ರಾಯಬಾಗ:ಬಿಇಒ ಪ್ರಭಾವತಿ ಪಾಟೀಲ ಅವರು ಚಲಿಸುತ್ತಿರುವ ಕಾರು ಅಪಘಾತ

ಬಿಇಒ ಪ್ರಭಾವತಿ ಪಾಟೀಲ ಅವರು ಚಲಿಸುತ್ತಿರುವ ಕಾರು ಅಪಘಾತ
ರಾಯಬಾಗ ಡಿ 7 : ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ ಅವರು ಚಲಿಸುತ್ತಿರುವ ಕಾರಿನ ಟೈರ್ ಬ್ಲಾಸ್ಟ್ ಆಗಿ ಅಪಘಾತ ಸಂಭವಿಸಿರುವ ಘಟನೆ ಬುಧವಾರ ಮಧ್ಯಾಹ್ನ ತಾಲೂಕಿನ ಹುಬ್ಬರವಾಡಿ ಗ್ರಾಮದ ಮಂಗಸೂಳಿ-ಲಕ್ಷೇಶ್ವರ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಬುಧವಾರ ಮಧ್ಯಾಹ್ನ ತಮ್ಮ ಕಚೇರಿಯಿಂದ ಸ್ವಗ್ರಾಮ ಹುಕ್ಕೇರಿ ಪಟ್ಟಣಕ್ಕೆ ತೆರುತ್ತಿರುವ ಸಮಯದಲ್ಲಿ ಈ ಘಟನೆ ನಡೆದಿದ್ದು, ಕಾರನ್ನು ಸ್ವತಃ ಬಿಇಒ ಅವರು ಚಲಾಯಿಸುತ್ತಿದ್ದರು. ಕಾರಿನ ಮುಂದಿನ ಟೈರ್ ಬ್ಲಾಸ್ಟ್ ಆಗಿ, ಕಾರು ೨-೩ ಪಲ್ಟಿ ಆಗಿದೆ. ಕಾರಿನಲ್ಲಿದ್ದ ಏರ್‌ಬ್ಯಾಗ್ ತೆರೆದುಕೊಂಡಿದ್ದರಿAದ ಬಿಇಒ ಪ್ರಭಾವತಿ ಪಾಟೀಲ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದ ತಾಲೂಕಿನ ಶಿಕ್ಷಕರು ಘಟನಾ ಸ್ಥಳಕ್ಕೆ ತೆರಳಿ ಕೂಡಲೇ ಅವರನ್ನು ಬೇರೆ ವಾಹನದಲ್ಲಿ ಕರೆದುಕೊಂಡು ಬಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಂಬುಲೇನ್ಸ್ ಮೂಲಕ ಬೆಳಗಾವಿ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಕರಣ ರಾಯಬಾಗ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಬಿಇಒ ಪ್ರಭಾವತಿ ಪಾಟೀಲ ಅವರು ಗುರುವಾರ ಕಚೇರಿ ಕೆಲಸ ನಿಮಿತ್ಯ ಬೆಂಗಳೂರಿಗೆ ತೆರಳುವ ನಿಟ್ಟಿನಲ್ಲಿ ಬುಧವಾರ ಮಧ್ಯಾಹ್ನ ಕಚೇರಿಯಿಂದ ಹುಕ್ಕೇರಿಗೆ ತೆರಳಿ ಅಲ್ಲಿಂದ ರೈಲು ಮೂಲಕ ಬುಧವಾರ ಸಾಯಂಕಾಲ ಬೆಂಗಳೂರಿಗೆ ಹೋಗುವ ತಯಾರಿಯಲ್ಲಿದ್ದರು ಎಂದು ತಿಳಿದು ಬಂದಿದೆ.