RNI NO. KARKAN/2006/27779|Tuesday, October 22, 2024
You are here: Home » breaking news » ಖಾನಾಪುರ:ಪ್ರಾಣಿಬಲಿರಹಿತವಾಗಿ ಸಂಪನ್ನಗೊಂಡ ಕಕ್ಕೇರಿಯ ಬಿಷ್ಠಾದೇವಿ ಜಾತ್ರೆ

ಖಾನಾಪುರ:ಪ್ರಾಣಿಬಲಿರಹಿತವಾಗಿ ಸಂಪನ್ನಗೊಂಡ ಕಕ್ಕೇರಿಯ ಬಿಷ್ಠಾದೇವಿ ಜಾತ್ರೆ 

ಪ್ರಾಣಿಬಲಿರಹಿತವಾಗಿ ಸಂಪನ್ನಗೊಂಡ ಕಕ್ಕೇರಿಯ ಬಿಷ್ಠಾದೇವಿ ಜಾತ್ರೆ
ಖಾನಾಪುರ ಅ 6: ವರ್ಷಕ್ಕೊಮ್ಮೆ ಜರುಗುವ ತಾಲೂಕಿನ ಐತಿಹಾಸಿಕ ಕ್ಷೇತ್ರ ಕಕ್ಕೇರಿ ಬಿಷ್ಠಾದೇವಿಯ ಜಾತ್ರೆ ಶನಿವಾರ ನಸುಕಿನ ಜಾವ ಪ್ರಾಣಿಬಲಿರಹಿತವಾಗಿ ಸಂಪನ್ನಗೊಂಡಿದ್ದು, ಈ ಜಾತ್ರೆಯ ಅಂಗವಾಗಿ ದೇವಾಲಯದ ಪ್ರಾಂಗಣದಲ್ಲಿ ಪ್ರಾಣಿಬಲಿ ತಡೆಯಲು ಪೊಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತಗಳು ಯಶಸ್ವಿಯಾದವು.

ಜಾತ್ರೆಗೆ ಸಾಕಷ್ಟು ಮೊದಲೇ ತಾಲೂಕು ಆಡಳಿತ ಈ ಜಾತ್ರೆಯನ್ನು ಪ್ರಾಣಿಬಲಿರಹಿತವಾಗಿ ಆಚರಿಸಬೇಕೆಂದು ಕರೆ ನೀಡಿ ಹಲವಾರು ಸಭೆಗಳನ್ನು ನಡೆಸಿ ಪ್ರಾಣಿ ಬಲಿ ಮಾಡದಂತೆ ಮನವಿ ಮಾಡಿತ್ತು. ಗ್ರಾಮದ ಮಧ್ಯದಲ್ಲಿರುವ ಬಿಷ್ಠಾದೇವಿ ದೇವಸ್ಥಾನದ ಸುತ್ತಮುತ್ತಲಿನ ಅರ್ಧ ಕಿಮೀ ವ್ಯಾಪ್ತಿಯಲ್ಲಿ ಹಿಂದಿನ ವರ್ಷಗಳಲ್ಲಿ ನಡೆಯುತ್ತಿದ್ದ ರೀತಿಯಲ್ಲಿ ಪ್ರಾಣಿ ಬಲಿಯನ್ನು ನಿಷೇಧಿಸಿ ಆದೇಶ ಜಾರಿಗೊಳಿಸಿತ್ತು. ಗ್ರಾಮದಿಂದ ಬೀಡಿ, ಅಳ್ನಾವರ ರಸ್ತೆಗಳ ಕಡೆ ಗ್ರಾಮದಿಂದ 1ಕಿಮೀ ಅಂತರದಲ್ಲಿ ಪೊಲೀಸ್ ಬ್ಯಾರಿಕೇಡುಗಳನ್ನು ಅಳವಡಿಸುವ ಮೂಲಕ ಪೊಲೀಸರು ಪ್ರಾಣಿಬಲಿ ನಡೆಯುವುದನ್ನು ತಡೆದರು.

ಪ್ರತಿ ವರ್ಷದ ಸಂಪ್ರದಾಯದಂತೆ ಮಂಗಳವಾರ ನಸುಕಿನಜಾವ ಸಾವಿರಾರು ಭಕ್ತರು ದೇವಸ್ಥಾನದ ಸರದಿಸಾಲಿನಲ್ಲಿ ನಿಂತು ದೇವಿಗೆ ತೆಂಗಿನಕಾಯಿಯನ್ನು ನೈವೇದ್ಯ ರೂಪದಲ್ಲಿ ಅರ್ಪಿಸಿದರು. ಜಾತ್ರಾ ಸಮಿತಿ ವತಿಯಿಂದ ಜಾತ್ರೆಯ ಅಂಗವಾಗಿ ಡೊಳ್ಳಿನ ಪದಗಳು, ಭಜನಾ ಪದಗಳ ಸ್ಪರ್ಧೆಗಳು ಜರುಗಿದವು. ಜಾತ್ರಾ ಮಹೋತ್ಸವದ ವತಿಯಿಂದ ಜಾತ್ರೆಗೆ ಆಗಮಿಸುವ ಭಕ್ತರ ಸುಲಭ ದರ್ಶನಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಭಕ್ತರಿಗೆ ಮಹಾಪ್ರಸಾದ ವಿತರಣೆ ಮಾಡಲಾಯಿತು.

ಜಾತ್ರೆಯ ಹುರುಪು ಇಮ್ಮಡಿಗೊಳಿಸಿದ ವರುಣ:
ಶನಿವಾರ ಮುಂಜಾನೆ ಕೆಲಕಾಲ ಉತ್ತಮ ಮಳೆ ಸುರಿಯುವ ಮೂಲಕ ಕಕ್ಕೇರಿ ಬಿಷ್ಠಾದೇವಿಯ ಜಾತ್ರೆಗೆ ಕೆಲಕಾಲ ತೊಂದರೆಯಾದರೂ ವರುಣನ ಕೃಪೆಯಿಂದ ಜಾತ್ರೆಯಲ್ಲಿ ಭಾಗವಹಿಸಿದ್ದ ಭಕ್ತರ ಹುರುಪು ಇಮ್ಮಡಿಗೊಳಿಸಿತು. ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೇ ಭಕ್ತರು ಸರದಿಯಲ್ಲಿ ನಿಂತು ದೇವಿಯ ದರ್ಶನ ಪಡೆದರು.
ಗ್ರಾಮದ ಹೊರವಲಯದಲ್ಲಿ ಪ್ರಾಣಿಬಲಿ:
ಕಕ್ಕೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಕ್ಕಪಕ್ಕದಲ್ಲಿ, ಕೃಷಿ ಭೂಮಿಗಳಲ್ಲಿ ಬಿಷ್ಠಾದೇವಿಯ ಭಕ್ತರು ದೇವಿಯ ಹೆಸರಲ್ಲಿ ಪ್ರಾಣಿಬಲಿ ನಡೆಸಿದರು. ಪೊಲೀಸರ ಬಿಗಿ ಭದ್ರತೆಯ ನಡುವೆಯೂ ಸುರಪುರ, ಭುರಣಕಿ, ಘಷ್ಟೊಳ್ಳಿ, ಚುಂಚವಾಡ ರಸ್ತೆಗಳಲ್ಲಿ ದೇವಿಯ ಹೆಸರಲ್ಲಿ ಕುರಿಗಳನ್ನು ಕಡಿದರು. ಹುಂಜಗಳನ್ನು ಕೊಂದು ಅವುಗಳ ರೆಕ್ಕೆಪುಕ್ಕಗಳನ್ನು ರಸ್ತೆಯ ಅಕ್ಕಪಕ್ಕ ಎಸೆದರು. ಕಕ್ಕೇರಿಯ ಸುತ್ತಮುತ್ತ ಪ್ರಾಣಿಬಲಿ ನಡೆಯದಿದ್ದರೂ ಗ್ರಾಮದ ಹೊರವಲಯದ ಹೊಲಗಳಲ್ಲಿ, ರಸ್ತೆಬದಿಯಲ್ಲಿ ಪ್ರಾಣಿಬಲಿ ನಡೆಯಿತು. ರಸ್ತೆ ಮೇಲೆ ಬಿದ್ದಿದ್ದ ರಕ್ತವನ್ನು ತುಳಿದುಕೊಂಡೇ ಭಕ್ತರು ದೇವಾಲಯಕ್ಕೆ ಆಗಮಿಸಿದರು.

ಶಿವಾನಂದ ಉಳ್ಳೇಗಡ್ಡಿ : ತಹಸೀಲ್ದಾರ್

ಕಕ್ಕೇರಿ ಜಾತ್ರೆಯಲ್ಲಿ ಕೆಲ ವರ್ಷಗಳ ಹಿಂದೆ ದೇವಾಲಯದ ಗೋಪುರಕ್ಕೆ ಕೋಳಿಗಳನ್ನು ಹಾರಿಬಿಡುವ ಮೂಲಕ ಹಿಂಸಾ ತತ್ವವನ್ನು ಅನುಸರಿಲಾಗುತ್ತಿತ್ತು. ಈ ವರ್ಷ ತಾಲೂಕು ಆಡಳಿತದ ವತಿಯಿಂದ ದೇವಾಲಯದ ಸುತ್ತಮುತ್ತ ಪ್ರಾಣಿ ಹಿಂಸೆಯನ್ನು ಮಾಡದಂತೆ ಕಟ್ಟುನಿಟ್ಟಿನ ಬಂದೋಬಸ್ತ್ ಏರ್ಪಡಿಸಿದ ಪರಿಣಾಮ ಹಿಂಸಾಮುಕ್ತ ಹಾಗೂ ಪ್ರಾಣಿಬಲಿ ರಹಿತ ಜಾತ್ರೆಯನ್ನಾಗಿ ಆಚರಿಸಲಾಯಿತು. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ ವಿಡಿಯೋ ಕಾಮೆರಾಗಳನ್ನು ಬಳಸುವ ಮೂಲಕ ಪ್ರಾಣಿಬಲಿಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಲಾಯಿತು. ಇದಕ್ಕೆ ದೇವಿಯ ಭಕ್ತರೂ ಮತ್ತು ಜಾತ್ರಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಅಂಬೋಜಿ ಹಾಗೂ ಸದಸ್ಯರು ಸಹಕಾರ ನೀಡಿದರು.

Related posts: