ಮೂಡಲಗಿ:ಮೂಡಲಗಿ ತಾಲೂಕಿಗಾಗಿ ಎಂತಹ ತ್ಯಾಗಕ್ಕೂ ಸಿದ್ಧ : ಮಾಜಿ ಸಚಿವ ಬಾಲಚಂದ್ರ
ಮೂಡಲಗಿ ತಾಲೂಕಿಗಾಗಿ ಎಂತಹ ತ್ಯಾಗಕ್ಕೂ ಸಿದ್ಧ : ಮಾಜಿ ಸಚಿವ ಬಾಲಚಂದ್ರ
ಮೂಡಲಗಿ ಸೆ 18: ಮೂಡಲಗಿ ಹಾಗೂ ಸುತ್ತಮುತ್ತಲಿನ ಪ್ರಮುಖ ಬೇಡಿಕೆಯಾಗಿರುವ ಮೂಡಲಗಿ ತಾಲೂಕು ರಚನೆಯನ್ನು ಸರಕಾರ ಘೋಷಣೆ ಮಾಡಿಯೇ ಮಾಡುತ್ತದೆ. ಆ ನಂಬಿಕೆ ನನಗಿದೆ. ಮೂಡಲಗಿ ತಾಲೂಕಾಗುವದು ಶತ ಸಿದ್ದ. ಇದಕ್ಕಾಗಿ ಎಂತಹ ತ್ಯಾಗಕ್ಕೂ ಬದ್ದನಿರುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸೋಮವಾರರಂದು ಇಲ್ಲಿಯ ಕನ್ನಡ ಗಂಡು ಮಕ್ಕಳ ಶಾಲೆಯ ಆವರಣದಲ್ಲಿ ನೂತನವಾಗಿ ಆರಂಭಗೊಂಡ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಶಿಶು ಅಭಿವೃದ್ದಿ ಯೋಜನೆಯ ಮೂಡಲಗಿ ಕಾರ್ಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೂಡಲಗಿ ತಾಲೂಕು ಕೇಳುವದು ನಿಮ್ಮೆಲ್ಲರ ಹಕ್ಕು. ನಿಮ್ಮ ಹಕ್ಕುಗಳಿಗೆ ಗೌರವಿಸುತ್ತೇನೆ. ಮೂಡಲಗಿ ತಾಲೂಕು ರಚನೆಗಾಗಿ ಕಳೆದ ಮೂರು ದಶಕದಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ತಾಲೂಕು ಆಗಬೇಕೆಂಬುದು ಪ್ರತಿಯೊಬ್ಬರ ಕನಸು ಕೂಡ. ನಾಗರೀಕರ ಆಶಯದಂತೆ ಮೂಡಲಗಿ ಹೊಸ ತಾಲೂಕು ರಚನೆಯಾಗುತ್ತೆ. ಇದರಲ್ಲಿ ಯಾರಿಗೂ ಯಾವ ಅನುಮಾನವೂ ಬೇಡವೆಂದು ಹೇಳಿದರು.
ಮೂಡಲಗಿ ನಾಗರೀಕರ ಬೇಡಿಕೆಯನ್ನು ಇಡೇರಿಸುವದು ನನ್ನ ಆಧ್ಯ ಕರ್ತವ್ಯ. ಸೆ.25ರೊಳಗೆ ಬೆಂಗಳೂರಿಗೆ ನಿಯೋಗವೊಂದನ್ನು ಕರೆದೊಯ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೆಟ್ಟಿ ಮಾಡಿ ಮನವಿ ಮಾಡಿಕೊಳ್ಳೋಣ. ಕೇವಲ ಸಂಪುಟ ಸಭೆಯಲ್ಲಿ ಮೂಡಲಗಿಗೆ ಅನುಮೋದನೆ ಮಾತ್ರ ಬಾಕಿ ಇದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಒತ್ತಡ ಹೇರೋಣ. ಅವರು ಕೂಡಾ ಮೂಡಲಗಿಗೆ ಬೆಂಬಲ ನೀಡಿದ್ದಾರೆ. ಒಂದು ವೇಳೆ ಸರಕಾರ ವಿಳಂಬ ನೀತಿ ಅನುಸರಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಪುನರ್ರಚ್ಚಿಸಿದರು.
ಮೂಡಲಗಿಯನ್ನು ತಾಲೂಕಾ ರಚಿಸುವ ಸಂಬಂಧ ತಾಲೂಕಾ ಮಟ್ಟದ ಬಹುತೇಕ ಸರಕಾರಿ ಕಛೇರಿಗಳನ್ನು ಸ್ಥಳಾಂತರ ಮಾಡಲಾಗಿದೆ. ಇನ್ನೊಂದು ತಿಂಗಳೊಳಗೆ ಉಪನೋಂದಣಿ ಕಛೇರಿಯನ್ನು ಮೂಡಲಗಿಯಲ್ಲಿ ಪ್ರಾರಂಭಿಸಲಾಗುವದು ಎಂದು ಹೇಳಿದರು.
ಮೂಡಲಗಿ ತಾಲೂಕು ಅಧಿಕೃತವಾಗಿ ಘೋಷಿಸಿದ ಬಳಿಕ ಮೂಡಲಗಿಯಲ್ಲಿ ಶ್ರೀಪಾದಬೋಧ ಸ್ವಾಮಿಜಿ ನೇತೃತ್ವದಲ್ಲಿ ಬೃಹತ್ ಪ್ರಮಾಣದಲ್ಲಿ ವಿಜಯೋತ್ಸವನ್ನು ಆಚರಿಸೋಣ. ಈಗಾಗಲೇ ನಡೆಯುತ್ತಿರುವ ಹೋರಾಟದಲ್ಲಿ ಕೆಲವರು ನನ್ನ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕು ಇದೆ. ಆದರೆ ಮೂಡಲಗಿ ತಾಲೂಕು ಕೈಬಿಟಿರುವದಲ್ಲಿ ನನ್ನ ಯಾವ ಪಾತ್ರವೂ ಇಲ್ಲ. ಆದರೆ ಇದನ್ನೆ ಬಂಡವಾಳವನ್ನಿಟ್ಟುಕೊಂಡು ಮಾತನಾಡುತ್ತಿರುವವರಿಗೆ ಉತ್ತರ ನೀಡಬೇಕಿದೆ. ಅದಕ್ಕೆ ನನಗೂ ಮಾತನಾಡೋಕೆ ವೇದಿಕೆ ಕಲ್ಪಿಸಿಕೊಡಿ ಎಂದು ಕೋರಿದರು.
ಎಲ್ಲಕ್ಕಿಂತ ಹೆಚ್ಚು ದೇವರನ್ನು ನಂಬಿ ಬದುಕುತ್ತಿದ್ದೇನೆ. ದೇವರ ಮೇಲೆ ಪ್ರಮಾಣ ಮಾಡಿ ಹೇಳಿದರೂ ಇಲ್ಲಿನ ಜನ ನಂಬುತ್ತಿಲ್ಲ. ಹೀಗಾಗಿ ತಾಲೂಕೂ ಆದೇಶ ಪತ್ರವನ್ನು ತೆಗೆದುಕೊಂಡು ವೇದಿಕೆಗೆ ಬರುತ್ತೇನೆ ಎಂದು ಹೇಳಿದರು.
ಪುರಸಭೆ ಅಧ್ಯಕ್ಷೆ ವಿರುದ್ದ ಪ್ರತಿಭಟನೆ: ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸಿದ ಹೋರಾಟ ಸಮಿತಿಯ ಪ್ರಮುಖರು ಪುರಸಭೆ ಅಧ್ಯಕ್ಷರ ವಿರುದ್ದ ಪ್ರತಿಭಟನೆಗೆ ಇಳಿದರು. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಹೀಗಾಗಿ ಕಾರ್ಯಕ್ರಮದಲ್ಲಿ ಕೆಲ ಕಾಲ ಗೊಂದಲ ಉಂಟಾಯಿತು. ಪ್ರತಿಭಟನಾ ಕಾರರು ಅಧ್ಯಕ್ಷೆ ಕಮಲವ್ವಾ ಹಳಬರ ಅವರನ್ನು ವೇದಿಕೆಯಿಂದ ಕೆಳಗಿಳಿಸಿದರು. ನಂತರ ಮಧ್ಯ ಪ್ರವೇಶಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಿ ಅಧ್ಯಕ್ಷರಿಗೆ ರಾಜಿನಾಮೆ ನೀಡಿ ಹೋರಾಟದಲ್ಲಿ ಭಾಗಿಯಾಗುವಂತೆ ಸೂಚನೆ ನೀಡಿದರು.
ಸಾನಿಧ್ಯವನ್ನು ಶ್ರೀ ಶ್ರೀಪಾದಬೋಧ ಸ್ವಾಮಿಜಿ ವಹಿಸಿ ಆಶೀರ್ವಚನ ನೀಡಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸೋಮವಾರದಂದು ಮೂಡಲಗಿಯಲ್ಲಿ ಹೊಸದಾಗಿ ಆರಂಭಗೊಂಡ ಶಿಶು ಅಭಿವೃದ್ದಿ ಯೋಜನೆಯ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದರು.
ರವಿ ಸೋನವಾಲ್ಕರ, ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಎಸ್.ಆರ್.ಸೋನವಾಲ್ಕರ, ಬಿ.ಬಿ.ಹಂದಿಗುಂದ, ನಿಂಗಪ್ಪ ಪಿರೋಜಿ, ಹನಮಂತ ತೇರದಾಳ, ಅಜೀಜ ಡಾಂಗೆ ಹಾಗೂ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.
ಶಿಶು ಅಭಿವೃದ್ಧಿ ಅಧಿಕಾರಿ ವಾಯ್.ಎಮ್.ಗುಜನಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಇಲಾಖೆಯ ಯೋಜನೆಗಳನ್ನು ವಿವರಿಸಿದರು.