ಗೋಕಾಕ:ಕಹಿ ಘಟನೆಯನ್ನು ಮೆಟ್ಟಿ ನಿಂತು ಡಿ.ವೈ.ಎಸ್.ಪಿ ಹುದ್ದೆಗೇರಿದ ಜಾವೇದ ಇನಾಮದಾರ

ಕಹಿ ಘಟನೆಯನ್ನು ಮೆಟ್ಟಿ ನಿಂತು ಡಿ.ವೈ.ಎಸ್.ಪಿ ಹುದ್ದೆಗೇರಿದ ಜಾವೇದ ಇನಾಮದಾರ
ವಿಶೇಷ ವರದಿ: ಸಾದಿಕ ಎಂ ಹಲ್ಯಾಳ
ನಮ್ಮ ಬೆಳಗಾವಿ ಇ – ವಾರ್ತೆ, ವಿಶೇಷ ಗೋಕಾಕ ಡಿ 14 :
ಕುಟುಂಬದ ಬಡತನವು ಮಕ್ಕಳ ವಿದ್ಯಾಭ್ಯಾಸಕ್ಕೆ ಎಂದಿಗೂ ತೊಡಕಾಗಬಾರದು ಎಂಬ ಆಶಯದೊಂದಿಗೆ ಭಾರತ ಸರಕಾರವು ಎಲ್ಲ ಮಕ್ಕಳಿಗೂ 14ನೇ ವಯಸ್ಸಿನವರೆಗೂ ಉಚಿತ ಶಿಕ್ಷಣ ನೀಡಬೇಕೆಂದು ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ಸರಕಾರಿ ಶಾಲೆಗಳಲ್ಲಿ ಈ ಅಭಿಯಾನವನ್ನು ಜಾರಿಗೆ ತಂದಿದೆ. ಪದವಿಪೂರ್ವ, ಉನ್ನತ ಶಿಕ್ಷಣಕ್ಕಾಗಿ ಹಲವು ಸ್ಕಾಲರ್‌ಶಿಪ್‌ಗಳಿದ್ದರೂ ಅವು ಪೂರ್ತಿ ಶುಲ್ಕವನ್ನು ತುಂಬಲಾರವು. ಇದು ಬಡ ವಿದ್ಯಾರ್ಥಿಗಳಿಗೆ ಕನಿಷ್ಟ ಶಿಕ್ಷಣ ಪಡೆಯುವುದಕ್ಕಿರುವ ಸೌಲಭ್ಯಗಳಾಗಿವೆ. ಆದರೆ, ಐಎಎಸ್, ಕೆಎಎಸ್ ರೀತಿಯ ತರಬೇತಿಗೆ ಹಲವಾರು ವಿದ್ಯಾರ್ಥಿಗಳಿಗೆ ಹೋಗಲು ಅವರ ಆರ್ಥಿಕ ಬಡತನ ಅಡ್ಡಿಯಾಗುತ್ತದೆ.
ಆದರೆ ವಿಜಯಪೂರ ಜಿಲ್ಲೆಯ ಶೇಗುಣಶಿ ಗ್ರಾಮದ ಯುವಕ ಪ್ರಾಥಮಿಕ ಶಾಲಾ ಶಿಕ್ಷಕ ಜಾವೇದ ಇನಾಮದಾರ ಈ ಎಲ್ಲ ಆರ್ಥಿಕ ಕಷ್ಟಗಳನ್ನೂ ಮೀರಿ ಕೆಎಎಸ್ ಪರೀಕ್ಷೆಯನ್ನು ಬರೆದು, ಉತ್ತೀರ್ಣರಾಗಿ, ಈಗ ಡಿವೈಎಸ್ಪಿಯಾಗಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಅತ್ಯಂತ ಬಡ ಕುಟುಂಬದಲ್ಲಿ ಹುಟ್ಟಿ ತಮ್ಮ ಜೀವನವನ್ನು ಸಾರ್ಥಕ ಗೊಳಿಸಿಕೊಂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿ ತಮ್ಮ ಸರಕಾರಿ ಸೇವೆ ಪ್ರಾರಂಭಿಸಿ ಈಗ ಪ್ರಸ್ತುತ ಗೋಕಾಕ ಉಪ ವಿಭಾಗದ ಡಿವೈಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿರುವ ಜಾವೇದ ಇನಾಮದಾರ ಅವರು ಸಾಧನೆ ಯುವ ಜನಾಂಗಕ್ಕೆ ಮಾದರಿಯಾಗಿದೆ.
ಮೂಲತಃ ವಿಜಯಪೂರ ಜಿಲ್ಲೆಯ ಶೇಗುಣಶಿ ಗ್ರಾಮದ ಕಡುಬಡ ಕುಟುಂಬದಲ್ಲಿ ಜನಿಸಿ ತಮ್ಮ ವಿದ್ಯಾಭ್ಯಾಸವನ್ನು ಅಲ್ಲಿಯೇ ಮುಗಿಸಿ 2010 ರಲ್ಲಿ ಶಿಡ್ಲಭಾವಿ ಗ್ರಾಮದ ಪ್ರಾಥಮಿಕ ಶಾಲೆಗೆ ಶಿಕ್ಷಕರಾಗಿ ತಮ್ಮ ಸರಕಾರಿ ಸೇವೆಯನ್ನು ಪ್ರಾರಂಭಿಸಿ ನಂತರ ಮುಖ್ಯೋಪಾಧ್ಯಾಯರಾಗಿ ಬಡ್ತಿ ಹೊಂದಿದರು.
ಇಷ್ಟಕ್ಕೆ ಸಂತೃಪ್ತಿ ಪಡದ ಜಾವೇದ ಇನಾಮದಾರ ಅವರು ಕೆಎಎಸ್ ಪರೀಕ್ಷೆ ಪಾಸಾಗಿ ದೊಡ್ಡ ಹುದ್ದೆಗಳನ್ನು ಅಂಲಕರಿಸಿ ಸಾರ್ವಜನಿಕರಿಗೆ ಸಹಕಾರಿಯಾಗಬೇಕೆಂಬ ಹಂಬಲದಿಂದ ಶಾಲೆಯ ಬಿಡುವಿನ ವೇಳೆಯಲ್ಲಿ ಇದಕ್ಕಾಗಿ ತಯಾರಿ ನಡೆಸುವ ಸಂಧರ್ಭದಲ್ಲಿ ತಮ್ಮ ಸ್ವ- ಗ್ರಾಮದಲ್ಲಿ ನಡೆದ ಒಂದು ಘಟನೆಯಿಂದ ಹಠಕ್ಕೆ ಬಿದ್ದು ಕೆಎಎಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 10ನೇ ಸ್ಥಾನ ಪಡೆಯುವ ಮುಖಾಂತರ ತಾನು ಹಿಡಿದ ಹಠವನ್ನು ಸಾಧಿಸಿದ ಕೀರ್ತಿಗೆ ಭಾಜನರಾಗಿ ತಮಗೆ ಅವಮಾನ ಮಾಡಿದವರಿಂದಲೇ ಸನ್ಮಾನ ಪಡೆದು ಸಾಧನೆಗೆ ಅಸಾಧ್ಯ ಯಾವುದು ಅಲ್ಲ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ .
ಸಾಧನೆಗೆ ಪ್ರೇರಣೆ : ಜಾವೇದ ಇನಾಮದಾರ ಅವರು ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇವೆಗೆ ಸೇರಿದ ಸಂದರ್ಭದಲ್ಲಿ ಅವರ ಗ್ರಾಮದಲ್ಲಿ ಸರಕಾರಿ ಸೇವೆಗೆ ಆಯ್ಕೆಯಾದ ಎಲ್ಲರನ್ನು ಸತ್ಕರಿಸಲು ಗ್ರಾಮದಲ್ಲಿ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಲಾಗಿತ್ತು. ಆ ಕಾರ್ಯಕ್ರಮಕ್ಕೆ ಜಾವೇದ ಇನಾಮದಾರ ಅವರಿಗೆ ಆಹ್ವಾನ ಮಾಡದೇ ನಿರ್ಲಕ್ಷಿಸಿಲಾಗಿತ್ತು. ಈ ( ನಿರ್ಲಕ್ಷ್ಯ) ಅವಮಾನವನ್ನೇ ಪ್ರೇರಣೆಯಾಗಿ ತಗೆದುಕೊಂಡ ಜಾವೇದ ಇನಾಮದಾರ ಅವರು ಮುಂದೊಂದು ದಿನ ನಾನು ದೊಡ್ಡ ಆಫೀಸರ ಆಗಬೇಕು. ಇದೇ ಜನ ನನ್ನನ್ನು ಮರ್ಯಾದೆಯಿಂದ ಕರೆದು ಸತ್ಕರಿಸಿ, ಗೌರವಿಸಬೇಕು ಎಂದು ಶಫಥಮಾಡಿ ಅಲ್ಲಿಂದ ಸತತ 6 ವರ್ಷಗಳ ಕಾಲ ಶಾಲಾ ಅವಧಿ ಮುಗಿದ ನಂತರ ಶ್ರಮಪಟ್ಟು ಕೆಎಎಸ್ ಪರೀಕ್ಷೆಗೆ ತಯಾರಿ ನಡೆಸಿ 2014 ರಲ್ಲಿ ಮೊದಲ ಸಲ ಕೆಎಎಸ್ ಪರೀಕ್ಷೆ ಬರೆದು ಮೊದಲ ಪ್ರಯತ್ನದಲ್ಲೇ ರಾಜ್ಯಕ್ಕೆ 10 ಸ್ಥಾನ ಪಡೆಯುವ ಮೂಲಕ ಡಿವೈಎಸ್ಪಿಯಾಗಿ ನೇಮಕಗೊಂಡು ವಿಜಯಪೂರ ಅಷ್ಟೇ ಅಲ್ಲ ಇಡೀ ರಾಜ್ಯದ ಜನರ ಗಮನ ಸೆಳೆದಿದ್ದಾರೆ.
ಅವಮಾನ ಮಾಡಿದವರಿಂದಲೇ ಸತ್ಕಾರ : ಸಾಧ್ಯವೇ ಇಲ್ಲ ಎಂದು ಕುಳಿತರೆ ಎನನ್ನು ಸಾಧಿಸಲು ಆಗುವುದಿಲ್ಲ ನಮ್ಮ ಜೀವನದಲ್ಲಿ ನಡೆಯುವ ಅದೆಷ್ಟೋ ಪ್ರಸಂಗಗಳನ್ನು ನಾವು ಮರೆತು ಬಿಡುತ್ತವೆ. ಆದರೆ ಡಿವೈಎಸ್ಪಿ ಜಾವೇದ ಇನಾಮದಾರ ಅವರು ತಮ್ಮೊಂದಿಗೆ ನಡೆದ ಕಹಿ ಘಟನೆಯನ್ನು ಪಾಸಿಟಿವ್ ಆಗಿ ತಗೆದುಕೊಂಡು ಕಠಿಣ ಪರಿಶ್ರಮದಿಂದ ತಮ್ಮ ಶಿಕ್ಷಕ ವೃತ್ತಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿ ಶಾಲಾ ಅವಧಿ ನಂತರ ಹಾಗೂ ಬಿಡುವ ಸಿಕ್ಕಾಗಲೆಲ್ಲ ಕೆಎಎಸ್ ಪರೀಕ್ಷೆಯ ಬಗ್ಗೆ ಓದುವದನ್ನು ಹವ್ಯಾಸವಾಗ ಬೆಳೆಸಿಕೊಂಡು ಅದರಲ್ಲಿ ಪರಿಪೂರ್ಣತೆ ಪಡೆದು ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಸಾಧನೆ ಮಾಡಿ ಡಿವೈಎಸ್ಪಿ ಹುದ್ದೆಯನ್ನು ಅಲಂಕರಿಸಿದ್ದಾರೆ . ಇವರ ಈ ಸಾಧನೆಯನ್ನು ಕಂಡು ಶೇಗುಣಶಿ ಗ್ರಾಮದಲ್ಲಿ ಹಿಂದೊಂದು ದಿನ ಕಾರ್ಯಕ್ರಮ ಆಯೋಜಿಸಿ ಅವರನ್ನು ಅವಮಾನಿಸಿದ ಸಂಘಟಕರೆಲ್ಲರೂ ಸೇರಿ ಡಿವೈಎಸ್ಪಿ ಹುದ್ದೆಗೆ ಆಯ್ಕೆಯಾದ ಜಾವೇದ ಇನಾಮದಾರ ಅವರನ್ನು ಅತ್ಯಂತ ಗೌರವಯುತವಾಗಿ ಕರೆದು ಸನ್ಮಾನಿಸಿದ್ದಾರೆ. ಈ ಸನ್ಮಾನ ಸಮಾಧಾನ ತಂದಿದೆ ಎನ್ನುತ್ತಾರೆ ಡಿವೈಎಸ್ಪಿ ಜಾವೇದ ಇನಾಮದಾರ.
” ಕೆಎಎಸ್ ಪರೀಕ್ಷೆ ತಯಾರಿ ಧೀರ್ಘ ಅವಧಿಯದ್ದು, ಹಾಗಾಗಿ ಮೊದಲು ತಾಳ್ಮೆ ಬೆಳೆಸಿಕೊಳ್ಳುವದರ ಜೊತೆಗೆ ನಾನು ಈ ಬಾರಿಯ ಕೆಎಎಸ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದು ಉತ್ತಮ ಸ್ಥಾನದಲ್ಲಿ ಉತ್ತೀರ್ಣವಾಗುತ್ತೇನೆ ಎಂಬ ಬಲವಾದ ನಂಬಿಕೆಯನ್ನು ಹೊಂದಬೇಕು ಈ ದಿಸೆಯಲ್ಲಿ ಪಠ್ಯಾಧಾರಿತ ವಿಷಯಗಳನ್ನು ಮನನ ಮಾಡಿಕೊಂಡು ಪರೀಕ್ಷೆ ಎದುರಿಸಿದರೆ ಯಶಸ್ವಿಗೊಳಿಸುವುದು ಸುಲಭ. ಶಿಕ್ಷಕ ವೃತ್ತಿಯ ಜೊತೆಗೆ ಕೆಎಎಸ್ ಪರೀಕ್ಷೆ ಬರೆಯಲು ನನ್ನಲ್ಲಿದ ಬಲವಾದ ನಂಬಿಕೆ ಮತ್ತು ಸತತ ಪ್ರಯತ್ನವೇ ಕಾರಣವಾಗಿದ್ದು. ಪರೀಕ್ಷಾರ್ಥಿಗಳು ಈ ಎಲ್ಲ ವಿಷಯಗಳನ್ನು ಮನನ ಮಾಡಿಕೊಂಡರೆ ಯಶಸ್ಸು ಸಾಧಿಸಬಹುದು”.
– ಜಾವೇದ ಇನಾಮದಾರ ಡಿವೈಎಸ್ಪಿ ಗೋಕಾಕ.