ಗೋಕಾಕ:ಅರಬಾಂವಿ, ಕೌಜಲಗಿ ಹೋಬಳಿ ವ್ಯಾಪ್ತಿಯ 58 ಗ್ರಾಮಗಳನ್ನು ಗೋಕಾಕ ತಾಲೂಕಿನಲ್ಲಿ ಮುಂದುವರೆಸಲು ಆಗ್ರಹ : ವಿವಿಧ ಗ್ರಾಮಸ್ಥರಿಂದ ಮುಖ್ಯಮಂತ್ರಿಗಳಿಗೆ ಮನವಿ
ಅರಬಾಂವಿ, ಕೌಜಲಗಿ ಹೋಬಳಿ ವ್ಯಾಪ್ತಿಯ 58 ಗ್ರಾಮಗಳನ್ನು ಗೋಕಾಕ ತಾಲೂಕಿನಲ್ಲಿ ಮುಂದುವರೆಸಲು ಆಗ್ರಹ : ವಿವಿಧ ಗ್ರಾಮಸ್ಥರಿಂದ ಮುಖ್ಯಮಂತ್ರಿಗಳಿಗೆ ಮನವಿ
ಗೋಕಾಕ ಸೆ 12: ಕೌಜಲಗಿ ಹೋಬಳಿ, ಅರಭಾಂವಿ ಹೋಬಳಿಯ ಕೆಲ ಗ್ರಾಮಗಳು ಹಾಗೂ ಅರಭಾಂವಿ ಮತ್ತು ಕಲ್ಲೋಳಿ ಪಟ್ಟಣ ಪಂಚಾಯತಿಯನ್ನು ಗೋಕಾಕ ತಾಲೂಕಿನಲ್ಲಿಯೇ ಮುಂದುವರೆಸಲು ಆಗ್ರಹಿಸಿ ಇಂದು ಬೃಹತ್ ಪ್ರತಿಭಟನೆ ನಡೆಸಿ ತಹಶೀಲದಾರರ ಮುಖಾಂತರ ರಾಜ್ಯ ಸರಕಾರಕ್ಕೆ ಮಂಗಳವಾರದಂದು ಮನವಿ ಅರ್ಪಿಸಿದರು.
ಮುಂಜಾನೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿದ ಸಾವಿರಾರು ಗ್ರಾಮಸ್ಥರು ಬೃಹತ್ ಮೆರವಣಿಗೆ ಮೂಲಕ ಬಸವೇಶ್ವರ ವೃತ್ತಕ್ಕೆ ಬಂದು ಕೆಲ ಕಾಲ ರಸ್ತೆ ತಡೆ ನಡೆಸಿ ನಂತರ ಮಿನಿ ವಿಧಾನಸೌಧಕ್ಕೆ ತೆರಳಿ ಬೃಹತ್ ಬಹಿರಂಗ ಸಭೆಯಾಗಿ ಮಾರ್ಪಟ್ಟಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ. ಮಾಜಿ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ ಅವರು ಮೂಡಲಗಿ ತಾಲೂಕಿನಲ್ಲಿ ದೂರವಿರುವ ಹಾಗೂ ಗೋಕಾಕದ ಸಮೀಪವಿರುವ ಗ್ರಾಮಗಳನ್ನು ಸೇರ್ಪಡೆ ಮಾಡಿದ್ದು ಅವೈಜ್ಞಾನಿಕವಾಗಿದೆ. ಇದರಲ್ಲಿ ರಾಜಕೀಯ ಷಡ್ಯಂತ್ರವಿದೆ. ಕೌಜಲಗಿ ಹೋಬಳಿಯ 38 ಗ್ರಾಮಗಳು, ಅರಭಾಂವಿ ಹೋಬಳಿಯ 20 ಗ್ರಾಮಗಳು, ಅರಭಾಂವಿ ಹಾಗೂ ಕಲ್ಲೋಳಿ ಪಟ್ಟಣ ಪಂಚಾಯತ ವ್ಯಾಪ್ತಿಯನ್ನು ಗೋಕಾಕ ತಾಲೂಕುನಲ್ಲಿಯೇ ಮುಂದುವರೆಸಬೇಕೆಂದು ಸರಕಾರಕ್ಕೆ ಆಗ್ರಹಿಸಿದರು.
ಯಾದವಾಡ ಜಿ.ಪಂ. ಸದಸ್ಯ ಗೋವಿಂದ ಕೊಪ್ಪದ ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುತವರ್ಜಿ ವಹಿಸಿ ಮೂಡಲಗಿ ತಾಲೂಕು ಘೋಷಣೆ ಮಾಡಿಸಿದ್ದರು. ಆದರೆ ಕಾಂಗ್ರೆಸ ಸರಕಾರ ಬಂದ ಬಳಿಕ ಮೂಡಲಗಿ ತಾಲೂಕಿನ ಅವೈಜ್ಞಾನಿಕ ರೀತಿಯಲ್ಲಿ ಗ್ರಾಮಗಳ ಸೇರ್ಪಡೆ ಮಾಡುವ ಮೂಲಕ ಸಾರ್ವಜನಿಕರ ಅನುಕೂಲ ಮಾಡಿಕೊಡುವ ತಾಲೂಕುಗಳ ರಚನೆಯ ಉದ್ದೇಶವನ್ನೇ ಹಾಳು ಮಾಡಲಾಗಿದೆ. ಮೂಡಲಗಿ ತಾಲೂಕು ಸಂಬಂಧವಾಗಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬಗ್ಗೆ ಟೀಕೆ ಮಾಡುತ್ತಿರುವದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.
ಎಮ್.ಆರ್.ಭೋವಿ, ಗಣಪತಿ ಇಳಿಗೇರ, ಬಸವರಾಜ ಮಾಳೇದ, ಶಫೀ ಜಮಾದಾರ, ಕಲ್ಲಪ್ಪಗೌಡ ಲಕ್ಕಾರ, ಬಸು ಕಾಡಾಪೂರ ಮಾತನಾಡಿದರು.
ಪ್ರತಿಭಟನೆಯಲ್ಲಿ ಜಿ.ಪಂ. ಸದಸ್ಯರಾದ ಶ್ರೀಮತಿ ಶಶಿಕಲಾ ಸಣ್ಣಕ್ಕಿ, ಶ್ರೀಮತಿಶಕುಂತಲಾ ಪರುಶೆಟ್ಟಿ, ತಾ.ಪಂ. ಸದಸ್ಯರಾದ ಲಕ್ಷಂನ ನೀಲನ್ನವರ, ಸದಾ ದುರಣ್ಣವರ, ಶಾಂತಪ್ಪ ಹಿರೇಮೇತ್ರಿ, ಜಿ.ಪಂ. ಮಾಜಿ ಸದಸ್ಯರಾದ ವಿಠ್ಠಲ ಸವದತ್ತಿ, ಶಂಕರ ಬಿಲಕುಂದಿ, ತಾ.ಪಂ. ಮಾಜಿ ಸದಸ್ಯರಾದ ಸುಭಾಸ ಕೌಜಲಗಿ, ಬಸವರಾಜ ಕೋಣಿ, ಡಿಸಿಸಿ ಬ್ಯಾಂಕ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಭೀಮಶಿ ಭರಮಣ್ಣವರ ,ನ್ಯಾಯವಾದಿ ಮುತ್ತೆಪ್ಪ ಕುಳ್ಳೂರ, ಸುಭಾಸ ಕುರಬೇಟ, ಮಹಾದೇವ ತುಕ್ಕಾನಟ್ಟಿ, ಕಳ್ಳಿಗುದ್ದಿ ಗ್ರಾ.ಪಂ. ಉಪಾಧ್ಯಕ್ಷ ಶಿವನಗೌಡ ಪಾಟೀಲ, ಗ್ರಾ.ಪಂ. ಅಧ್ಯಕ್ಷರಾದ ಯಲ್ಲಪ್ಪಗೌಡ ನ್ಯಾಮಗೌಡ, ರಾಯಪ್ಪ ಬಳೂಲದಾರ, ಶಿವಲಿಂಗ ಬಳಿಗಾರ, ಮುಖಂಡರಾದ ಶಿವಾನಂದ ಲೋಕಣ್ಣವರ, ಮಹೇಶ ಪಟ್ಟಣಶೆಟ್ಟಿ, ಅಶೋಕ ಉದ್ದಪ್ಪನವರ, ರಾಮಣ್ಣ ಮಹಾರಡ್ಡಿ, ಬಾಳು ಗೌಡರ, ಲಕ್ಷ್ಮಣ ಚಂದರಗಿ, ಎಮ್.ಡಿ.ಖಾಜಿ, ಅರಭಾಂವಿ ಪ.ಪಂ. ಉಪಾಧ್ಯಕ್ಷ ರಮೇಶ ಮಾದರ, ಅಡಿವೆಪ್ಪ ಬಿಲಕುಂದಿ ಸೇರಿದಂತೆ ಅನೇಕರು ಇದ್ದರು.
ಕೌಜಲಗಿ ಹೋಬಳಿಯ ಯಾದವಾಡ, ಕಾಮನಕಟ್ಟಿ, ಅವರಾದಿ, ಢವಳೇಶ್ವರ, ಕುಲಗೋಡ, ಕೌಜಲಗಿ, ಕಳ್ಳಿಗುದ್ದಿ, ಗೋಸಬಾಳ, ಬೆಟಗೇರಿ, ಕುಲಗೋಡ, ತಪಶಿ, ತಳಕಟ್ನಾಳ, ತಿಗಡಿ, ಉದಗಟ್ಟಿ, ಮೆಳವಂಕಿ ಹಾಗೂ ಅರಭಾಂವಿ ಹೋಬಳಿಯ ಲೋಳಸೂರ, ನಲ್ಲಾನಟ್ಟಿ, ಬಳೋಬಾಳ, ಹುಣಶ್ಯಾಳ ಪಿ.ಜಿ., ದುರದುಂಡಿ, ರಾಜಾಪೂರ, ಬಡಿಗವಾಡ, ದಂಡಾಪೂರ ಗ್ರಾಮ ಪಂಚಾಯತಿಗಳ ಮತ್ತು ಅರಭಾಂವಿ ಮತ್ತು ಕಲ್ಲೋಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಸಾವಿರಾರು ಗ್ರಾಮಸ್ಥರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಉಪತಹಶೀಲದಾರ ಎಸ್.ಕೆ.ಕುಲಕರ್ಣಿ ಅವರು ಮನವಿ ಸ್ವೀಕರಿಸಿ ಗ್ರಾಮಸ್ಥರ ಭಾವನೆಗಳನ್ನು ಸರಕಾರಕ್ಕೆ ತಿಳಿಸುವದಾಗಿ ಹೇಳಿದರು.

ಕೌಜಲಗಿ ಹೋಬಳಿ, ಅರಭಾಂವಿ ಹೋಬಳಿಯ ಕೆಲ ಗ್ರಾಮಗಳು ಹಾಗೂ ಅರಭಾಂವಿ ಮತ್ತು ಕಲ್ಲೋಳಿ ಪಟ್ಟಣ ಪಂಚಾಯತಿಯನ್ನು ಗೋಕಾಕ ತಾಲೂಕಿನಲ್ಲಿಯೇ ಮುಂದುವರೆಸಲು ಆಗ್ರಹಿಸಿ ಗೋಕಾಕ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸುತ್ತಿರುವದು.
ಗೋಕಾಕ ಸಿಪಿಐ ಎಮ್.ಎಸ್.ತಾನಪ್ಪಗೋಳ ಅವರ ನೇತೃತ್ವದಲ್ಲಿ ಪಿಎಸ್‍ಐಗಳಾದ ಆರ್.ಎಸ್.ಜಾನಾರ, ಗಣಪತಿ ಕೊಗನೊಳ್ಳಿ ಅವಶ್ಯಕ ಪೋಲೀಸ ಬಂದೋಬಸ್ತ ಏರ್ಪಡಿಸಿದರು.
ಕೌಜಲಗಿ ತಾಲೂಕು ಘೋಷಣೆ ಮಾಡುವಂತೆ ಮನವಿ :
ತಾಲೂಕು ಸ್ಥಾನಮಾನ ಹೊಂದಲು ಅತ್ಯಂತ ಯೋಗ್ಯ ಸ್ಥಳವಾದ ಕೌಜಲಗಿ ಹೋಬಳಿ ಮಟ್ಟದ ಗ್ರಾಮಗಳು ಮತ್ತು ರಾಮದುರ್ಗ, ಸವದತ್ತಿ ತಾಲೂಕಿನ ಕೆಲ ಗ್ರಾಮಗಳನ್ನು ಸೇರಿಸಿ ಕೌಜಲಗಿ ತಾಲೂಕು ಘೋಷಣೆ ಮಾಡಬೇಕೆಂದು ಆಗ್ರಹಿಸಿ ಇಂದು ನಿಯೋಜಿತ ಕೌಜಲಗಿ ತಾಲೂಕಾ ರಚನಾ ಹೋರಾಟ ಸಮಿತಿ ವತಿಯಿಂದ ಸಮಿತಿಯ ಅಧ್ಯಕ್ಷ ಎಮ್.ಆರ್. ಭೋವಿ ಅವರು ಸರಕಾರಕ್ಕೆ ಮನವಿ ಸಲ್ಲಿಸಿದರು.
ಕಳೆದ ಐದು ದಶಕಗಳಿಂದ ಕೌಜಲಗಿಗೆ ತಾಲೂಕು ಸ್ಥಾನ ನೀಡಬೇಕೆಂದು ಆ ಭಾಗದ ಜನರು ಸತತ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಅಲ್ಲದೆ ತಾಲೂಕು ಪುನರ್ರಚನೆಗಾಗಿ ರಚಿಸಲಾದ ಎಲ್ಲ ಆಯೋಗಗಳು ಕೌಜಲಗಿ ತಾಲೂಕು ಸ್ಥಳವಾಗಲು ಯೋಗ್ಯವಾಗಿದೆ ಎಂದು ಶಿಫಾರಸು ಮಾಡಿದ್ದರೂ ರಾಜ್ಯ ಸರಕಾರ ಈ ಭಾಗದ ಜನತೆಯ ಕೂಗಿಗೆ ಸ್ಪಂದಿಸಿಲ್ಲ. ಅದಕ್ಕಾಗಿ ಕೂಡಲೇ ಕೌಜಲಗಿ ತಾಲೂಕು ಘೋಷಣೆ ಮಾಡುವಂತೆ ಮನವಿಯಲ್ಲಿ ಕೋರಲಾಗಿದೆ.