RNI NO. KARKAN/2006/27779|Friday, July 12, 2024
You are here: Home » breaking news » ಗೋಕಾಕ:ಮಕ್ಕಳಗೇರಿ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ : ಶಾಸಕ ರಮೇಶ ಹರ್ಷ

ಗೋಕಾಕ:ಮಕ್ಕಳಗೇರಿ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ : ಶಾಸಕ ರಮೇಶ ಹರ್ಷ 

ಮಕ್ಕಳಗೇರಿ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ : ಶಾಸಕ ರಮೇಶ ಹರ್ಷ

ಗೋಕಾಕ ಅ 5 : ಅಭಿವೃದ್ಧಿಯ ಶಕ್ತಿ ಹಳ್ಳಿಗಳಿದೆ ಇದನ್ನು ಅರಿತು ಗ್ರಾಪಂ ಆಡಳಿತ ಮಂಡಳಿ, ಅಧಿಕಾರಿ ವರ್ಗ ಸಾರ್ವಜನಿಕರ ಸಹಕಾರದೊಂದಿಗೆ ಜನರಿಗೆ ಮೂಲಭೂತ ಸೌಕರ್ಯ, ಜನರ ಜೀವನ ಮಟ್ಟ ಸುಧಾರಣೆ, ಉತ್ತಮ ಆಡಳಿತ, ಜನರಿಗೆ ಸಮರ್ಪಕ ಸೇವೆಗಳನ್ನು ತಲುಪಿಸುವ ಗುರಿಯೊಂದಿಗೆ ಮುನ್ನಡೆಯುತ್ತಿರುವ ತಾಲೂಕಿನ ಮಕ್ಕಳಗೇರಿ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ.
ಅಕ್ಟೋಬರ್ 2 ಗಾಂಧಿ ಜಯಂತಿಯಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಾಯಿತಿ ರಾಜ್ಯ ಸಚಿವ ಪ್ರಿಯಾಂಕಾ ಖರ್ಗೆ ಅವರು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ಮಕ್ಕಳಗೇರಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಸ್ಥಳೀಯ ಶಾಸಕರ ಅನುದಾನ ಮತ್ತು ಇಲಾಖೆಯಿಂದ ಬರುವ ಅನುದಾನಗಳನ್ನು ಸರಿಯಾಗಿ ಬಳಸಿಕೊಳ್ಳಲಾಗಿದೆ. ಶಾಲಾ ಅಭಿವೃದ್ಧಿ, ಅಂಗನವಾಡಿ ಅಭಿವೃದ್ಧಿ, ಸಮುದಾಯ ಭವನ ನಿರ್ಮಾಣ, ರಸ್ತೆ, ಚರಂಡಿ, ಸಮುದಾಯ ಮತ್ತು ವೈಯಕ್ತಿಕ ಶೌಚಾಲಯಗಳ ನಿರ್ಮಾಣ, ಕಸ ವಿಲೇವಾರಿ, ಎಲ್ಇಡಿ ಬೀದಿ ದೀಪಗಳ ಅಳವಡಿಕೆ, ಜೆಜೆಎಂ ಅಡಿ ನಿರಂತರ ನೀರು ಪೂರೈಕೆ, ವಿದ್ಯುತ್ ಸಂಪರ್ಕ, ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಸಮರ್ಪಕ ಕಾರ್ಯ ಸೇರಿದಂತೆ ಇತರ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವ ಮಕ್ಕಳಗೇರಿ ಗ್ರಾಮ ಪಂಚಾಯಿತಿ ತಾಲೂಕಿಗೆ ಮಾದರಿ ಗ್ರಾಮ ಪಂಚಾಯಿತಿ ಎನಿಸಿಕೊಂಡಿದೆ. ಮಕ್ಕಳಗೇರಿ ಗ್ರಾಮ ಪಂಚಾಯಿತಿಯು ಸನ್ 2022-23ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದ್ದು, ಆಡಳಿತ ಮಂಡಳಿಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದೆ.
ರಾಜ್ಯ ಸರಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ರಾಜ್ಯದ ಪ್ರತಿ ತಾಲೂಕಿಗೆ ಒಂದರಂತೆ ಗ್ರಾಮ ಪಂಚಾಯಿತಿಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಸಾಲಿನ ಪ್ರಶಸ್ತಿ ಗೋಕಾಕ ತಾಲೂಕಿನ ಮಕ್ಕಳಗೇರಿ ಗ್ರಾಮ ಪಂಚಾಯಿತಿಗೆ ಲಭಿಸಿದೆ. ಸಂಪೂರ್ಣ ಸ್ವಚ್ಛತೆ ಹಾಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಾಣ ಮಾಡಿದನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.ಈ ಪ್ರಶಸ್ತಿಯು 5 ಲಕ್ಷ ನಗದು ಮತ್ತು ಅಭಿನಂದನ ಪತ್ರವನ್ನು ಒಳಗೊಂಡಿದೆ.
ಶಾಸಕ ರಮೇಶ ಅವರ ಕಾಳಜಿ : ಕಳೆದ 3ದಶಕಗಳಿಂದ ಗೋಕಾಕ ಕ್ಷೇತ್ರವನ್ನು ನಂದನವನವನ್ನಾಗಿ ಮಾಡುವ ಸಂಕಲ್ಪ ಹೊಂದಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ತಂದು ಮತಕೇತ್ರವನ್ನು ಸುಧಾರಿಸುವಲ್ಲಿ ಕಾರ್ಯಪ್ರವೃತ್ತವಾಗಿರುವ ಶಾಸಕ ರಮೇಶ ಜಾರಕಿಹೊಳಿ ಅವರು ಗ್ರಾಮ ಮಟ್ಟದಲ್ಲಿಯೂ ಸಹ ಮೂಲಭೂತ ಸೌಕರ್ಯಗಳಾದ ರಸ್ತೆ, ನೀರು, ವಿದ್ಯುತ್ ಜೊತೆಗೆ ಶಿಕ್ಷಣಕ್ಕೆ ಹೆಚ್ಚಿನ ಮಹತ್ವದ ನೀಡಿ ಮತ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಹೊಸ ಚೈತನ್ಯ ಮೂಡಿಸುತ್ತಿದ್ದಾರೆ. ಶಾಸಕರ ಈ ಪ್ರಯತ್ನದ ಫಲವಾಗಿ ಗ್ರಾಮ ಪಂಚಾಯಿತಿಗಳು ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಿ, ಬಯಲು ಮುಕ್ತ ಶೌಚಾಲಯ, ಸ್ವಚ್ಛತೆ ಹಾಗೂ ಕಸ ವಿಲೇವಾರಿ ಸೇರಿದಂತೆ
ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೋಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ ಅದರ ಪ್ರತಿಫಲವಾಗಿಯೆ ಸನ 2022-23ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ತಾಲೂಕಿನ ಮಕ್ಕಳಗೇರಿ ಗ್ರಾಮ ಪಂಚಾಯಿತಿಗೆ ದೊರೆತಿದೆ.
ಮಕ್ಕಳಗೇರಿ, ಹಿರೇಹಟ್ಟಿ , ಹಣಮಾಪೂರ ಗ್ರಾಮಗಳನ್ನು ಒಳಗೊಂಡರಿವ ಮಕ್ಕಳಗೇರಿ ಗ್ರಾಮ ಪಂಚಾಯಿತಿ ಒಟ್ಟು 15 ಸದಸ್ಯರನ್ನು ಹೊಂದಿದೆ.ಒಟ್ಟು 5,500 ಕ್ಕಿಂತ ಹೆಚ್ಚಿನ ಜನಸಂಖ್ಯೆ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಇದೆ.
ಮಕ್ಕಳಗೇರಿ ಗ್ರಾಮದಿಂದ 11, ಹಿರೇಹಟ್ಟಿ ಗ್ರಾಮದಿಂದ 3, ಹಣಮಾಪೂರ ಗ್ರಾಮದಿಂದ 1 ಹೀಗೆ ಒಟ್ಟು 15 ಸದಸ್ಯ ಬಲದ ಪಂಚಾಯಿತಿಯಲ್ಲಿ ಎಲ್ಲರೂ ಕೂಡಿಕೊಂಡು ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ನಿಯಮಿತವಾಗಿ ಗ್ರಾಮ ಸಭೆಗಳನ್ನು ಪರಿಣಾಮಕಾರಿಯಾಗಿ ನಡೆಸಿ ಗ್ರಾಮದ ಜನರ ಸಮಸ್ಯೆಗಳನ್ನು ಆಲಿಸಿ ಶಾಸಕ ರಮೇಶ ಜಾರಕಿಹೊಳಿ ಅವರ ಗಮನಕ್ಕೆ ತಂದು ಅವುಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡುವ ಕಾರ್ಯವನ್ನು ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಅವಕ್ಕ ಗಸ್ತಿ , ಪಿಡಿಓ ನಾಗೇಶ್ ಹಾಸಿಲಕರ ಸೇರಿದಂತೆ ಎಲ್ಲ ಸದಸ್ಯರು ಮಾಡುತ್ತಿದ್ದಾರೆ. ಪಂಚಾಯಿತಿ ಸಿಬ್ಬಂದಿಗಳು ಸಹ ಸದಸ್ಯರಿಗೆ ಸಾಥ್ ನೀಡಿ ಪಂಚಾಯಿತಿ ದಾಖಲಾತಿಗಳನ್ನು ವ್ಯವಸ್ಥಿತವಾಗಿ ಇಟ್ಟು ಉನ್ನತಾಧಿಕಾರಿಗಳಿಂದ ಸೈ ಎನಿಸಿಕೊಂಡಿದ್ದಾರೆ. ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಗ್ರಾಮ ಪಂಚಾಯಿತಿ ಪಿಡಿಓ ನಾಗೇಶ್ ಹಾಸಿಲಕರ ಅವರು ಗ್ರಾಮದಲ್ಲಿ ಹಲವಾರು ಕಾಮಗಾರಿಗಳನ್ನು ಮಾಡಲು ಗ್ರಾಮಸ್ಥರು ಸಹಕಾರ ನೀಡಿದ್ದಾರೆ. ಬಹುಮುಖ್ಯವಾಗಿ ಶಾಸಕ ರಮೇಶ ಜಾರಕಿಹೊಳಿ ಅವರು ನಿರಂತರ ಮಾರ್ಗದರ್ಶನ ಮಾಡಿ ನಮ್ಮ ಬೆನ್ನು ತಟ್ಟಿದ್ದಾರೆ. ಸಚಿವ ಸತೀಶ ಜಾರಕಿಹೊಳಿ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಅಂಬಿರಾವ ಪಾಟೀಲ, ಅಮರನಾಥ ಜಾರಕಿಹೊಳಿ ಹಾಗೂ ಮಾಜಿ ಜಿಪಂ ಸದಸ್ಯ ತುಕಾರಾಮ ಕಾಗಲ್ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಸಹ ಸೂಕ್ತ ಮಾರ್ಗದರ್ಶನ ಮಾಡಿದ್ದಾರೆ ಇದರ ಫಲವಾಗಿ ಇಂದು ಪ್ರಶಸ್ತಿ ದೊರೆತ್ತಿದ್ದು, ಈ ಪ್ರಶಸ್ತಿಯಿಂದ ನಮ್ಮ ಜವಾಬ್ದಾರಿ ಹೆಚ್ಚಾಗಿದ್ದು, ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ಉತ್ಸಾಹ ತರಿಸಿದೆ ಎಂದು ಹೇಳಿದ್ದಾರೆ.
ಶಾಸಕ ರಮೇಶ ಜಾರಕಿಹೊಳಿ ಅವರು ಸಹ ಮಕ್ಕಳಗೇರಿ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ದೊರೆತ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮತಕ್ಷೇತ್ರದ ಪ್ರತಿ ಗ್ರಾಮ ಪಂಚಾಯಿತಿಗಳು ಸಹ ಸರಕಾರದಿಂದ ಬರುವ ಯೋಜನೆಗನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಮಾಡಬೇಕು ಅಂದಾಗ ಸರಕಾರ ಹಾಗೂ ಸಾರ್ವಜನಿಕರು ಒಳ್ಳೆಯ ಪಂಚಾಯಿತಿಗಳು ಎಂದು ಗುರುತಿಸಲು ಸಾಧ್ಯ ಆ ದಿಸೆಯಲ್ಲಿ ಎಲ್ಲ ಪಂಚಾಯತಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಪ್ರವೃತ್ತವಾಗದಾಗ ಮಾತ್ರ ತಮ್ಮ , ತಮ್ಮ ಗ್ರಾಮಗಳನ್ನು ಸ್ವಚ್ಛ ಹಾಗೂ ಸುಂದರ ಗ್ರಾಮಗಳನ್ನಾಗಿ ಮಾಡಲು ಸಾಧ್ಯ ಎಂದಿರುವ ಅವರು ತಾಲೂಕಿನ ಪ್ರತಿ ಪಂಚಾಯಿತಿಗಳಿಂದ ಒಳ್ಳೆಯ ಅಭಿವೃದ್ಧಿ ಪರ ಕಾರ್ಯಗಳು ಜರುಗಲಿ ಎಂದು ಹಾರೈಸಿದ್ದಾರೆ

Related posts: