RNI NO. KARKAN/2006/27779|Friday, May 9, 2025
You are here: Home » ವಿಶೇಷ ಲೇಖನ » ಪುಟ್ಟ ಬಾಲಕನ ದೊಡ್ಡ ಸಾಹಸ

ಪುಟ್ಟ ಬಾಲಕನ ದೊಡ್ಡ ಸಾಹಸ 

ಪುಟ್ಟ ಬಾಲಕನ ದೊಡ್ಡ ಸಾಹಸ

 ವಿಶೇಷ ಲೇಖನ 

ಸಾಧಿಕ ಹಲ್ಯಾಳ (ಸಂಪಾದಕರು)

 

ಈ ಪೋರನಿಗಿನ್ನು ಮೀಸೆನೆ ಬಂದಿಲ್ಲ. ಆದರೂ ಎಲ್ಲರ ಹುಬ್ಬೇರುವಂತೆ ಸಾಹಸ ಮಾಡುತ್ತಾನೆ. ಕಣ್ಣಿಗೆ ಬಟ್ಟೆಕಟ್ಟಿಕೊಂಡು ಗುಡ್ಡಗಾಡು ಪ್ರದೇಶಗಳನ್ನು ಸರಸರನೆ ಹತ್ತಿ ಇಳಿಯುತ್ತಾನೆ. ಯಾರು ಈ ಪುಟಾಣಿ ಅಂತೀರಾ ಅವನ ಸಾಹಸದ ಕುರಿತು ಒಂದು ರಿಪೋರ್ಟ ಇಲ್ಲಿದೆ ಓದಿ.
ಗೋಕಾಕ ನಗರದ 12 ವರ್ಷದ ಈ ಪುಟ್ಟ ಬಾಲಕನ ಹೆಸರು ಮಹ್ಮದ ಅಹ್ಮದಾನ ಖಾನ ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಕೆ.ಎಲ್.ಇ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಾನೆ. ಎಲ್ಲರೂ ಕಣ್ತೆರೆದು ಸಾಧನೆ ಮಾಡಿದರೆ ಈತನು ಕೊಂಚ ಡಿಫರೆಂಟ್. ಈತ ಕಣ್ಣಿಗೆ ಪಟ್ಟಿಕಟ್ಟಿಕೊಂಡು ಸಾಹಸಕ್ಕೆ ಇಳಿಯುತ್ತಾನೆ. ಇವನು ಸಾಹಸಕ್ಕೆ ಇಳಿದರೆ ನೋಡುವವರ ಮೈ ಝುಮ್ಮೆನ್ನುತ್ತದೆ. ಬೆಟ್ಟದ ಮೇಲಿಂದ ಕಣ್ಕಟ್ಟಿಕೊಂಡೆ ಸರಸರನೆ ಇಳಿಯುತ್ತಾನೆ. ಬೆಟ್ಟಗುಡ್ಡಗಳ ಮೇಲೆ ಜೀಪ್ ಓಡಿಸುತ್ತಾನೆ. ಗೋಕಾಕಿನ ಈ ಹುಡಗ ಚಿಕ್ಕಂದಿನಿಂದಲೇ ಸಾಹಸ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿದ್ದಾನೆ.
ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಬರೀ ಅಭ್ಯಾಸ, ಅಭ್ಯಾಸ ಅಂತಾ ಪುಸ್ತಕದ ಹುಳವನ್ನಾಗಿಸಲು ಹಾತೊರೆದು ತಮ್ಮ ಮಕ್ಕಳು ತರಗತಿಯಲ್ಲಿ ಹೆಚ್ಚಿನ ಮಾಕ್ರ್ಸ್ ಪಡೆದುಕೊಳ್ಳಬೇಕೆಂದು ಬಯಸುತ್ತಾರೆ. ಆದರೆ ಈ ಬಾಲಕ ತನ್ನ ಓದಿನ ಜೊತೆಗೆ ಸಾಹಸಮಯ ಕ್ರೀಡೆಗಳತ್ತ ತನ್ನನ್ನು ತೊಡಗಿಸಿಕೊಂಡು ಬಾಲಕನಿರುವಾಗಲೆ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾನೆ. ಇಂತಹ ಸಾಹಸಗಳು ಒಂದು ಕಡೆಯಾದರೆ ಅದನ್ನು ನೋಡಲು ಸಹ ತಮ್ಮ ಮಕ್ಕಳಿಗೆ ಪಾಲಕರೂ ಕಳಿಸುವುದೇ ವಿರಳ. ಅಂತಹ ಪಾಲಕ ಮತ್ತು ಬಾಲಕರಿಗೆ ಈ ಪುಟ್ಟ ಅಹ್ಮದಾನ ಖಾನ ಸ್ಪೂರ್ತಿಯಾಗಿದ್ದಾನೆ.
ಮಹ್ಮದ ಅಹ್ಮದಾನ ಖಾನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹಗ್ಗ ಹಿಡಿದು ಗೋಕಾಕ ಫಾಲ್ಸ ಬೆಟ್ಟವನ್ನು ಸರಸರನೆ ಇಳಿದು ಮತ್ತೆ ಹತ್ತುತ್ತಾನೆ. ಈತನ ಉತ್ಸಾಹ ಈತನಲ್ಲಿರುವ ಸಾಹಸದ ಕ್ರೇಜ್ ತೋರಿಸುತ್ತದೆ. ಹೀಗೆ ಹಗ್ಗವನ್ನು ಹಿಡಿದ ಬೆಟ್ಟ ಹತ್ತಿ ಇಳಿಯುವಾಗ ಈತನ ಮುಖದಲ್ಲಿ ಸ್ವಲ್ಪವೂ ಆಯಾಸ ಇರುವುದಿಲ್ಲ. ಬದಲಾಗಿ ನಗುನಗುತ್ತಾ ಎಲ್ಲರತ್ತ ಗೆಲುವಿನ ಕೈ ಸನ್ನೆ ತೋರಿಸಿ ಸಾಹಸಕ್ಕೆ ಇಳಿಯುತ್ತಾನೆ.
ಇನ್ನೂ ಅಹ್ಮದಾನ ಖಾನ ಡ್ರೈವಿಂಗ್ ಕೂಡಾ ಅದ್ಭುತಗಳಿಂದ ಕೂಡಿದೆ. ಕಣ್ಣಿಗೆ ಬಟ್ಟೆಕಟ್ಟಿಕೊಂಡು ಪಕ್ಕದ ಸೀಟಿನಲ್ಲಿ ತಂದೆ ಯೂಸೂಫಖಾನರನ್ನು ಕೂಡ್ರಿಸಿಕೊಂಡು ಗೋಕಾಕ ಫಾಲ್ಸ, ಯೋಗಿಕೊಳ್ಳಗಳ ಬೆಟ್ಟದಲ್ಲಿ ಆಪರೋಡ ಡ್ರೈವಿಂಗ್ ಮಾಡುತ್ತಾನೆ. ನಿಧಾನವಾಗಿ ಜೀಪನ್ನು ಬೆಟ್ಟದಿಂದ ಕೆಳಿಗಿಳಿಸುತ್ತಾನೆ.ಆಟ ಪಾಠಗಳೊಂದಿಗೆ ಅಹ್ಮದಾನ ಖಾನ ಅಡವೇಂಜರ್ ಸ್ಟಂಟ್‍ಗಳಿಗೆ ತಮ್ಮ ಸಮಯವನ್ನು ಮುಡಾಪಾಗಿಟ್ಟು ಎಲ್ಲವನ್ನೂ ಕಲಿತಿದ್ದಾನೆ. ತನ್ನ 7ನೇ ವಯಸ್ಸಿನಲ್ಲಿ ಇಂತಹ ಖತರನಾಕ ಸ್ಟಂಟ್‍ಗಳನ್ನು ಮಾಡಲು ತೊಡಗಿದ ಈತನನ್ನು ಗುರುತಿಸಿದ ಅಹ್ಮದಾನ ಖಾನನ ತಂದೆ ಯೂಸೂಫಖಾನ ಈತನನ್ನು ಅಡವೇಂಜರ್ ಸ್ಟಂಟ್‍ಗಳನ್ನು ಮಾಡಲು ತರಬೇತಿ ನೀಡಿ, ಪ್ರೋತ್ಸಾಹ ನೀಡತೊಡಗಿದರು. ತಂದೆಯ ಪ್ರೋತ್ಸಾಹದಿಂದ ಈಜು, ಸ್ಟಂಟ್, ಜೀಪ ಡ್ರೈವಿಂಗ್, ರ್ಯಾಪ್ಟಿಂಗ್, ಬೈಕ್ ರೈಡಿಂಗ್, ಸೈಕ್ಲಿಂಗ್, ರೀವರ್ ಕ್ರಾಸಿಂಗ್ ಸೇರಿದಂತೆ ಇನ್ನೀತರ ಸ್ಟಂಟ್‍ಗಳನ್ನು ಮಾಡುವುದನ್ನು ಕಲಿತ ಅಹ್ಮದಾನ ಖಾನ ಮತ್ತೇ ಹಿಂತಿರುಗಿ ನೋಡಲೇ ಇಲ್ಲ. 5 ವರ್ಷದಲ್ಲಿ ಅಂದರೆ ತನ್ನ 12ನೇ ವಯಸ್ಸಿನಲ್ಲಿಯೆ ಅದ್ಭುತ ಸಾಧನೆಗೆ ಮುನ್ನುಡಿ ಬರೆದಿದ್ದಾನೆ.

ವಿವಿಧ ಭಂಗಿಗಳಲ್ಲಿ ಸ್ಟಂಟಮಾಡಲು ಸಿದ್ದವಾಗಿರುವ ಅಹ್ಮದಾನ

ಈತನಲ್ಲಿಯ ಅಗಾಧ ಶಕ್ತಿಯನ್ನು ಕಂಡ ಗೋಕಾಕಿನ ಎಫಿಶಿಯಂಟ್ ಬ್ರೇನಿಯ ನಿರ್ದೇಶಕ ಮಲ್ಲಿಕಾರ್ಜುನ ಕರಜಗಿಮಠ ಈತನಿಗೆ ಎಲ್ಲಾ ಸ್ಟಂಟಗಳನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಾಡುವ ತರಬೇತಿಯನ್ನು ನೀಡಿದ್ದಾರೆ.
ತನ್ನ 7ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಗೋಕಾಕ ಫಾಲ್ಸನ 220 ಅಡಿ ಬೆಟ್ಟದಿಂದ ರ್ಯಾಪಟಿಂಗ್ ಮಾಡಿದ ಕೀರ್ತಿ ಇತನದು. ಭಾರತದಲ್ಲಿ ಅಡವೇಂಜರ ಸ್ಟಂಟಗಳನ್ನು ಆರ್ಮಿಯಲ್ಲಿ ಅದರಲ್ಲಿಯೂ ಬ್ಲಾಕ್ ಕಮಾಂಡೋಗಳು ಮಾತ್ರ ರ್ಯಾಪಟಿಂಗ್ ಅಂತಹ ಸಾಹಸಮಯ ಸ್ಟಂಟ್‍ಗಳನ್ನು ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರುತ್ತಾರೆ. ಇಂತಹ ಅಡವೇಂಜರ ಸ್ಟಂಟ್‍ಗಳನ್ನು ಮಾಡುವವರ ಎದೆಗುಂಡಿಗೆ ಗಟ್ಟಿಯಾಗಿರಬೇಕು. ಇದಕ್ಕೆ ಸತತ ಪ್ರ್ಯಾಕ್ಟಿಸ್ ಪರಿಶ್ರಮ ಹೀಗೆ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಅಡವೇಂಜರ ಸ್ಟಂಟ್‍ಗಳನ್ನು ತರಬೇತಿ ನೀಡುವ ಮತ್ತು ಆ ಮಕ್ಕಳ ಮೆದುಳಿನ ಶಕ್ತಿಯನ್ನು ಹೆಚ್ಚಿಸುವ ತರಬೇತಿಯನ್ನು ಗೋಕಾಕನಲ್ಲಿ ನೀಡಲಾಗುತ್ತಿದೆ. ಅಹ್ಮದಾನ ಖಾನ ಸೇರಿದಂತೆ ನೂರಾರು ಮಕ್ಕಳಿಗೆ ಗೋಕಾಕಿನ ಎಫಿಶಿಯಂಟ್ ಬ್ರೇನ್ ಸಂಸ್ಥೆ ತರಬೇತಿ ನೀಡುತ್ತಿದೆ. ಆದರೆ ಅಹ್ಮದಾನ ಖಾನ ತಂದೆಯ ಪ್ರೋತ್ಸಾಹ, ಸ್ಪೂರ್ತಿ ಮುಖ್ಯವಾಗಿದೆ. ಇದರಿಂದ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸಾಧನೆ ಮಾಡುವತ್ತ ಮುಖ ಮಾಡಿದ್ದಾನೆ ಎಂಬುವುದು ಇಲ್ಲಿ ಗಮಾನಾರ್ಹ.
ಅಡವೇಂಜರ ಸ್ಟಂಟ್‍ಗಳು ಮಕ್ಕಳನ್ನು ಹೊಸ ಸಾಹಸಕ್ಕೆ ಕರೆದುಕೊಂಡು ಹೋಗುತ್ತವೆ. ಇಂತಹ ಅಡವೇಂಜರ ಸ್ಟಂಟ್‍ಗಳ ಗೀಳನ್ನು ಅಂಟಿಸಿಕೊಳ್ಳುವ ಮಕ್ಕಳು ದೈಹಿಕವಾಗಿ, ಮಾನಸಿಕವಾಗಿ ಗಟ್ಟಿಯಾಗಿರುತ್ತಾರೆ. ಅದರಲ್ಲೂ ಅಹ್ಮದಾನ ಖಾನರ ರೀತಿಯಲ್ಲಿ ತಮ್ಮನ್ನು ಗುರುತಿಸಿಕೊಳ್ಳಬಹುದಾಗಿದೆ.
ಗಡಿನಾಡು ಬೆಳಗಾವಿ ಜಿಲ್ಲೆಯ ಗೋಕಾಕಿನ ಹುಡುಗ ಅಹ್ಮದಾನ ಖಾನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಾಡುವ ಸಾಹಸಗಳು ನಿಜವಾಗಿಯೂ ನೋಡುಗರನ್ನು ತುದಿಗಾಲಿನ ಮೇಲೆ ನಿಲ್ಲಿಸುತ್ತವೆ. ಇಂತಹ ಪ್ರತಿಭೆಗೆ ಇನ್ನಷ್ಟು ಪ್ರೋತ್ಸಾಹ ಸಿಗಬೇಕಿದೆ. ಒಟ್ಟಾರೆ ಪುಟ್ಟ ಬಾಲಕನ ದೊಡ್ಡ ಸಾಹಸಕ್ಕೆ ನಮ್ಮದೊಂದು ಸಲಾಂ.

ಅಹ್ಮದಾನ ಖಾನ ಬಾಲಕ::

” ಕಳೆದು 5 ವರ್ಷದಿಂದ
ರ್ಯಾಪಟಿಂಗ್, ರೀವರ್ ಕ್ರಾಸಿಂಗ್, ಬೈಕ ರೈಡಿಂಗ್, ಸೈಕ್ಲಿಂಗ್, ಆಫ್‍ರೋಡ ಡ್ರೈವಿಂಗ್ ಸೇರಿದಂತೆ ಇನ್ನೀತರ ಅಡವೇಂಜರ ಸ್ಟಂಟ್‍ಗಳನ್ನು ಮಾಡುವುದನ್ನು ನನ್ನ 7ನೇ ವಯಸ್ಸಿನಲ್ಲಿಯೇ ಕಲಿತುಕೊಂಡಿದ್ದೇನೆ. ಇದಕ್ಕೆ ನಮ್ಮ ತಂದೆಯವರ ಸಹಕಾರ ಮತ್ತು ಪ್ರೋತ್ಸಾಹ ದೊರೆತಿದ್ದರಿಂದ ಇಂದು ನಾನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸಾಹಸ ಮಾಡಲು ಸಾಧ್ಯವಾಗಿದೆ”.
ಯೂಸಫಖಾನ ಅಹ್ಮದಾನ ಖಾನ ತಂದೆ ::

“ಅಹ್ಮದಾನ ಖಾನ ಚಿಕ್ಕಂದಿನಿಂದಲೇ ಇಂತಹ ಅಡವೇಂಜರ ಸ್ಟಂಟ್‍ಗಳನ್ನು ಮಾಡಲು ಹೆದರುತ್ತಿರಲಿಲ್ಲ. ಅವನಲ್ಲಿಯ ಸಾಹಸವನ್ನು ಮನಗಂಡು ಅವನಿಗೆ ಎಲ್ಲ ರೀತಿಯ ಸಹಾಯ ಸಹಕಾರ ಪ್ರೋತ್ಸಾಹ ನೀಡುತ್ತಿದ್ದೇನೆ”.

ಮಲ್ಲಿಕಾರ್ಜುನ ಕರಜಗಿಮಠ ::

ಎಫಿಶಿಯಂಟ್ ಬ್ರೇನ್ ಸಂಸ್ಥೆಯ ನಿರ್ದೇಶಕ
“ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ದೇಶದಲ್ಲಿ ಪ್ರಥಮವಾಗಿ ರ್ಯಾಪಟಿಂಗ್, ರೀವರ್ ಕ್ರಾಸಿಂಗ್, ಬೈಕ ರೈಡಿಂಗ್, ಸೈಕ್ಲಿಂಗ್, ಆಫ್‍ರೋಡ ಡ್ರೈವಿಂಗ್ ಸಾಧನೆ ಮಾಡಿರುವ ಅಹ್ಮದಾನ ಖಾನನ ಸಾಹಸ ಇತರರಿಗೆ ಮಾದರಿಯಾಗಿದೆ. ಇವನ ಈ ಸಾಹಸ ಇನ್ನೂ ಹೆಚ್ಚು ಹೆಚ್ಚಾಗಿ ಬೆಳೆಯಲೆಂದು ಹಾರೈಸುತ್ತೇನೆ “

Related posts: