. ಯಾವ ವಿಷಯ ಕಠಿಣ ವೆನಿಸುತ್ತದೆ, ಯಾವ ವಿಯಷವನ್ನು ಹೇಗೆ ಅಭ್ಯಾಸ ಮಾಡಬೇಕು, ಪ್ರಶ್ನೆ ಪತ್ರಿಕೆಯನ್ನು ಯಾವ ರೀತಿ ಬಿಡಿಸಬೇಕು, ಟೈಮ್ ಮ್ಯಾನೇಜ್ಮೆಂಟ್ ಹೇಗೆ ಮಾಡಬೇಕು, ಕಠಿಣ ವೆನಿಸುವ ವಿಷಯಗಳನ್ನು ಯಾವ ರೀತಿ ಪಠಣ ಮಾಡಬೇಕು. ಎಂಬಿತ್ಯಾದಿ ವಿಷಯಗಳನ್ನು ಅತ್ಯಂತ ಪ್ರೀತಿ ಮತ್ತು ಆತ್ಮೀಯತೆಯಿಂದ ಹೇಳುವ ಶಿಕ್ಷಕರ ಮಾತನಾಡುವ ಶೈಲಿ ನೋಡಿದರೆ ಪುಸ್ತಕಗಳನ್ನು ಬಿಟ್ಟು ಅಗಲಬಾರದು ಎಂದೆನೆಸುತ್ತದೆ. ಅಷ್ಟು ಪ್ರೀತಿಯಿಂದ ಮಾತನಾಡಿಸುತ್ತಾರೆ.

ಭಾಗ್ಯವಂತ ವಿದ್ಯಾರ್ಥಿಗಳು : ನವೆಂಬರ್ 23 ರಿಂದ ಪ್ರಾರಂಭವಾಗಿರುವ ಈ ವಿನೂತನ ” ಒಂದು ಫಲಪ್ರದ ಸಂವಾದ” ಕಾರ್ಯಕ್ರಮದ ಅಡಿಯಲ್ಲಿ ಗೋಕಾಕ ವಲಯದ 64 ಪ್ರೌಢಶಾಲೆಯ 4,830 ವಿದ್ಯಾರ್ಥಿಗಳು ಶಿಕ್ಷಕರ ಫೋನ್ ಕಾಲ್ ಗೆ ಒಳಪಡುತ್ತಾರೆ. ಈ ವಿದ್ಯಾರ್ಥಿಗಳು ನಿಜವಾಗಿಯೂ ಪುಣ್ಯವಂತರು. ಶಾಲಾ ಅವಧಿ ಯಾವಾಗ ಮುಗಿಯುತ್ತದೆ ಎಂದು ಗಡಿಯಾರ ನೋಡುವ ಈ ಪ್ರಸ್ತುತ ದಿನಮಾನಗಳಲ್ಲಿ ಶಾಲಾ ಅವಧಿಯ ಮುಂಚೆ ಹಾಗೂ ಅವಧಿಯ ನಂತರ ನಮ್ಮ ವಲಯದ ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡುತ್ತಿರುವ ಮಕ್ಕಳು 100 ಕ್ಕೆ 100 ರಷ್ಟು ಫಲಿತಾಂಶ ಮಾಡಬೇಕು ಎಂಬ ಮಹದಾಸೆಯಿಂದ ಮಕ್ಕಳಿಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ಕಾರ್ಯ ಪಾಲಕರ ಮತ್ತು ಸಾರ್ವಜನಿಕರು ಪ್ರಶಂಸೆಗೆ ಪಾತ್ರವಾಗಿದೆ.

ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಲು ವಿನೂತನ ಕಾರ್ಯಕ್ರಮಗಳ ಆಯೋಜನೆ : ಕಳೆದ 1 ದಶಕದಿಂದ ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಅವರು ಶಾಸಕ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮಹತ್ತರ ಸಾಧನೆ ಮಾಡಲೆಂದು ಸತತ ಪ್ರಯತ್ನ ಮಾಡುತ್ತಿದ್ದಾರೆ. ಗುರೂಜೀ ಬಂದರು ಗುರುವಾರ, ದಿನಕ್ಕೊಂದು ವಿಜ್ಞಾನ ಚಿತ್ರ, ಮಿಸ್ ಕಾಲ್ ಮಾಡಿ ಉತ್ತರ ಪಡೆಯಿರಿ , ಪತ್ರದಿಂದ ಹತ್ರ, ನಕ್ಷೆ ಸಪ್ತಾಹ, ಪತ್ರ ಚಳುವಳಿ, ವಿಜ್ಞಾನ ರಂಗೋಲಿ, ವಿದ್ಯಾರ್ಥಿಗಳೊಂದಿಗೆ ಒಂದು ಫಲಪ್ರದ ಸಂವಾದ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ದತ್ತು, ಪದ್ಯ ಕಂಠಪಾಠ ಸೇರಿದಂತೆ ಅನೇಕ ವಿಶಿಷ್ಟ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಎಸ್.ಎಸ್.ಎಲ್‌.ಸಿ. ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯವನ್ನು ಹೋಗಲಾಡಿಸಿ ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಕಾರ್ಯವನ್ನು ಬಿ.ಇ.ಓ. ಬಳಗಾರ ತಮ್ಮ ಶಿಕ್ಷಕರ ತಂಡದೊಂದಿಗೆ ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಇಂತಹ ವಿನೂತನ ಕಾರ್ಯಗಳೊಂದಿಗೆ ಗೋಕಾಕ ವಲಯದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶವನ್ನು ರಾಜ್ಯದ ಉತ್ತುಂಗಕ್ಕೆ ಒಯ್ದಿರುವ ಬಳಗಾರ ಅವರು ಮಕ್ಕಳ ಪ್ರೀತಿಯ ಬಿ.ಇ.ಓ. ಆಗಿ ಹೊರಹೊಮ್ಮಿದ್ದಾರೆ. 2023ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯಂತ ಹೀನಾಯ ಫಲಿತಾಂಶ ಬಂದರೂ ಸಹ ಎದೆಗುಂದದೆ ಮತ್ತೆ ಪುಟಿದೇಳುವ ದಿಸೆಯಲ್ಲಿ ತಮ್ಮ ವಿಶಿಷ್ಟ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಅವಿರತ ಶ್ರಮ ಪಡುತ್ತಿದ್ದಾರೆ. ಇವರ ಈ ಅವಿರತ ಕಾರ್ಯಕ್ಕೆ ವಲಯದ ಎಲ್ಲಾ ಶಿಕ್ಷಕರು ಹೆಗಲಿಗೆ ಹೆಗಲುಕೊಟ್ಟು ಕಾರ್ಯಮಾಡಿ ಮುಂಬರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಮತ್ತೆ ರಾಜ್ಯದ ಗಮನ ಸೆಳೆಯುವ ತವಕದಲ್ಲಿರುವುದು ಮಕ್ಕಳಲ್ಲಿಯ ಉತ್ಸಾಹ ಹೆಚ್ಚಿಸಿದೆ.

” ಗೋಕಾಕ ವಲಯದ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಮಾಡಬೇಕು ಹಾಗೂ ಅವರಲ್ಲಿ ಪರೀಕ್ಷೆ ಬರೆಯುವ ಧೈರ್ಯ ಬರಬೇಕು ಎಂಬ ಉದ್ದೇಶದಿಂದ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ವಲಯದ ಎಲ್ಲಾ ಗುರುಗಳು ಮತ್ತು ಗುರುಮಾತೆಯರು ಪಡುತ್ತಿರುವ ಶ್ರಮ ಇತರರಿಗೆ ಮಾದರಿಯಾಗಿದ್ದು, ಇವರು ಹಮ್ಮಿಕೊಳ್ಳುವ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಹಾಯ, ಸಹಕಾರ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಸಾಧಕರಾಗಬೇಕು”.
– ರಮೇಶ ಜಾರಕಿಹೊಳಿ ಶಾಸಕರು ಗೋಕಾಕ.

” ಶಾಸಕ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಕಳೆದ ಒಂದು ದಶಕದಿಂದ ಗೋಕಾಕ ವಲಯದ ಮಕ್ಕಳಿಗಾಗಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರ ಫಲಿತಾಂಶ ವೃದ್ದಿಗಾಗಿ ಪ್ರಯತ್ನ ಮಾಡಲಾಗುತ್ತಿದೆ. ಇದು ವಿದ್ಯಾರ್ಥಿಗಳ ಹಾಗೂ ಶಿಕ್ಷಕರಲ್ಲಿ ಹೊಸ ಚೈತನ್ಯ ಮೂಡಿಸಿದೆ. ನಮ್ಮ ಕಾರ್ಯಕ್ರಮಗಳು ರಾಜ್ಯದ ಹಲವು ವಲಯಗಳಲ್ಲಿ ಹಾಗೂ ಗುಜರಾತ್ ಮತ್ತು ತೆಲಂಗಾಣ ರಾಜ್ಯದಲ್ಲಿ ಜಾರಿಯಾಗುತ್ತಿರುವುದು ಖುಷಿ ತಂದಿದ್ದು, ಗೋಕಾಕ ವಲಯದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 100 ಕ್ಕೆ 100 ರಷ್ಟು ಫಲಿತಾಂಶ ಮಾಡಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಚಿಕ್ಕ ಪ್ರಯತ್ನ ನಮ್ಮದಾಗಿದೆ”.
– ಜಿ‌.ಬಿ.ಬಳಗಾರ .ಕ್ಷೇತ್ರ ಶಿಕ್ಷಣಾಧಿಕಾರಿಗಳು ಗೋಕಾಕ ಶೈಕ್ಷಣಿಕ ವಲಯ.

” ಭಯಮುಕ್ತರಾಗಿ ಎಸ್.ಎಸ. ಎಲ್.ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಉತ್ತಮ ಅಂಕಗಳನ್ನು ಪಡೆದು ಪಾಸಾಗಲ್ಲಿ ಎಂದು ಶಾಸಕ ರಮೇಶ ಜಾರಕಿಹೊಳಿ ಅವರು ಮತ್ತು ಶಿಕ್ಷಣಾಧಿಕಾರಿ ಬಳಗಾರ ಮತ್ತು ಅವರ ಶಿಕ್ಷಕರ ಬಳಗ ವಿದ್ಯಾರ್ಥಿಗಳಿಗೆ ಪೋನ ಮಾಡಿ ಕಠಿಣ ವಿಷಯಗಳನ್ನು ಸಲಿಸಾಗಿ ಬರೆಯುವುದು ಹೇಗೆ ಎಂದು ಧೈರ್ಯ ತುಂಬುತ್ತಿರುವ ಕಾರ್ಯ ನೋಡಿ ಸಂತೋಷವಾಗಿದೆ. ಪಾಲಕರು ಸಹ ತಮ್ಮ ಮಕ್ಕಳ ವಿಧ್ಯಾಭ್ಯಾಸದ ಕಡೆಗೆ ಗಮನ ಹರಿಸಿ ಮನೆಯಲ್ಲಿ ಓದಲು ಅವರಿಗೆ ಉತ್ತಮ ವಾತಾವರಣ ನಿರ್ಮಿಸಿ ಕೊಟ್ಟು ಸಹಕರಿಸಬೇಕು”.
— ಕೆಂಪಣ್ಣ ಕಡಕೋಳ ಪಾಲಕರು

Related posts: