ಬೆಳಗಾವಿ:ಗ್ಯಾರಂಟಿ ಯೋಜನೆ ಜಾರಿಯಿಂದ ಬಿಜೆಪಿಗೆ ಆತಂಕ ಶುರುವಾಗಿದೆ: ಸತೀಶ್ ಜಾರಕಿಹೊಳಿ

ಗ್ಯಾರಂಟಿ ಯೋಜನೆ ಜಾರಿಯಿಂದ ಬಿಜೆಪಿಗೆ ಆತಂಕ ಶುರುವಾಗಿದೆ: ಸತೀಶ್ ಜಾರಕಿಹೊಳಿ
ಬೆಳಗಾವಿ ಜೂ 4 : ಜನರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆ. ನೋಡಿದ ಬಿಜೆಪಿಗೆ ಆತಂಕ ಶುರುವಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಜಾರಿಗೆ ತಂದ ಘೋಷಣೆಗಳನ್ನು ಜನರು ಹೃದಯಪೂರ್ವಕವಾಗಿ ಸ್ವಾಗತ ಮಾಡುತ್ತಿದ್ದಾರೆ. ಈ ವಿಷಯವನ್ನು ಮರೆಮಾಚಲು ಬಿಜೆಪಿಯವರು ಬೇರೆ ಅಸ್ತ್ರ ಹೂಡುತ್ತಿದ್ದಾರೆ. ಇವರ ಬಯಕೆ ಎಂದಿಗೂ ಈಡೇರುವುದಿಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಎಮ್ಮೆ, ಕೋಣ ಕಡಿಯುವುದಾದರೆ ಹಸು ಏಕೆ ಕಡಿಯಬಾರದು ಎಂದು ಪಶುಸಂಗೋಪನಾ ಇಲಾಖೆಯ ಸಚಿವ ವೆಂಕಟೇಶ್ ಹೇಳಿಕೆಯನ್ನು ಬಿಜೆಪಿ ದೊಡ್ಡ ಅಸ್ತ್ರವಾಗಿಸಿಕೊಂಡಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ಇನ್ನು ಐದು ವರ್ಷ ಏನೂ ಕೆಲಸ ಇಲ್ಲ. ಬಿಜೆಪಿಯವರು ಬೋರ್ಡ್ ಬರೆದು ಇಡಬೇಕು ಇನ್ಮೇಲೆ. ಹೋರಾಟ, ಗೆಲ್ಲುವವರೆಗೂ ಹೋರಾಟ ಅಂತ. ಇದೇ ಅವರ ಕೆಲಸ ಅದನ್ನೇ ಅವರು ಮಾಡಿದ್ದಾರೆ. ಅಭಿವೃದ್ಧಿಯ ವಿಷಯ ಗೊತ್ತೇ ಇಲ್ಲ ಅವರಿಗೆ. ಕೇವಲ ಕೋಮು, ದ್ವೇಷ ಹರಡಿಸುವುದು, ಗಲಾಟೆ, ಒಬ್ಬರನ್ನೊಬ್ಬರು ಎತ್ತಿ ಕಟ್ಟುವುದು ಇಷ್ಟೇ ಅವರ ಕೆಲಸ. ಯಾರೇ ಹೇಳಿಕೆ ನೀಡಿದರೂ ಸದನದಲ್ಲಿ ಚರ್ಚೆಗೆ ಅವಕಾಶ ಇದೆ ಎಂದು ಹೇಳಿದರು.