ಗೋಕಾಕ:ಕೊಳವಿಯಲ್ಲಿ ಮಾತೃಪೂರ್ಣ ಯೋಜನೆಗೆ ಚಾಲನೆ
ಕೊಳವಿಯಲ್ಲಿ ಮಾತೃಪೂರ್ಣ ಯೋಜನೆಗೆ ಚಾಲನೆ
ಗೋಕಾಕ ಅ 3 : ತಾಲೂಕಿನ ಕೊಳವಿ ಗ್ರಾಮದ ಬಡ್ಸ್ ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಸೋಮವಾರದಂದು ಮಾತೃಪೂರ್ಣ ಯೋಜನೆಗೆ ತಾಪಂ ಸದಸ್ಯೆ ಮಹಾನಂದಾ ಬಡಿಗವಾಡ ಹಾಗೂ ಗ್ರಾಪಂ ಅಧ್ಯಕ್ಷೆ ಮಹಾದೇವಿ ಹಟ್ಟಿಗೌಡರ ಚಾಲನೆ ನೀಡಿದರು.
ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿ ನಸ್ರಿನ್ ಕೊಣ್ಣುರ ಅವರು ಮಾತನಾಡಿ, ಗರ್ಭಿಣಿ ಮಹಿಳೆ ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ, ರಕ್ತಹೀನತೆ, ಕುಂಠಿತ ಬೆಳವಣಿಗೆಯನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಮಾತೃಪೂರ್ಣ ಯೋಜನೆಯನ್ನು ಜಾರಿಗೆ ತಂದಿದ್ದು, ಗರ್ಭಿಣಿ ಮಹಿಳೆ ಅಂಗನವಾಡಿ ಕೇಂದ್ರದಲ್ಲಿ ಹೆಸರು ನೊಂದಾಯಿಸಿದ ದಿನದಿಂದ ಹೆರಿಗೆ ನಂತರ 6 ತಿಂಗಳ ವರೆಗೆ ಬಿಸಿಯೂಟ ತಿಂಗಳಲ್ಲಿ 25 ನೀಡಲಾಗುವುದು, ಪ್ರೋಟಿನ್ ಕಾಲ್ಸಿಯಂ, ಕಬ್ಬಿಣ, ಪೋಲಿಕ್ ಆಮ್ಲ, ಜಂತುಹುಳು ನಿವಾರಣೆ ಮಾತ್ರೆಗಳ ಸೇವೆನೆ ಕುರಿತು ಮಾಹಿತಿಯನ್ನು ನೀಡಿ, ಗರ್ಭಿಣಿಯರ ತೂಕದ ಜೊತೆಗೆ ಆರೋಗ್ಯದ ಕಡೆಗೆ ಗಮನ ನೀಡಲಾಗುವುದು. ಸರ್ಕಾರದ ಮಹತ್ವಾಂಕ್ಷೆಯ ಯೋಜನೆಯನ್ನು ಗರ್ಭಿಣಿಯರು, ಬಾಣಂತಿಯರು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಬಾಳಪ್ಪ ಅಂಗಡಿ, ವಿಠ್ಠಲ ತಳಕಟ್ನಾಳ, ಬಾಳವ್ವ ತಳವಾರ, ಮುಖಂಡರಾದ ಸೋಮಪ್ಪ ಸ್ವಾಮಿಗೋಳ, ಮಹೇಶ ಪಾತ್ರೋಟ, ಕರೆಪ್ಪ ಬಡಿಗವಾಡ, ರಾಮಗೌಡ ಬಿರಾದಾರ, ಆನಂದ ಹಟ್ಟಿಗೌಡರ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಸೇರಿದಂತೆ ಗ್ರಾಮಸ್ಥರು ಇದ್ದರು.