ಗೋಕಾಕ:ಮಕ್ಕಳ ಭವಿಷ್ಯವನ್ನು ರೂಪಿಸುವ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ : ಶಾಸಕ ಲಖನ ಜಾರಕಿಹೊಳಿ

ಮಕ್ಕಳ ಭವಿಷ್ಯವನ್ನು ರೂಪಿಸುವ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ : ಶಾಸಕ ಲಖನ ಜಾರಕಿಹೊಳಿ
ಗೋಕಾಕ ಸೆ 5 : ಮಕ್ಕಳ ಭವಿಷ್ಯವನ್ನು ರೂಪಿಸುವ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟು ವಿದ್ಯಾರ್ಥಿಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡುವಂತೆ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಕಿವಿಮಾತು ಹೇಳಿದರು.
ಮಂಗಳವಾರದಂದು ನಗರದ ಶ್ರೀ ಮಹಾಲಕ್ಷ್ಮಿ ಸಭಾಂಗಣದಲ್ಲಿ ಜರುಗಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಗೋಕಾಕ ಅವರು ಹಮ್ಮಿಕೊಂಡ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರ 136ನೇ ಹುಟ್ಟು ಹಬ್ಬದ ಸವಿನೆನಪಿನಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ತಂದೆ, ತಾಯಿಯ ನಂತರ ಗುರುವಿಗೆ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾ ಬಂದಿದ್ದಾರೆ.ಮಕ್ಕಳನ್ನು ಒಳ್ಳೆಯ ಪ್ರಜೆಯನ್ನಾಗಿ ಮಾಡುವ ಜವಾಬ್ದಾರಿಯೂ ಸಹ ಶಿಕ್ಷಕರ ಮೇಲಿದೆ. ಆ ಕಾರಣಕ್ಕಾಗಿಯೇ ಸರಕಾರಗಳು ಶಿಕ್ಷಣ ಮತ್ತು ಆರೋಗ್ಯಕ್ಕೆ ಮಹತ್ವ ನೀಡಿ ಕಾರ್ಯಮಾಡುತ್ತಿವೆ.
ಜೀವನದಲ್ಲಿ ಹಣ ಗಳಿಸಬಹುದು ಆದರೆ ಸಕಾಲಕ್ಕೆ ವಿದ್ಯೆ ಪಡೆಯಲು ಸಾಧ್ಯವಿಲ್ಲ. ಇದನ್ನು ಅರಿತು ವಿದ್ಯಾರ್ಥಿಗಳು ಸಕಾಲದಲ್ಲಿ ವಿದ್ಯೆಯನ್ನು ಪಡೆದು ತಮ್ಮ ಜೀವನವನ್ನು ಪಾವನಗೊಳಿಸಿಕೊಳ್ಳಬೇಕು ಆ ದಿಸೆಯಲ್ಲಿ ಕಳೆದ ಹಲವು ವರ್ಷಗಳಿಂದ ಗೋಕಾಕ ವಲಯದಲ್ಲಿ ಒಳ್ಳೆಯ ವಿದ್ಯಾರ್ಥಿಗಳನ್ನು ತಯಾರಿ ಮಾಡುವ ಕಾರ್ಯವನ್ನು ಶಿಕ್ಷಣ ಇಲಾಖೆ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ವಹಿಸಿದ್ದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಿಗೆ ಮತ್ತು ಅತ್ಯುತ್ತಮ ಶಿಕ್ಷಕರಿಗೆ ಸತ್ಕರಿಸಿ, ಗೌರವಿಸಲಾಯಿತು.
ವೇದಿಕೆಯಲ್ಲಿ ತಹಶೀಲ್ದಾರ ಕೆ.ಮಂಜುನಾಥ್, ಜಿಪಂ ಮಾಜಿ ಸದಸ್ಯರುಗಳಾದ ಟಿ.ಆರ್.ಕಾಗಲ್, ಮಡೆಪ್ಪ ತೋಳಿನವರ, ತೋಟಗಾರಿಕೆ ನಿರ್ದೇಶಕ ಎಂ.ಎಂ.ಜನ್ಮಟ್ಟಿ, ಕೃಷಿ ಅಧಿಕಾರಿ ಎಂ.ಎಂ ನಧಾಫ್, ಡಾ.ಮೋಹನ್ ಕಮತ, ಹೆಸ್ಕಾಂನ ಎಸ್..ಪಿ ವರಾಳೆ, ಬಿಸಿಯೂಟ ಅಧಿಕಾರಿ ಎಂ.ಬಿ.ಮಲಬನ್ನವರ, ಶಿಶು ಅಭಿವೃದ್ಧಿ ಅಧಿಕಾರಿ ಡಿ.ಎಸ್.ಕುಡವಕ್ಕಲಗಿ ಉಪಸ್ಥಿತರಿದ್ದರು